ಚಾಮುಂಡಿಬೆಟ್ಟದಲ್ಲಿ ಆಷಾಢ ಶುಕ್ರವಾರಕ್ಕೆ ಸಕಲ ಸಿದ್ಧತೆ

| Published : Jun 25 2025, 11:47 PM IST

ಚಾಮುಂಡಿಬೆಟ್ಟದಲ್ಲಿ ಆಷಾಢ ಶುಕ್ರವಾರಕ್ಕೆ ಸಕಲ ಸಿದ್ಧತೆ
Share this Article
  • FB
  • TW
  • Linkdin
  • Email

ಸಾರಾಂಶ

ದೇವಸ್ಥಾನದಲ್ಲಿ ಮೊಬೈಲ್ ಫೋಟೋ, ರೀಲ್ಸ್ ಮಾಡುವುದು ನಿಷೇಧ ಲಲಿತ ಮಹಲ್ ಮೈದಾನದಲ್ಲೇ ದರ್ಶನ ಟಿಕೆಟ್ ಮಾರಾಟ

ಕನ್ನಡಪ್ರಭ ವಾರ್ತೆ ಮೈಸೂರುಆಷಾಢ ಶುಕ್ರವಾರದ ಪೂಜಾ ಕೈಂಕರ್ಯಕ್ಕೆ ಚಾಮುಂಡಿಬೆಟ್ಟದಲ್ಲಿನ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಸಕಲ ಸಿದ್ಧತೆಗಳು ಮಾಡಲಾಗಿದೆ. ಭಕ್ತರು ದೇವರ ದರ್ಶನ ಮಾಡಲು ಅಗತ್ಯ ಮೂಲ ಸೌಲಭ್ಯಗಳನ್ನು ಸಹ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ತಿಳಿಸಿದರು.ಚಾಮುಂಡಿಬೆಟ್ಟದಲ್ಲಿ ಬುಧವಾರ ಸಿದ್ಧತೆ ಕಾರ್ಯಗಳನ್ನು ಪರಿಶೀಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂ.27, ಜು.4, ಜು.11, ಜು.18 ರಂದು ಆಷಾಢ ಶುಕ್ರವಾರ ಹಾಗೂ ಜು.17 ರಂದು ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ ನಡೆಯಲಿದೆ. ಈ ಸಂದರ್ಭದಲ್ಲಿ ಲಕ್ಷಾಂತರ ಮಂದಿ ಭಕ್ತರು ದೇವಿಯ ದರ್ಶನಕ್ಕೆ ಬರುತ್ತಾರೆ. ಅಲ್ಲದೇ ಶನಿವಾರ, ಭಾನುವಾರದಂದು ಹೆಚ್ಚಿನ ಪ್ರಮಾಣದಲ್ಲಿ ಜನ ಆಗಮಿಸುತ್ತಾರೆ. ಹೀಗಾಗಿ ಭಕ್ತಾಧಿಗಳ ಅನುಕೂಲಕ್ಕಾಗಿ ಜಿಲ್ಲಾಡಳಿತದಿಂದ ಸಿದ್ಧತೆ ಸಮರ್ಪಕವಾಗಿ ಮಾಡಲಾಗಿದೆ ಎಂದು ಹೇಳಿದರು.ಆಷಾಢ ಶುಕ್ರವಾರದಂದು ತಾಯಿಯ ದರ್ಶನ ಮಾಡಲು ಯಾವುದೇ ರೀತಿಯ ಪಾಸ್ ವ್ಯವಸ್ಥೆ ಇಲ್ಲ. ಧರ್ಮ ದರ್ಶನ, 300 ರೂ. ಹಾಗೂ 2000 ರೂ. ದರದ ಟಿಕೆಟ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಯಾವುದೇ ಶಿಫಾರಸು ಪತ್ರಗಳನ್ನು ಪರಿಗಣಿಸುವುದಿಲ್ಲ. ಶಿಷ್ಟಾಚಾರದ ವ್ಯಾಪ್ತಿಗೆ ಬರುವವರಿಗೆ ಮಾತ್ರ ಪ್ರವೇಶವಿದೆ. ಇವರನ್ನು ಹೊರತುಪಡಿಸಿ ಶುಕ್ರವಾರ, ಶನಿವಾರ, ಭಾನುವಾರದಂದು ಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಆದರೆ ಬೆಟ್ಟದಲ್ಲಿ ವಾಸ ಮಾಡುವ ಜನರು ಗುರುತಿನ ಪತ್ರ ತೋರಿಸಿ ತಿರುಗಾಡಬಹುದು ಎಂದರು. ಬಸ್ ಹತ್ತುವಾಗಲೇ ಟಿಕೆಟ್ಈ ಬಾರಿ ಲಲಿತಮಹಲ್ ಮೈದಾನದಲ್ಲೇ ದರ್ಶನದ ಟಿಕೆಟ್‌ ಗಳನ್ನು ಮಾರಾಟ ಮಾಡಲಾಗುತ್ತದೆ. 300 ರೂ. ಹಾಗೂ 2 ಸಾವಿರ ರೂ. ಮೌಲ್ಯದ ಟಿಕೆಟ್ ಪಡೆದವರನ್ನು ಹಾಗೂ ಧರ್ಮ ದರ್ಶನ ಪಡೆಯುವ ಭಕ್ತರನ್ನು ನಿಲ್ದಾಣದಿಂದಲೇ ಪ್ರತ್ಯೇಕವಾದ ಬಸ್‌ ಗಳಲ್ಲಿ ಹತ್ತಿಸಲಾಗುತ್ತದೆ. ಇದಕ್ಕಾಗಿ ಮೂರು ಪ್ರತ್ಯೇಕ ಸಾಲುಗಳನ್ನು ಮಾಡಲಾಗಿದೆ. ಬೆಟ್ಟದ ಮೇಲೆ ಬರುವ ಬಸ್ ಗಳು ಧರ್ಮ ದರ್ಶನ ಪಡೆಯುವ ಭಕ್ತರನ್ನು ಬೆಟ್ಟದ ಪ್ರವೇಶ ದ್ವಾರದಲ್ಲಿ ಇಳಿಸುತ್ತವೆ. ಅಲ್ಲಿಂದಲ್ಲೇ ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿದ್ದು. ಭಕ್ತರು ಸರತಿ ಸಾಲಿನಲ್ಲಿ ಹೋಗಬೇಕು. ಇನ್ನೂ 300 ರೂ. ಟಿಕೆಟ್ ಪಡೆದುಕೊಂಡಿರುವವರು ಮಲ್ಟಿಲೆವಲ್ ಪಾರ್ಕ್‌ ನ ಬಳಿ ಇರುವ ಬಸ್ ನಿಲ್ದಾಣದಲ್ಲಿ ಇಳಿದು, ಅಲ್ಲಿಂದ ಸರತಿ ಸಾಲಿನಲ್ಲಿ ಹೋಗಬೇಕು. 2000 ರೂ. ಟಿಕೆಟ್ ಪಡೆದುಕೊಂಡಿರುವವರು ಮಹಿಷಾಸುರ ಪ್ರತಿಮೆಯ ಮುಂಭಾಗದಿಂದ ದೇವಸ್ಥಾನವನ್ನು ಪ್ರವೇಶಿಸುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ವಿವರಿಸಿದರು.ಧರ್ಮದರ್ಶನದ ಸಾಲಿನಲ್ಲಿ ಬರುವ ಭಕ್ತಾಧಿಗಳಿಗೆ ಉಚಿತವಾಗಿ ಡ್ರೈಫ್ರೂಟ್‌ಸ್‌ ಪ್ಯಾಕೆಟ್, ಬಾದಾಮಿ ಹಾಲು ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಕೆಲವು ಕಡೆ ಶೌಚಾಲಯಗಳನ್ನು ತೆರೆಯಲಾಗಿದೆ. ಇದೇ ಸಾಲಿನಲ್ಲಿ ಮಾರಾಟದ ಮಳಿಗೆಗಳನ್ನು ತೆರೆಯಲಾಗಿದೆ. ಇಲ್ಲಿ ನಂದಿನಿ ಉತ್ಪನ್ನಗಳು, ಗಾಜಿನ ನೀರಿನ ಬಾಟಲ್, ಕಾಫಿ ಮಾರಾಟ ಮಾಡಲಾಗುತ್ತದೆ. ದೇವಿಯ ದರ್ಶನ ಪಡೆಯುವ ಎಲ್ಲಾ ಭಕ್ತರಿಗೂ ಕುಂಕುಮ ಪ್ರಸಾದ, ಮುತ್ತೈದೆಯರಿಗೆ ಮಡಿಲಕ್ಕಿ ಪ್ಯಾಕೆಟ್‌ ಗಳನ್ನು ಉಚಿತವಾಗಿ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನೀಡಲಾಗುತ್ತದೆ ಎಂದು ಅವರು ತಿಳಿಸಿದರು. ಪ್ರಸಾದ ವಿತರಣೆ ಜಾಗ ಬದಲುಪ್ರತಿ ಅಷಾಢ ಶುಕ್ರವಾರಗಳಂದು ಮಲ್ಟಿ ಲೆವಲ್ ಪಾರ್ಕಿಂಗ್ ಜಾಗದಲ್ಲಿ ಅನ್ನಸಂತರ್ಪಣೆ ಹಾಗೂ ಪ್ರಸಾದ ವಿತರಣೆ ಕಾರ್ಯ ನಡೆಯುತ್ತಿತ್ತು. ಆದರೆ, ಈ ಬಾರಿ ಅರಣ್ಯ ಮಾಹಿತಿ ಭವನದ ಆವರಣವನ್ನು ಈ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ಮೊದಲ ಶುಕ್ರವಾರ ಪ್ರಾಧಿಕಾರದ ವತಿಯಿಂದಲೇ ಅನ್ನ ಸಂತರ್ಪಣೆ ಕಾರ್ಯ ನಡೆಯುತ್ತಿದೆ. ಮುಂದಿನ ಶುಕ್ರವಾರಗಳಲ್ಲಿ ಸಂಘ- ಸಂಸ್ಥೆಗಳು, ಸೇವಾರ್ಥದಾರರನ್ನು ಒಳಗೊಂಡಿಸಿಕೊಂಡು ಮಾಡುವ ಆಲೋಚನೆ ಇದೆ ಎಂದರು. ಬಸ್ ಹತ್ತುವಲ್ಲೇ ಪಾದರಕ್ಷೆ ಬಿಡಲು ಮನವಿಬೆಟ್ಟಕ್ಕೆ ತೆರಳಲು ಭಕ್ತರು ಲಲಿತಮಹಲ್ ಪ್ಯಾಲೇಸ್ ಬಳಿ ಬಸ್ ಹತ್ತುವಾಗಲೇ ತಮ್ಮ ಪಾದರಕ್ಷೆಗಳನ್ನು ಬಿಡಬೇಕು. ಇದಕ್ಕಾಗಿ ಕೌಂಟರ್ ತೆರೆಯಲಾಗಿದೆ. ಪ್ರತಿ ಸಲವೂ ಬೆಟ್ಟದ ಮೇಲೆ ದೇವಾಲಯ ಪ್ರವೇಶಿಸುವ ಮುನ್ನಾ ಪಾದರಕ್ಷೆಗಳನ್ನು ಬಿಟ್ಟು ಭಕ್ತರು ಒಳಗೆ ಹೋಗುತ್ತಿದ್ದರು. ಹೊರಗೆ ಬಂದ ಬಳಿಕ ಪಾದರಕ್ಷೆಗಳು ಇರುವ ಜಾಗಕ್ಕೆ ಹೋಗಲು ಗೊಂದಲ ಉಂಟಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ತಾತ್ಕಾಲಿಕ ಬಸ್ ನಿಲ್ದಾಣದಲ್ಲೇ ಕೌಂಟರ್ ತೆರೆಯಲಾಗಿದ್ದು. ಅಲ್ಲಿ ಪಾದರಕ್ಷೆಗಳನ್ನು ಬಿಟ್ಟು ಹೋಗಬೇಕು ಎಂದು ಅವರು ಮನವಿ ಮಾಡಿದರು.ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿಪಂ ಸಿಇಒ ಯುಕೇಶ್ ಕುಮಾರ್, ನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್, ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ. ರೂಪಾ, ಡಿಸಿಪಿಗಳಾದ ಎಂ. ಮುತ್ತುರಾಜ್, ಸುಂದರ್ ರಾಜ್ ಮೊದಲಾದವರು ಇದ್ದರು.------- ಬಾಕ್ಸ್ 2...ಮೆಟ್ಟಿಲು ಹತ್ತಿದವರಿಗೆ ದರ್ಶನಸಾವಿರ ಮೆಟ್ಟಿಲು ಹತ್ತಿಕೊಂಡು ಚಾಮುಂಡಿಬೆಟ್ಟಕ್ಕೆ ಆಗಮಿಸುವ ಭಕ್ತರಿಗೆ ನೇರ ದರ್ಶನದ ಅವಕಾಶವನ್ನು ಕಲ್ಪಿಸಲಾಗುತ್ತದೆ. ಮೆಟ್ಟಿಲ ಬಳಿಯಿಂದಲೇ ಬ್ಯಾರಿಕೇಡ್ ಅಳವಡಿಸಿ, ಪ್ರತ್ಯೇಕ ಸರತಿ ಸಾಲನ್ನು ಮಾಡಲಾಗಿದೆ. ಇಲ್ಲಿಂದ ಭಕ್ತರು ದೇವಾಲಯವನ್ನು ಪ್ರವೇಶ ಮಾಡಿ, ದೇವಿಯ ದರ್ಶನ ಮಾಡಬಹುದು ಎಂದು ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ಹೇಳಿದರು.------- ಬಾಕ್ಸ್ 3...

ಮೊಬೈಲ್ ಫೋಟೋ, ರೀಲ್ಸ್ ನಿಷೇಧಚಾಮುಂಡೇಶ್ವರಿ ಅಮ್ಮನವರ ದೇವಾಲಯದಲ್ಲಿ ಉತ್ಸವಮೂರ್ತಿ ಸಮೀಪ, ಗರ್ಭಗುಡಿ ಮತ್ತು ಪ್ರಾಂಗಣದಲ್ಲಿ ಮೊಬೈಲ್ ಹಾಗೂ ಕ್ಯಾಮೆರಾದಲ್ಲಿ ಛಾಯಾಚಿತ್ರ ತೆಗೆಯುವುದು ಮತ್ತು ರೀಲ್ಸ್ ಮಾಡುವುದನ್ನು ನಿಷೇಧಿಸಲಾಗಿದೆ. ಈ ಕಾನೂನುನನ್ನು ಉಲ್ಲಂಘನೆ ಮಾಡಿದ್ದಲ್ಲಿ ಮೊಬೈಲ್ ಮತ್ತು ಕ್ಯಾಮೆರಾಗಳನ್ನು ಶಾಶ್ವತವಾಗಿ ವಶಪಡಿಸಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ಎಚ್ಚರಿಸಿದರು. ಇನ್ನು ಮುಂದೆ ಪ್ರಾಧಿಕಾರದ ವತಿಯಿಂದ ಉತ್ಸವ ಮೂರ್ತಿಯ ಫೋಟೋ ಹಾಗೂ ವೀಡಿಯೋ ಚಿತ್ರೀಕರಿಸಿ ಸಾರ್ವಜನಿಕವಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಲಾಗುವುದು ಎಂದರು.

-- ಬಾಕ್ಸ್ 4...

ಶುಕ್ರವಾರ ಉಚಿತ- ಮಿಕ್ಕ ದಿನ ಟಿಕೆಟ್ಅಷಾಢ ಶುಕ್ರವಾರ ಹಾಗೂ ವರ್ಧಂತಿ ದಿನದಂದು ಮಾತ್ರ ಲಲಿತ ಮಹಲ್ ಮೈದಾನದಿಂದ ಉಚಿತ ಬಸ್ ಪ್ರಯಾಣ ಮಾಡಬಹುದು. ಇನ್ನೂ ಶನಿವಾರ ಹಾಗೂ ಭಾನುವಾರ ಪ್ರಯಾಣ ಮಾಡುವಾಗ ಟಿಕೆಟ್ ಪಡೆದುಕೊಂಡು ಪ್ರಯಾಣ ಮಾಡಬೇಕು. ಮಹಿಳೆಯರಿಗೆ ಶಕ್ತಿ ಯೋಜನೆ ಅನ್ವಯವಾಗುತ್ತದೆ ಎಂದರು.