ಅದ್ಧೂರಿಯಾಗಿ ನಡೆದ ಧರ್ಮರಾಯಸ್ವಾಮಿ ಒನಕೆ ಕರಗ

| Published : May 14 2024, 01:08 AM IST

ಸಾರಾಂಶ

.ಕಳೆದ 8 ದಿನಗಳಿಂದ ನಗರದಲ್ಲಿ ಶ್ರೀ ಧರ್ಮರಾಯಸ್ವಾಮಿ ಹೂವಿನ ಕರಗ ಮಹೋತ್ಸವದ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಭಕ್ತಿಭಾವದಿಂದ ಚಿಕ್ಕಬಳ್ಳಾಪುರ ನಗರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಕರಗ ವೀಕ್ಷಿಸಲು ಭಕ್ತರು ಆಗಮಿಸಿದ್ದರು

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ನಗರದ ಜಾಲಾರಿ ಗಂಗಮಾಂಬ ದೇವಾಲಯದ ಶ್ರೀ ಧರ್ಮರಾಯರ ಕರಗ ಮಹೋತ್ಸವದ ಸೇವಾ ಸಮಿತಿ 62ನೇ ವರ್ಷದ ಶ್ರೀ ಧರ್ಮರಾಯರ ಹೂವಿನ ಕರಗ ಮಹೋತ್ಸವದ ಅಂಗವಾಗಿ ನಗರದ ಭುವನೇಶ್ವರಿ ವೃತ್ತದಲ್ಲಿ ಕರಗದ ಕೊನೆಯ ದಿನದ ಅಂತಿಮ ಕಾರ್ಯಕ್ರಮವಾದ ವಸಂತೋತ್ಸವ (ಒನಕೆ) ಕರಗ ಸೋಮವಾರ ಅದ್ದೂರಿಯಾಗಿ ನಡೆಯಿತು.ಮೇಲೂರಿನ ಕರಗದ ಪೂಜಾರಿ ಕೆ. ಧರ್ಮೇಂದ್ರ ಅವರು ಸುಮಾರು 6 ಅಡಿ ಉದ್ದದ ಒನಕೆಯ ಮೇಲೆ ಅರಿಶಿಣ ನೀರು ತುಂಬಿಟ್ಟ ತಾಮ್ರದ ಪಾತ್ರೆ ಇಟ್ಟುಕೊಂಡು ತಮಟೆಯ ವಾದನಕ್ಕೆ ತಕ್ಕಂತೆ ಆಕರ್ಷಕ ನೃತ್ಯ ಮಾಡುವ ಮೂಲಕ ನೆರದಿದ್ದ ಜನರಲ್ಲಿ ಮೆಚ್ಚುಗೆಗೆ ಪಾತ್ರರಾದರು.

ಸಮತೋಲನದ ನೃತ್ಯ

ಧರ್ಮೇಂದ್ರ ಅವರ ತಲೆ ಮೇಲೆ ನಿಂತ ಒನಕೆ ಸಮತೋಲನ ಕಳೆದುಕೊಳ್ಳದಂತೆ ಚಾಕಚಾಕ್ಯತೆಯಿಂದ ತಮಟೆ ವಾದ್ಯಕ್ಕೆ ಅನುಗುಣವಾಗಿ ಗೆಜ್ಜೆಯ ಕಾಲಿನ ತಾಳದೊಂದಿಗೆ ಲಯಬದ್ಧವಾಗಿ ಎರಡೂ ಕೈಗಳನ್ನು ಬಿಟ್ಟು ನರ್ತಿಸಿದರು. ಸುಮಾರು ಅರ್ಧ ಗಂಟೆ ಹೆಚ್ಚು ಕಾಲ ಕುಣಿದ ಬಾಲಾಜಿ ಅವರ ನೃತ್ಯವನ್ನು ಸುತ್ತಮುತ್ತಲಿನ ರಸ್ತೆ ಬದಿ, ಕಟ್ಟಡದ ಮೇಲೆ ನಿಂತು ಜನರು ವೀಕ್ಷಿಸಿದರು. ಕಳೆದ 8 ದಿನಗಳಿಂದ ನಗರದಲ್ಲಿ ಶ್ರೀ ಧರ್ಮರಾಯಸ್ವಾಮಿ ಹೂವಿನ ಕರಗ ಮಹೋತ್ಸವದ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಭಕ್ತಿಭಾವದಿಂದ ಚಿಕ್ಕಬಳ್ಳಾಪುರ ನಗರ ಸೇರಿದಂತೆ ಗ್ರಾಮೀಣ ಪ್ರದೇಶ ಹಾಗೂ ಕೋಲಾರ ಮತ್ತು ಬೆಂಗಳೂರು ಗ್ರಾಮಂತರ ಜಿಲ್ಲೆಗಳಿಂದಲೂ ಚಿಕ್ಕಬಳ್ಳಾಪುರದ ಹೆಸರಾಂತ ಈ ಕರಗ ವೀಕ್ಷಿಸಲು ಆಗಮಿಸಿ ಸಾಕ್ಷಿಯಾಗಿದ್ದರು.

ವಿವಿಧ ಭಂಗಿಗಳಲ್ಲಿ ನೃತ್ಯಇದರ ಭಾಗವಾಗಿ ಕಡೆಯ ದಿನವಾದ ಸೋಮವಾರ ಕರಗದ ಪೂಜಾರಿ ಕೆ ಧರ್ಮೇಂದ್ರ ಹಾಗೂ ಅವರ ಸಹಚರರು ಒನಕೆ ಕರಗ ಹೊತ್ತು ವಿವಿಧ ಭಂಗಿಗಳಲ್ಲಿ ನೃತ್ಯ ಪ್ರದರ್ಶಿಸುವ ಮೂಲಕ ಶ್ರೀ ಜಲಾರಿ ಗಂಗಮಾಂಭ ದೇವಾಲಯದ ಧರ್ಮರಾಯಸ್ವಾಮಿ ಹೂವಿನ ಕರಗಕ್ಕೆ ಕಳೆ ತಂದುಕೊಟ್ಟರು.

ಕರಗ ಉತ್ಸವಕ್ಕೆ ತೆರೆ: ಜಿಲ್ಲಾ ಕೇಂದ್ರದಲ್ಲಿ ಪ್ರತಿ ವರ್ಷ ಭಕ್ತಿಭಾವದಿಂದ ನಡೆಸುವ ಜಾಲಾರಿ ಗಂಗಮ್ಮದೇವಿಯ ಧರ್ಮರಾಯಸ್ವಾಮಿಯ 62 ನೇ ವರ್ಷದ ಹೂವಿನ ಕರಗ ಮಹೋತ್ಸವ ಸೋಮವಾರ ಅಪರೂಪದ ಒನಕೆ ಕರಗ ನೃತ್ಯ ಪ್ರದರ್ಶನದೊಂದಿಗೆ ಸಂಪನ್ನಗೊಂಡಿತು. ಕಡೆಯ ದಿನದಂದು ದೇವರಿಗೆ ವಿಶೇಷ ಪೂಜೆ ಮತ್ತಿತರ ಧಾರ್ಮಿಕ ಕೈಂಕಾರ್ಯಗಳನ್ನು ಭಕ್ತಾದಿಗಳಿಂದ ನೆರವೇರಿತು.