ಮಹಿಳೆಯರ ಆರ್ಥಿಕ ಸಬಲೀಕರಣದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘವೇ ಮುಖ್ಯ ಕಾರಣ.

ಶಿರಹಟ್ಟಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಿ ಮಹಿಳೆಯರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ರಾಮಲಿಂಗೇಶ್ವರ ದಾಸೋಹ ಮಠದ ಬಸವರಾಜ ಸ್ವಾಮಿಗಳು ತಿಳಿಸಿದರು.

ತಾಲೂಕಿನ ಬೆಳ್ಳಟ್ಟಿ ಗ್ರಾಮದ ಎಪಿಎಂಸಿ ಸಭಾಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಸತ್ಯನಾರಾಯಣ ಪೂಜಾ ಸಮಿತಿಯ ಸಹಯೋಗದೊಂದಿಗೆ ನಡೆದ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರ ಆರ್ಥಿಕ ಸಬಲೀಕರಣದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ. ವೀರೇಂದ್ರ ಹೆಗ್ಗಡೆಯವರ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘವೇ ಮುಖ್ಯ ಕಾರಣ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗ್ರಾಮೀಣರ ಬದುಕಿಗೆ ಆಶ್ರಯವಾಗಿದೆ. ಸರ್ಕಾರ ಮಾಡಬೇಕಾದ ಕೆಲಸವನ್ನು ಧರ್ಮಸ್ಥಳದ ಧರ್ಮಾಧಿಕಾರಿಗಳು ಮಾಡುತ್ತಿದ್ದಾರೆ ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜನರ ಅಭಿವೃದ್ಧಿಗೋಸ್ಕರ ಹಾಕಿಕೊಂಡಿರುವ ಯೋಜನೆಗಳು ಯಶಸ್ವಿಯಾಗಿ ನಡೆಯುತ್ತಿದ್ದು, ಈ ಭಾಗದ ಜನರಿಗೆ ಉಪಯುಕ್ತವಾಗಿವೆ. ಸಂಘಗಳನ್ನು ಕೇವಲ ಸಾಲದ ಉದ್ದೇಶಕ್ಕೆ ಮಾಡಿಲ್ಲ. ಉಳಿತಾಯದ ಶಿಸ್ತು, ಶಿಕ್ಷಣಕ್ಕೆ ಆದ್ಯತೆ, ಸ್ವ- ಉದ್ಯೋಗಕ್ಕೆ ಪ್ರೇರಣೆ ನೀಡಲಾಗುತ್ತಿದೆ ಎಂದರು.

ಜನಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷ ಶಿವಪ್ರಕಾಶ ಮಹಾಜನಶೆಟ್ಟರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಉನ್ನತ ಸಾಧನೆ ಮಾಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರುತ್ತಿರುವುದು ಸಂತಸದ ವಿಚಾರ. ಮಹಿಳೆಯರು ಪ್ರಾಮಾಣಿವಾಗಿ ಕರ್ತವ್ಯ ನಿರ್ವಹಿಸಿ ಸಂಸ್ಥೆಯ ಯೋಜನೆಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ಯಶಸ್ಸು ಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ಳಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರಮೇಶ ನಿರ್ವಾಣಶೆಟ್ಟರ್ ವಹಿಸಿದ್ದರು. ಗ್ರಾಮ ಪಂಚಾಯಿತಿ ಸದಸ್ಯ ತಿಮ್ಮರೆಡ್ಡಿ ಪಿ. ಮರಡ್ಡಿ, ಮೋಹನ್ ಗುತ್ಯಮ್ಮನವರ, ಪರಶುರಾಮ್ ಮಲ್ಲಾಡದ, ಗಂಗವ್ವ ತಳವಾರ, ಕೊಟ್ರೇಶ ಸಜ್ಜನ ಯೋಜನಾಧಿಕಾರಿ ಪುನೀತ್ ಓಲೆಕಾರ್ ಇದ್ದರು.