ರಿಪ್ಪನ್‍ಪೇಟೆ: ಧರ್ಮಸ್ಥಳ ಸಂಘದ ಯೋಜನೆಗಳು ಸಮಾಜಮುಖಿಯಾಗಿದ್ದು, ಸರ್ವರ ಹಿತವನ್ನು ಬಯಸುವುದಾಗಿವೆ. ಈ ಯೋಜನೆಗಳನ್ನು ಪ್ರಸಾದದಂತೆ ಸ್ವೀಕರಿಸಿ ಕೆರೆಯನ್ನು ಇನ್ನಷ್ಟು ಸುಂದರ ಹಾಗೂ ಉಪಯುಕ್ತವಾಗಿಸುವಲ್ಲಿ ಎಲ್ಲರೂ ಕೈಜೊಡಿಸೋಣ ಎಂದು ಜನಜಾಗೃತಿ ಸಮಿತಿ ನಾಗರತ್ನ ದೇವರಾಜ್ ಕರೆ ನೀಡಿದರು.
ಸಮೀಪದ ಬಾಳೂರು ಗ್ರಾಪಂ ವ್ಯಾಪ್ತಿಯ ಕೆದಲುಗುಡ್ಡೆ ಗ್ರಾಮದ ದ್ಯಾವಸ್‍ಕೆರೆ ಅಭಿವೃದ್ಧಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಹೂಳೆತ್ತುವ ಕಾಮಗಾರಿಗೆ ಗುದ್ದಲಿಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಕೆರೆಯೋಜನೆ ಆಭಿಯಂತರ ಹರೀಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮಸ್ಥರ ಸಹಕಾರ ಮತ್ತು ಗ್ರಾಮ ಸಮಿತಿಯ ನಿರ್ಣಯದ ಆಧಾರದ ಮೇಲೆ ಪಂಚಾಯಿತಿಯ ಅನುಮೋದನೆಯೊಂದಿಗೆ ಕ್ಷೇತ್ರದಿಂದ ಯೋಜನೆಗೆ ಅನುದಾನ ಮಂಜೂರಾಗಿದೆ ಎಂದು ಹೇಳಿ, ಕೆರೆ ಆಭಿವೃದ್ಧಿ ಕಾಮಗಾರಿ ಸಂಪೂರ್ಣ ಜವಾಬ್ದಾರಿಯನ್ನು ಗ್ರಾಮಸ್ಥರೇ ನಿರ್ವಹಿಸುವ ಮೂಲಕ ಪರಿಸರ ಸಂರಕ್ಷಣೆ, ಅಂತರ್ಜಲ ಮಟ್ಟ ಏರಿಕೆ ಹಾಗೂ ಪ್ರಾಣಿ ಪಕ್ಷಿಗಳಿಗೆ ನೀರಿನ ಸೌಲಭ್ಯ ಒದಗಿಸುವ ಉದ್ದೇಶ ಹೊಂದಲಾಗಿದೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಮುರುಳಿಧರ ಶೆಟ್ಟಿ ಮಾತನಾಡಿದರು.ಕೆರೆ ಅಭಿವೃದ್ಧಿ ವ್ಯವಸ್ಥಾಪನ ಸಮಿತಿಯ ನಾಗರಾಜ್, ಶನೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ನಾಗರಾಜ, ಎಂ.ಐ.ಎಸ್.ಯೋಜನಾಧಿಕಾರಿ ಬಾಲಕೃಷ್ಣ, ತಾಲೂಕು ಯೋಜನಾಧಿಕಾರಿ ಪ್ರದೀಪ್, ಉದಯ್ ಅಚಾರ್, ನಟರಾಜ್, ಮಂಜುನಾಥ, ಜಯಂತಿ, ರಾಜೇಶ್ವರಿ, ರಮ್ಯ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.