ಧರ್ಮಸ್ಥಳ ಮಂಜುನಾಥ ನಂಬಿದವರಿಗೆ ಒಳ್ಳೆಯದನ್ನೇ ಮಾಡಿದ್ದಾನೆ

| Published : Oct 13 2025, 02:01 AM IST

ಸಾರಾಂಶ

ಹೊಸದುರ್ಗ ನಗರದ ರಾಧಾಕೃಷ್ಣ ಕಲ್ಯಾಣ ಮಂದಿರದಲ್ಲಿ ನಡೆದ ಗಾಂಧಿ ಸ್ಮರಣೆ ಮತ್ತು ಮತ್ತು ದುಶ್ಚಟಗಳ ಮುಕ್ತ ಜಾಗೃತಿ ಕಾರ್ಯಕ್ರಮವನ್ನು ಶಾಸಕ ಬಿ.ಜಿ.ಗೋವಿಂದಪ್ಪ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಹೊಸದುರ್ಗ:

ಧರ್ಮಸ್ಥಳದ ಮಂಜುನಾಥನನ್ನು ನಂಬಿದವರಿಗೆ ಒಳ್ಳೆಯದನ್ನೇ ಮಾಡಿದ್ದಾನೆ ಮಂಜುನಾಥನಿಂದ ಎಲ್ಲಿಯೂ ಕೆಡಕು ಆಗಿಲ್ಲ, ವೀರೇಂದ್ರ ಹೆಗ್ಗಡೆಯವರ ವಿರುದ್ಧ ಪಿತೂರಿ ಮತ್ತು ಆರೋಪಗಳನ್ನು ಮಾಡಿದವರನ್ನು ಧರ್ಮಸ್ಥಳ ಮಂಜುನಾಥ ಎಂದಿಗೂ ಕ್ಷಮಿಸುವುದಿಲ್ಲ ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಹೇಳಿದರು.

ನಗರದ ರಾಧಾಕೃಷ್ಣ ಕಲ್ಯಾಣ ಮಂದಿರದಲ್ಲಿ ನಡೆದ ಗಾಂಧಿ ಸ್ಮರಣೆ ಮತ್ತು ದುಶ್ಚಟಗಳ ಮುಕ್ತ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವೀರೇಂದ್ರ ಹೆಗ್ಗಡೆ ಹೇಮಾವತಿ ಹೆಗಡೆಯವರ ಮಾರ್ಗದರ್ಶನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ನಿರ್ಮಿಸಿ ಆರ್ಥಿಕ ಸಾಮಾಜಿಕ ಶೈಕ್ಷಣಿಕ ಧಾರ್ಮಿಕವಾಗಿ ಎಲ್ಲರಿಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ಸಮಾನ ಅವಕಾಶ ಕಲ್ಪಿಸಿದೆ ಕುಟುಂಬದ ಎಲ್ಲ ಸಮಸ್ಯೆಗಳಿಗೆ ಧರ್ಮಸ್ಥಳ ಸಂಸ್ಥೆ ಪರಿಹಾರ ನೀಡಿದೆ ಎಂದರು.

ಅಹಿಂಸಾ ಮಾರ್ಗದಿಂದ ದೇಶಕ್ಕೆ ಸ್ವತಂತ್ರ ತಂದುಕೊಟ್ಟ ಕೀರ್ತಿ ಮಹಾತ್ಮ ಗಾಂಧೀಜಿಯವರಿಗೆ ಸಲ್ಲುತ್ತದೆ. ಒಗ್ಗಟ್ಟು ಮತ್ತು ಶಿಸ್ತಿನಿಂದ ಸಂವಿಧಾನದ ಚೌಕಟ್ಟಿನಲ್ಲಿ ದೇಶವನ್ನ ಮುನ್ನಡೆಸಲಾಗುತ್ತಿದೆ. ಧರ್ಮಸ್ಥಳ ಸಂಘದ ಸಾಲವನ್ನು ಸಕಾಲಕ್ಕೆ ಮರುಪಾವತಿ ಮಾಡುವ ಜವಾಬ್ದಾರಿ ಸಾಲ ಪಡೆದವರ ಮೇಲೆ ಇರುತ್ತದೆ ಎಂದರು.

ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ಭಾರತೀಯರಾದ ಎಲ್ಲರೂ ಮಧ್ಯಪಾನದ ವಿರುದ್ಧ ಹೋರಾಡುವ ಅವಶ್ಯಕತೆ ಇದೆ ಎಂದು 83 ವರ್ಷಗಳ ಹಿಂದೆಯೇ ಮಹಾತ್ಮ ಗಾಂಧೀಜಿ ತಿಳಿಸಿ ಹೋಗಿದ್ದಾರೆ. ಮಧ್ಯಪಾನ ಮುಕ್ತ ಬದುಕು ಕಟ್ಟಿಕೊಡುವ ಕೆಲಸವನ್ನು ಪೂಜ್ಯ ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ವತಿಯಿಂದ ಮಾಡುತ್ತಿದ್ದಾರೆ. ಮಹಿಳೆಯರ ಆರ್ಥಿಕ ಸ್ವಾತಂತ್ರ್ಯ ಮಹಾತ್ಮ ಗಾಂಧೀಜಿಯವರ ಕಲ್ಪನೆಯಾಗಿತ್ತು ಎಂದರು.

ಬಿಜೆಪಿ ಮಂಡಲ ಅಧ್ಯಕ್ಷ ಅಣ್ಣಪ್ಪ ಸ್ವಾಮಿ ಮಾತನಾಡಿ, ಜಗತ್ತಿನಲ್ಲಿ ಅಹಿಂಸೆಯಿಂದ ಏನನ್ನಾದರೂ ಸಾಧಿಸಬಹುದು ಎಂದು ತೋರಿಸಿಕೊಟ್ಟ ಗೌತಮ ಬುದ್ಧನ ಬಿಟ್ಟರೆ ಮುಂದಿನ ಸ್ಥಾನದಲ್ಲಿ ಮಹಾತ್ಮ ಗಾಂಧೀಜಿಯವರು ನಿಲ್ಲುತ್ತಾರೆ, ಅವರು ತಮ್ಮ ಸ್ವಂತ ಜೀವನದಲ್ಲಿ ಅಳವಡಿಸಿಕೊಂಡ ಮಾರ್ಗ ಮತ್ತು ತತ್ವಗಳು ಇಂದಿನ ಪೀಳಿಗೆಗೆ ಶಕ್ತಿಯಾಗಿದೆ, ಸತ್ಯ, ಅಹಿಂಸೆ ಮತ್ತು ಶುಚಿತ್ವ, ಅವರ ಬದುಕಿನ ಸಂದೇಶಗಳು, ಗ್ರಾಮ ವಿಕಾಸವಾಗದೆ ಹೊರೆತು ದೇಶದ ಉದ್ದಾರ ಸಾಧ್ಯವಿಲ್ಲವೆಂದು ಅಂದೇ ತಿಳಿಸಿ ಹೋಗಿದ್ದಾರೆ, ಪ್ರಸ್ತುತ ಗ್ರಾಮಗಳ ಅಭಿವೃದ್ಧಿಯಾಗಿದೆಯೇ ಎಂದು ಇಂದು ನಾವು ಆತ್ಮವಲೋಕನ ಮಾಡಿಕೊಳ್ಳಬೇಕಾಗಿದೆ, ನಮ್ಮನ್ನ ಆಳಿದ ಎಲ್ಲ ಸರ್ಕಾರಗಳು ಪಾನ ನಿಷೇಧ ಮಾಡಿದ್ದರೆ ಧರ್ಮಸ್ಥಳ ಸಂಸ್ಥೆಯವರು ಮಧ್ಯವರ್ಜನ ಶಿಬಿರ ಮಾಡುವ ಅವಶ್ಯಕತೆಯೇ ಬರುತ್ತಿರಲಿಲ್ಲ ಎಂದರು.

ರಾಜ್ಯ ಕೆಪಿಸಿಸಿ ಸದಸ್ಯ ಅಲ್ತಾಫ್ ಪಾಷ ಮಾತನಾಡಿ, ದುಷ್ಟರ ಮಾತು ಕೇಳಿದರೆ ಚರಂಡಿಯಲ್ಲಿ ಬೀಳುತ್ತಾನೆ. ಧರ್ಮಸ್ಥಳ ಸಂಘದ ಸಂಸ್ಕಾರದಿಂದ ತಾಲೂಕಿನ ಜನತೆ ರಾಜನ ಹಾಗೆ ಬದುಕುತ್ತಿದ್ದಾರೆ. ಸಮಾಜದಲ್ಲಿ ಸಾಕಷ್ಟು ಜನ ರಾವಣರು ಇರುತ್ತಾರೆ. ಧರ್ಮವನ್ನು ಕೆಣಕಿದವನು ವಿನಾಶವಾಗುತ್ತಾನೆ ಎಂದರು. ಇದೇ ಸಂದರ್ಭದಲ್ಲಿ ಮಧ್ಯಮಕ್ತ ಬದುಕು ಕಟ್ಟಿಕೊಂಡ ನವ ಜೀವನ ಸಮಿತಿ ಸದಸ್ಯರನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಧರ್ಮಸ್ಥಳ ಯೋಜನಾಧಿಕಾರಿ ಚಂದ್ರಶೇಖರ್, ಶಿವಣ್ಣ, ಜಿಪಂ ಮಾಜಿ ಸದಸ್ಯ ದೊಡ್ಡಘಟ್ಟ ದ್ಯಾಮಪ್ಪ, ಕೃಷಿಕ ಸಮಾಜದ ಅಧ್ಯಕ್ಷರಾಗಿ ಶಿವಮೂರ್ತಿ, ಮುಖಂಡ ಆಗ್ರೋ ಶಿವಣ್ಣ, ಕೆಡಿಪಿ ಸದಸ್ಯೆ ದೀಪಿಕಾ ಸತೀಶ್, ವಕೀಲರ ಸಂಘದ ಅಧ್ಯಕ್ಷ ಬೊಮ್ಮಣ್ಣ, ಭೋವಿ ಸಮಾಜದ ಅಧ್ಯಕ್ಷ ಸುಬ್ಬಣ್ಣ, ಇವಿ, ಶೀತಲ್ ಕುಮಾರ್, ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಶಾಂತಕುಮಾರ್, ಸದಸ್ಯರಾದ ಬಿ.ಪಿ ಓಂಕಾರಪ್ಪ, ಬೀಸನಹಳ್ಳಿ ಜಗದೀಶ್, ತುಂಬಿನಕೆರೆ ಬಸವರಾಜ್, ಸಿಂಧು ಅಶೋಕ್, ರಂಗಸ್ವಾಮಿ, ಹಾಗೂ ಧರ್ಮಸ್ಥಳ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಇದ್ದರು.