14 ರಂದು ಧರ್ಮಸ್ಥ‍ಳಕ್ಕೆ ಸಹಕಾರಿ ಬಂಧುಗಳ ‘ಧರ್ಮ ಜಾಗೃತಿ ಯಾತ್ರೆ’

| N/A | Published : Sep 13 2025, 02:05 AM IST

14 ರಂದು ಧರ್ಮಸ್ಥ‍ಳಕ್ಕೆ ಸಹಕಾರಿ ಬಂಧುಗಳ ‘ಧರ್ಮ ಜಾಗೃತಿ ಯಾತ್ರೆ’
Share this Article
  • FB
  • TW
  • Linkdin
  • Email

ಸಾರಾಂಶ

ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ, ಸಹಕಾರ ರತ್ನ ಡಾ.ಎಂ.ಎನ್‌.ರಾಜೇಂದ್ರ ಕುಮಾರ್‌ ನೇತೃತ್ವದಲ್ಲಿ ಸೆ. 14 ರಂದು ಅವಿಭಜಿತ ದ.ಕ. ಜಿಲ್ಲೆಯ ಸಮಸ್ತ ಸಹಕಾರಿ ಬಂಧುಗಳಿಂದ ‘ಧರ್ಮ ಜಾಗೃತಿ ಯಾತ್ರೆ’ ಉಜಿರೆಯಿಂದ ಧರ್ಮಸ್ಥಳಕ್ಕೆ ನಡೆಯಲಿದೆ

ಮಂಗಳೂರು: ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ, ಸಹಕಾರ ರತ್ನ ಡಾ.ಎಂ.ಎನ್‌.ರಾಜೇಂದ್ರ ಕುಮಾರ್‌ ನೇತೃತ್ವದಲ್ಲಿ ಸೆ. 14 ರಂದು ಅವಿಭಜಿತ ದ.ಕ. ಜಿಲ್ಲೆಯ ಸಮಸ್ತ ಸಹಕಾರಿ ಬಂಧುಗಳಿಂದ ‘ಧರ್ಮ ಜಾಗೃತಿ ಯಾತ್ರೆ’ ಉಜಿರೆಯಿಂದ ಧರ್ಮಸ್ಥಳಕ್ಕೆ ನಡೆಯಲಿದೆ. ಈ ಯಾತ್ರೆಯಲ್ಲಿ 1,500ಕ್ಕೂ ಅಧಿಕ ಸಹಕಾರಿ ಸಂಘಗಳು, 3 ಸಾವಿರಕ್ಕೂ ವಾಹನಗಳು ಭಾಗಿಯಾಗಲಿದ್ದು, ಮಧ್ಯಾಹ್ನ 12 ಗಂಟೆಗೆ ಉಜಿರೆಯಿಂದ ಯಾತ್ರೆ ಆರಂಭವಾಗಲಿದೆ ಎಂದು ಎಸ್‌ಸಿಡಿಸಿಸಿ ಬ್ಯಾಂಕ್‌ ನಿರ್ದೇಶಕ, ಸಹಕಾರಿ ಧುರೀಣ ಶಶಿಕುಮಾರ್‌ ರೈ ಬ್ಯಾಲೊಟ್ಟು ತಿಳಿಸಿದ್ದಾರೆ.

ಇಲ್ಲಿನ ಎಸ್‌ಸಿಡಿಸಿಸಿ ಬ್ಯಾಂಕ್‌ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಜಿರೆಯಿಂದ ಹೊರಟ ಸಹಕಾರಿಗಳ ಯಾತ್ರೆ ಧರ್ಮಸ್ಥಳ ತಲುಪಿದ ಬಳಿಕ ಮಧ್ಯಾಹ್ನ ಅಮೃತ ವರ್ಷಿಣಿ ಸಭಾಭವನದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಆಶೀರ್ವಚನ ನೀಡಲಿದ್ದು, ಡಾ.ಎಂ.ಎನ್‌. ರಾಜೇಂದ್ರ ಕುಮಾರ್‌ ಅಭಿನಂದನೆ ಸಲ್ಲಿಸಲಿದ್ದಾರೆ ಎಂದರು. ಸಹಬಾಳ್ವೆಯ ಪ್ರತೀಕವಾಗಿರುವ ಶ್ರೀಕ್ಷೇತ್ರ ಧರ್ಮಸ್ಥಳ ಪ್ರಾಚೀನ ಪಾರಂಪರ್ಯವನ್ನು ಹೊಂದಿರುವ ಪವಿತ್ರ ಕ್ಷೇತ್ರ. ಇಂತಹ ಪಾವಿತ್ರ್ಯತೆಯ ಪೂಜನೀಯ ಕ್ಷೇತ್ರಕ್ಕೆ ಕಳಂಕ ತರುತ್ತಿರುವ ದುಷ್ಟಶಕ್ತಿಗಳ ಷಡ್ಯಂತ್ರವನ್ನು ವಿರೋಧಿಸಿ ಅವಿಜಿತ ಜಿಲ್ಲೆಯ ಸಹಕಾರಿಗಳು ಧರ್ಮಜಾಗೃತಿ ಯಾತ್ರೆ ಹಮ್ಮಿಕೊಂಡಿದ್ದಾರೆ ಎಂದರು. 

ಧರ್ಮಸಂರಕ್ಷಣೆ ಯಾತ್ರೆ:

ಇದೊಂದು ಧರ್ಮಸಂರಕ್ಷಣೆಯ ಯಾತ್ರೆಯಾಗಿದೆ. ಧಾರ್ಮಿಕ ಕ್ಷೇತ್ರಗಳ ಮೇಲೆ ಅಪಪ್ರಚಾರ ಮಾಡುವ ಷಡ್ಯಂತರಿಗಳ ವಿರುದ್ಧ ಈ ಯಾತ್ರೆ ಆಯೋಜಿಸಲಾಗಿದೆ. ಅವಿಭಜಿತ ಜಿಲ್ಲೆಯ ಸಹಕಾರಿ ಸಂಘಗಳು ಯಾವಾಗಲೂ ಸೌಹಾರ್ದತೆಯಿಂದ ಪರಸ್ಪರ ಸಹಬಾಳ್ವೆಯಿಂದ ಕಾರ್ಯನಿರ್ವಹಿಸುತ್ತಿವೆ. ಪವಿತ್ರ ಧರ್ಮಸ್ಥಳ ಕ್ಷೇತ್ರದ ಮೇಲೆ ವಿಶೇಷ ಗೌರವ, ಶ್ರದ್ಧಾ ಭಕ್ತಿಯನ್ನು ಸಹಕಾರ ಕ್ಷೇತ್ರ ಹೊಂದಿದೆ. ಹಾಗಾಗಿ ಈ ಧರ್ಮ ಕ್ಷೇತ್ರಕ್ಕೆ ಅಪಚಾರ ಎಸಗುವ ಷಡ್ಯಂತರಿಗಳಿಗೆ ಸ್ಪಷ್ಟ ಸಂದೇಶ ನೀಡುವ ಚಾರಿತ್ರಿಕ ಯಾತ್ರೆ ಈ ಧರ್ಮ ಜಾಗೃತಿ ಯಾತ್ರೆಯಿಂದ ನಡೆಯಲಿದೆ ಎಂದರು.  

ಶ್ರೀಕ್ಷೇತ್ರ ಧರ್ಮಸ್ಥಳದಿಂದ ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ, ಸಹಕಾರ ಕ್ಷೇತ್ರಕ್ಕೆ ವಿಶೇಷ ಕೊಡುಗೆ ಲಭಿಸಿದೆ. ಇಂತಹ ಸಾಮಾಜಿಕ ಸ್ಪಂದನೆಯ ಧಾರ್ಮಿಕ ಕ್ಷೇತ್ರವನ್ನು ಅಪಪ್ರಚಾರ ಮಾಡುವ ಷಡ್ಯಂತರಿಗಳು ಧಾರ್ಮಿಕ ಭಾವನೆಯನ್ನು ದುರ್ಬಲಗೊಳಿಸುತ್ತಿರುವುದು ಖಂಡನೀಯ. ಈ ರೀತಿ ಇನ್ನು ಯಾವುದೇ ಧರ್ಮ ಕ್ಷೇತ್ರಗಳಿಗೆ ಹಾಗೂ ಧರ್ಮಗಳಿಗೆ ಅಪಚಾರ ಆಗಬಾರದು. ಸಹಕಾರ ಕ್ಷೇತ್ರ ಸರ್ವಧರ್ಮಕ್ಕೂ ಗೌರವ ನೀಡುವ ಕ್ಷೇತ್ರವಾಗಿರುವುದರಿಂದ ಸರ್ವಧರ್ಮ ಸಂರಕ್ಷಣೆಯ ದೃಷ್ಟಿಯಿಂದ ಈ ಯಾತ್ರೆ ಯಶಸ್ವಿಯಾಗಿ ನಡೆಯಲಿದೆ ಎಂದರು.

ಬ್ಯಾಂಕಿನ ನಿರ್ದೇಶಕರಾದ ದೇವಿಪ್ರಸಾದ್‌ ಶೆಟ್ಟಿ ಬೆಳಪು, ಜಯರಾಜ್‌ ಶೆಟ್ಟಿ, ವಾದಿರಾಜ್ ಶೆಟ್ಟಿ, ಎಸ್‌.ಬಿ.ಜಯರಾಮ ರೈ, ಮನ್ಮಥ ಮತ್ತಿತರರಿದ್ದರು.

12 ಗಂಟೆಗೆ ಧರ್ಮ ಜಾಗೃತಿ ಯಾತ್ರೆ ಚಾಲನೆ 

ಉಡುಪಿ ಜಿಲ್ಲೆಯ ಬೈಂದೂರು, ಉಡುಪಿ, ಕಾರ್ಕಳ, ಮೂಡುಬಿದಿರೆ ಕಡೆಯಿಂದ ತೆರಳುವ ಮಂದಿ ವಾಹನಗಳಲ್ಲಿ ನೇರವಾಗಿ ಬೆಳಗ್ಗೆ 10.30ಕ್ಕೆ ಉಜಿರೆ ತಲುಪಬೇಕು. ಮಂಗಳೂರು, ಸುಳ್ಯ, ಪುತ್ತೂರು, ಬಂಟ್ವಾಳ, ಕಡಬ ತಾಲೂಕುಗಳಿಂದ ಆಗಮಿಸುವವರು ಬೆಳಗ್ಗೆ 11.30ಕ್ಕೆ ಉಜಿರೆ ತಲುಪಬೇಕು. ಅಲ್ಲಿ 12 ಗಂಟೆಗೆ ಧರ್ಮಜಾಗೃತಿ ಯಾತ್ರೆಗೆ ಡಾ.ಎ.ಎನ್‌.ರಾಜೇಂದ್ರ ಕುಮಾರ್‌ ಚಾಲನೆ ನೀಡಲಿದ್ದಾರೆ. 12.30ಕ್ಕೆ ತಲಪುವ ಯಾತ್ರೆಯ ವಾಹನಗಳಿಗೆ ಅಮೃತ ವರ್ಷಿಣಿ ಸಭಾಂಗಣ ಹಿಂಭಾಗದ ವಿಶಾಲ ಮೈದಾನದಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಸುಮಾರು 10 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಅಲ್ಲಿ ಸಭಾ ಕಾರ್ಯಕ್ರಮ, ಭೋಜನ ಬಳಿಕ ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಶಶಿಕುಮಾರ್ ರೈ ಬ್ಯಾಲೊಟ್ಟು ತಿಳಿಸಿದರು.

Read more Articles on