ಧರ್ಮಸ್ಥಳ ಲಕ್ಷದೀಪೋತ್ಸವ: ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ

| Published : Nov 16 2025, 03:00 AM IST

ಧರ್ಮಸ್ಥಳ ಲಕ್ಷದೀಪೋತ್ಸವ: ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀ ಮಂಜುನಾಥೇಶ್ವರ ಪ್ರೌಢಶಾಲಾ ವಠಾರದಲ್ಲಿ ಏರ್ಪಡಿಲಾಗಿರುವ ರಾಜ್ಯಮಟ್ಟದ ವಸ್ತು ಪ್ರದರ್ಶನದ ಉದ್ಘಾಟನೆಯೊಂದಿಗೆ ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ ಲಕ್ಷದೀಪೋತ್ಸವ ಕಾರ್ಯಕ್ರಮಗಳು ಶನಿವಾರ ಶುಭಾರಂಭಗೊಂಡವು.

ಲಕ್ಷದೀಪೋತ್ಸವ ಕಾರ್ಯಕ್ರಮಗಳಿಗೆ ಶುಭಾರಂಭ । ವಿವಿಧ ಮಳಿಗೆಗಳುಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಶ್ರೀ ಮಂಜುನಾಥೇಶ್ವರ ಪ್ರೌಢಶಾಲಾ ವಠಾರದಲ್ಲಿ ಏರ್ಪಡಿಲಾಗಿರುವ ರಾಜ್ಯಮಟ್ಟದ ವಸ್ತು ಪ್ರದರ್ಶನದ ಉದ್ಘಾಟನೆಯೊಂದಿಗೆ ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ ಲಕ್ಷದೀಪೋತ್ಸವ ಕಾರ್ಯಕ್ರಮಗಳು ಶನಿವಾರ ಶುಭಾರಂಭಗೊಂಡವು.ಬೆಳಗ್ಗೆ 9.30ಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ಶಾಸಕ ಹರೀಶ್ ಪೂಂಜ ವಸ್ತುಪ್ರದರ್ಶನ ಉದ್ಘಾಟಿಸಿದರು. ಅಲ್ಲಿರುವ ಗಂಟೆ ಬಾರಿಸುವ ಮೂಲಕ ಪ್ರದರ್ಶನ ಮತ್ತು ವ್ಯಾಪಾರಕ್ಕೆ ಚಾಲನೆ ನೀಡಿದರು.

ಪುಸ್ತಕ ಮಳಿಗೆಗಳು, ಆರೋಗ್ಯ, ಶಿಕ್ಷಣ, ಕೃಷಿ, ವಾಣಿಜ್ಯ, ಜೀವವಿಮೆ, ಸರ್ಕಾರದ ವಿವಿಧ ಇಲಾಖಾ ಮಳಿಗೆಗಳು, ಅಂಚೆ ಇಲಾಖೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸಿರಿ ಗ್ರಾಮೋದ್ಯೋಗ ಸಂಸ್ಥೆ, ಗ್ರಾಮೀಣ ಕರಕುಶಲ ಕೈಗಾರಿಕೆಗಳು, ವಸ್ತ್ರ ಮಳಿಗೆಗಳು, ಆಯುರ್ವೇದ ಔಷಧಿ ಮಳಿಗೆಗಳು, ಪೂಜಾ ಸಾಮಗ್ರಿಗಳು, ಸಿರಿಧಾನ್ಯಗಳು, ಅಡಕೆ ಹಾಳೆತಟ್ಟೆ ತಯಾರಿ, ಸೇರಿದಂತೆ ೩೫೦ಕ್ಕೂ ಮಿಕ್ಕಿ ಮಳಿಗೆಗಳಿದ್ದು ಪ್ರೇಕ್ಷಕರ ಕಣ್ಮನ ಸೆಳೆಯಲು ಸಜ್ಜಾಗಿವೆ.

ಹೆಗ್ಗಡೆಯವರು ಎಲ್ಲ ಮಳಿಗೆಗಳಿಗೂ ಭೇಟಿ ನೀಡಿ ಶುಭ ಹಾರೈಸಿದರು.ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ.ಎಸ್. ಸತೀಶ್ಚಂದ್ರ, ಎಸ್‌ಡಿಎಂ ಕಾಲೇಜಿನ ಪ್ರಾಚಾರ್ಯ ಪ್ರೊ. ಪಿ. ವಿಶ್ವನಾಥ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್, ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಸಿಇಒ ಜನಾರ್ದನ ಕೆ.ಎನ್., ಎಸ್‌ಡಿಎಂ ಕಾಲೇಜಿನ ಡಾ. ಶ್ರೀಧರ ಭಟ್, ಪಿ. ಜಿನರಾಜ ಆರಿಗ, ವಗ್ಗ ಮೊದಲಾದವರು ಉಪಸ್ಥಿತರಿದ್ದರು.ನ.೨೦ರ ವರೆಗೆ ಪ್ರತಿ ದಿನ ಬೆಳಗ್ಗೆ ಒಂಭತ್ತು ಗಂಟೆಯಿಂದ ರಾತ್ರಿ ಹತ್ತು ಗಂಟೆ ವರೆಗೆ ವಸ್ತುಪ್ರದರ್ಶನಕ್ಕೆ ಉಚಿತ ಪ್ರವೇಶಾವಕಾಶವಿದೆ. ವಸ್ತುಪ್ರದರ್ಶನ ವೇದಿಕೆಯಲ್ಲಿ ಪ್ರತಿದಿನ ಸಂಜೆ ಆರು ಗಂಟೆಯಿಂದ ಖ್ಯಾತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಶನಿವಾರ ಸಂಜೆ 6 ಗಂಟೆಯಿಂದ ಶ್ರೀ ಸರ್ವೇಶ ದೇವಸ್ಥಳಿ ಉಜಿರೆ ಮತ್ತು ಸಹ ಕಲಾವಿದರಿಂದ ಭಕ್ತಿರಸಾಂಜಲಿ, ಬಳಿಕ ಬೆಂಗಳೂರಿನ ಮೇಘನಾ ವರದರಾಜು ಅವರಿಂದ ನೃತ್ಯ ನಿವೇದನಮ್, ಆ ಬಳಿಕ ಕಿನ್ನಿಗೋಳಿಯ ಲೋಲಾಕ್ಷ ಮತ್ತು ಬಳಗದವರಿಂದ ಜಾದೂ ಪ್ರದರ್ಶನ, ಕಾರ್ಕಳದ ಶ್ರೀ ನೃತ್ಯಾಲಯದ ವಿದ್ವಾನ್ ಸುಬ್ರಹ್ಮಣ್ಯ ನಾವಡ ಇವರಿಂದ ನೃತ್ಯರೂಪಕ, ಕೊನೆಯಲ್ಲಿ ಎಸ್‌ಡಿಎಂ ಕಾಲೇಜು ಯಕ್ಷಗಾನ ಕಲಾ ಕೇಂದ್ರದ ವಿದ್ಯಾರ್ಥಿಗಳಿಂದ ಚಕ್ರವ್ಯೂಹ ಯಕ್ಷಗಾನ ಪ್ರದರ್ಶನ ನಡೆಯಿತು.

ದೇವಳದಲ್ಲಿ ನಡೆಯುತ್ತಿರುವ ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ರಾತ್ರಿ ಶ್ರೀ ಮಂಜುನಾಥ ಸ್ವಾಮಿಯ ಹೊಸಕಟ್ಟೆ ಉತ್ಸವ ಸಂಪನ್ನಗೊಂಡಿತು.

ಇಂದಿನ ಕಾರ್ಯಕ್ರಮಗಳು:

ಸಂಜೆ 6 ಗಂಟೆಯಿಂದ ಧಾರವಾಡದ ಡಾ.ವಿಜಯ ಕುಮಾರ್ ಪಾಟೀಲ್ ಇವರಿಂದ ಭಜನ್ ಸಂಧ್ಯಾ, 7 ಗಂಟೆಯಿಂದ ವಿದುಷಿ ನಿಶಾ ಪ್ರಸಾದ್ ಮಣೂರು ಇವರಿಂದ ನೃತ್ಯಾಂಜಲಿ, 8 ಗಂಟೆಯಿಂದ ಧರಿತ್ರಿ ಭಿಡೆ ಹಾಗೂ ಹಂಸಿನಿ ಭಿಡೆ ಸಹೋದರಿಯರಿಂದ ಯುಗಳ ನೃತ್ಯ, 9 ಗಂಟೆಯಿಂದ ಬೆಂಗಳೂರು ಮಹಿಮಾ ಎನ್. ಮರಾಠೆ ಇವರಿಂದ ಶಾಸ್ತ್ರೀಯ ಸಮೂಹ ನೃತ್ಯ ಬಳಿಕ ಕೊನೆಯಲ್ಲಿ ವಿದುಷಿ ವಿದ್ಯಾ ಮನೋಜ್ ಕಲಾನಿಕೇತನ ಕಲ್ಲಡ್ಕ ಇವರಿಂದ ನೃತ್ಯ ವಲ್ಲರಿ ಇರಲಿದೆ. ರಾತ್ರಿ ಶ್ರೀ ಮಂಜುನಾಥ ಸ್ವಾಮಿಯ ಕೆರೆಕಟ್ಟೆ ಉತ್ಸವ ನಡೆಯಲಿದೆ.

ಅಮೃತವರ್ಷಿಣಿ ಸಭಾಭವನದಲ್ಲಿ:

ಸಂಜೆ 5.30 ರಿಂದ ನಾಗಸ್ವರ ವಾದನ, ರಾತ್ರಿ ಗಂಟೆ 7ರಿಂದ ಬೆಂಗಳೂರಿನ ಕೌಶಿಕ್ ಐತಾಳ್ ಮತ್ತು ತಂಡದವರಿಂದ ಹಿಂದುಸ್ಥಾನಿ ಸಂಗೀತ ಮತ್ತು ಭಜನ್, ರಾತ್ರಿ ಗಂಟೆ 8.15ರಿಂದ ಹುಬ್ಬಳ್ಳಿ ಸುಜಯ ಶಾನಭಾಗ ನಿರ್ದೇಶನದಲ್ಲಿ ಸನಾತನೀ ನೃತ್ಯವೈಭವ ಸಂಪನ್ನಗೊಳ್ಳಲಿದೆ.

ರಾತ್ರಿ ಶ್ರೀ ಮಂಜುನಾಥ ಸ್ವಾಮಿಯ ಲಲಿತೋದ್ಯಾನೋತ್ಸವ ನೆರವೇರಲಿದೆ.