ಸಾರಾಂಶ
ಕನ್ನಡಪ್ರಭ ವಾರ್ತೆ ಐಗಳಿ
ಭಾರತ ಸಾಧು-ಸಂತರು ಮತ್ತು ಸತ್ಪುರುಷರ ದೇಶ. ರಾಜನೀತಿ, ಅರ್ಥನೀತಿ, ಸಮಾಜನೀತಿಯ ಜೊತೆಗೆ ಧರ್ಮದಂಡವೂ ಕೂಡ ದೇಶವನ್ನು ಸಮರ್ಥವಾಗಿ ಮುನ್ನಡೆಸಲು ಅತ್ಯಗತ್ಯ ಎಂದು ಕನ್ನೇರಿ ಸಿದ್ದಗಿರಿ ಸಂಸ್ಥಾನ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು.ಸಮೀಪದ ಬಿಳೂರು ಗ್ರಾಮದ ರಾಜಯೋಗಿ ಶ್ರೀ ಗುರುಬಸವ ಮಹಾಸ್ವಾಮೀಜಿ ವಿರಕ್ತ ಮಠದ ಉತ್ತರಾಧಿಕಾರಿಯಾಗಿ ಈಶಪ್ರಸಾದ ಸ್ವಾಮೀಜಿ ಅವರ ನಿರಂಜನ ಚರಪಟ್ಟಾಧಿಕಾರ ಮತ್ತು ಶೂನ್ಯ ಸಿಂಹಾಸನಾರೋಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಐಶ್ವರ್ಯದ ಮೇಲೆ, ಸಮಾಜದ ಮೇಲೆ ಮತ್ತು ರಾಜನ ಮೇಲೂ ಧರ್ಮದಂಡದ ನಿಯಂತ್ರಣ ಇರುತ್ತದೆ. ಇದು ಅನಾದಿ ಕಾಲದಿಂದಲೂ ನಮ್ಮ ದೇಶವನ್ನು ಉಳಿಸಿಕೊಂಡು ಬಂದ ನೀತಿ ಎಂದರು. ಉತ್ತಮ ಮಠಾಧೀಶರ ಕೊರತೆ ಇದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, ನಿಜವಾದ ಸನ್ಯಾಸಿ ಒಮ್ಮೆ ಪೀಠ ಅಲಂಕರಿಸಿದ ಮೇಲೆ ತನ್ನ ಮನೆಯ ಕಡೆಗೆ ತಿರುಗಿ ನೋಡಬಾರದು. ಕೇವಲ ಪಾದಪೂಜೆ, ದಕ್ಷಿಣೆ, ಮತ್ತು ಪ್ರಸಾದಕ್ಕೆ ಸೀಮಿತವಾಗುವವನು ನಿಜವಾದ ಸ್ವಾಮಿಯಾಗಲಾರ. ಮಠಾಧೀಶರು ತ್ಯಾಗಿ ಮತ್ತು ಜ್ಞಾನಿಗಳಾಗಿರಬೇಕು. ಸಮಾಜದೊಳಗಿನ ಎಡರು-ತೊಡರುಗಳನ್ನು ಬಗೆಹರಿಸಿ ವಸುದೈವ ಕುಟುಂಬಕಂ ಎಂಬ ತತ್ವದಂತೆ ಸಮಾಜವನ್ನು ಮುನ್ನಡೆಸಬೇಕು ಎಂದರು.ಸಿದ್ದೇಶ್ವರ ಶ್ರೀಗಳ ತ್ಯಾಗವು ಎಲ್ಲಾ ಮಠಾಧೀಶರಿಗೆ ಮಾದರಿ. ನಮ್ಮ ದೇಶದಲ್ಲಿ 1500ಕ್ಕೂ ಹೆಚ್ಚು ಜಾತಿಗಳು, ಆರು ಪ್ರಮುಖ ಧರ್ಮಗಳು ಮತ್ತು 127 ಕೃಷಿ ವಲಯಗಳ ವೈವಿಧ್ಯತೆಯಿದ್ದರೂ, ಭಾರತೀಯರು ಒಗ್ಗಟ್ಟಿನಿಂದ ಸಹಬಾಳ್ವೆ ನಡೆಸುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಅಧ್ಯಾತ್ಮ, ದೇವಾಲಯಗಳು, ಮಠಗಳು, ಇಲ್ಲಿಯ ಮಣ್ಣಿನ ಸಂಸ್ಕಾರ. ಮಠಗಳು ಮಠಾಧೀಶರ ಸಂಬಂಧಿಕರ ಚಾವಡಿಯಾಗಲು ಪ್ರಶ್ನೇ ಮಾಡದೆ ಮೌನವಾಗಿರುವ ಸಮಾಜದ ಜನಗಳೆ ಕಾರಣ ಎಂದರು.
ಪಟ್ಟಾಧಿಕಾರ ಸ್ವೀಕರಿಸಿ ಈಶಪ್ರಸಾದ ಸ್ವಾಮೀಜಿ ಮಾತನಾಡಿ, ನಾಲ್ಕು ವಚನ ಹೇಳಿದರೆ ಸಾಲದು, ಅದು ಆಚರಣೆಗೆ ಬರಬೇಕು. ತನಗಾಗಿ ಏನನ್ನೂ ಬಯಸದೆ ಲೋಕ ಕಲ್ಯಾಣಕ್ಕಾಗಿ ಜೀವ ಸವೆಸಿದವರು ನಿಜವಾದ ಸಂತರು. ಅನ್ನದಾಸೋಹ, ಅಕ್ಷರ ದಾಸೋಹ ಮತ್ತು ಜ್ಞಾನ ದಾಸೋಹವನ್ನು ಜಾತಿ ಭೇದವಿಲ್ಲದೆ ನಡೆಸಿದ ಸಂತರ ನಾಡಿನಲ್ಲಿ ನಾವಿದ್ದೇವೆ. ನಾನು ಬಳ್ಳೂರಿಗೆ ಹೂವು ತರುತ್ತೇನೆ, ಹುಲ್ಲು ತರುವುದಿಲ್ಲ. ಭಾರತೀಯ ಸಂಸ್ಕೃತಿಯ ಹಿನ್ನೆಲೆಯಲ್ಲಿ ಹಗಲು-ರಾತ್ರಿ ಸೇವೆ ಸಲ್ಲಿಸುತ್ತೇನೆ. ಕೃಷಿ ಕ್ಷೇತ್ರ, ಪರಿಸರ, ಅಂತರ್ಜಲ ಸಂರಕ್ಷಣೆ, ಯುವಕರಿಗೆ ಮತ್ತು ಮಕ್ಕಳಿಗೆ ಸಂಸ್ಕಾರ, ತಾಯಂದಿರಿಗೆ ಮತ್ತು ಕೃಷಿಕರಿಗೆ ಉತ್ತಮ ಮಾರ್ಗದರ್ಶನ ನೀಡುವ ಮೂಲಕ ಬಸವಣ್ಣನವರ ವಿಚಾರಗಳಂತೆ ಮತ್ತು ಸಿದ್ದೇಶ್ವರ ಶ್ರೀಗಳ ಆಶಯದಂತೆ ಮುನ್ನಡೆಯುತ್ತೇನೆ ಎಂದು ಭರವಸೆ ನೀಡಿದರು.ವಿಜಯಪುರದ ಜ್ಞಾನಯೋಗಾಶ್ರಮ ಗುರು ಮಹಾಂತ ಸ್ವಾಮೀಜಿ ಇಳಕಲ್ಲ ಅವರಿಂದ ಈಶಪ್ರಸಾದ ಸ್ವಾಮೀಜಿ ಅವರಿಗೆ ಚಿನ್ಮಯಾನುಗ್ರಹ ದೀಕ್ಷೆ ಮತ್ತು ಪಟಸ್ಥಳ ಬ್ರಹ್ಮೋಪದೇಶ, ಬಿಳೂರ ವಿರಕ್ತ ಮಠಕ್ಕೆ ಶ್ರೀಮನ್ ನಿರಂಜನ ಪ್ರಣವಸ್ವರೂಪಿ ರಾಜಯೋಗಿ ಶ್ರೀ ಗುರುಚೆನ್ನಬಸವ ಮಹಾಸ್ವಾಮಿ ಎಂದು ನಾಮಕರಣ ನಡೆಯಿತು. ಹತ್ತು ಸಾವಿರ ಭಕ್ತರಿಗಾಗಿ ಮಂಟಪ ನಿರ್ಮಿಸಲಾಗಿತ್ತು. ಬಸವಲಿಂಗ ಪಟ್ಟದೇವರು, ಬಸವಲಿಂಗ ಸ್ವಾಮೀಜಿ, ಗುರುಬಸವ ಸ್ವಾಮೀಜಿ, ಗುರುಮಹಾಂತ ಸ್ವಾಮೀಜಿ, ವಚನಾನಂದ ಸ್ವಾಮೀಜಿ, ಶಂಕರಾರೂಢ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಗಣ್ಯರು ಉಪಸ್ಥಿತರಿದ್ದರು.