ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸರ್ಕಾರದ ಜೊತೆ ಕೈಜೋಡಿಸಿಕೊಂಡು ಜನ ಸಂಘಟನೆಯ ಮುಖೇನ ಸಾಕಷ್ಟು ಜನಪರ, ಅಭಿವೃದ್ಧಿಪರ, ಧಾರ್ಮಿಕ, ಕೃಷಿಯಂತಹ ಕಾರ್ಯಕ್ರಮಗಳನ್ನು ಏರ್ಪಡಿಸಿ ಜನಮನ್ನಣೆಗೆ ಪಾತ್ರವಾಗಿದೆ ಎಂದು ಶಾಸಕ ಷಡಕ್ಷರಿಯವರು ತಿಳಿಸಿದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕಿನ ಹೊನ್ನವಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ಸಾಮೂಹಿಕ ಶ್ರೀ ಶನಿಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಯೋಜನೆ ಬಡ ಜನತೆಗೆ ಆರ್ಥಿಕ ಶಿಸ್ತನ್ನು ಕಲಿಸಿಕೊಡುವುದರೊಂದಿಗೆ ಮಹಿಳೆಯರ ಜನ ಮನ್ನಣೆಗೆ ಬಹುದೊಡ್ಡ ಪಾತ್ರವಹಿಸಿದೆ. ಬಡ ಹಾಗೂ ಮಧ್ಯಮ ವರ್ಗದವರ ಆರ್ಥಿಕ ಶಕ್ತಿ ಹಂತಹಂತವಾಗಿ ಗಟ್ಟಿಯಾಗಲು ಈ ಸಂಸ್ಥೆ ಹೆಚ್ಚು ಶ್ರಮಿಸಿದ್ದು ಮುಂದೆಯೂ ಹೀಗೆ ಕೆಲಸ ಮಾಡಲಿ ಎಂದು ತಿಳಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಸತೀಶ್ ಸುವರ್ಣ ಮಾತನಾಡಿದರು. ಬಳಿಕ ಕೀರ್ತನಕಾರರಾದ ಡಾ. ಅಶೋಕ್ ಕೆ.ಪಿ ರವರು ಶನಿದೇವರ ಕಥಾ ಪಾರಾಯಣ ನಡೆಸಿಕೊಟ್ಟರು. ಕಾರ್ಯಕ್ರಮದ ಮೊದಲಿಗೆ ಶ್ರೀ ಶನೇಶ್ವರಸ್ವಾಮಿಯ ಅರ್ಚಕರಾದ ಶ್ರೀ ಅಡವೀಶಪ್ಪನವರ ನೇತೃತ್ವದಲ್ಲಿ ಹೊನ್ನವಳ್ಳಿಯ ನೂರೈವತ್ತೊಂದು ದಂಪತಿಗಳ ಸಮಕ್ಷಮದಲ್ಲಿ ಶ್ರೀ ಸ್ವಾಮಿ ಶನಿದೇವರ ಪೂಜೆ, ನವಗ್ರಹಗಳ ಪೂಜೆ ನೆರವೇರಿತು. ಹೊನ್ನವಳ್ಳಿ ಗ್ರಾಮಪಂಚಾಯತ್ ಅಧ್ಯಕ್ಷ ದೊಡ್ಡಯ್ಯಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಹೊನ್ನವಳ್ಳಿ ಹೋಬಳಿಯ ಸಬ್ ಇನ್ಸ್‌ಪೆಕ್ಟರ್ ಚಂದ್ರಕಾಂತ್, ಮತ್ತಿಹಳ್ಳಿ ಗ್ರಾಮ ಪಂ.ಸದಸ್ಯರಾದ ಹರೀಶ್ ಗೌಡ, ಹೊನ್ನವಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಶ್ರೀಕಂಠಮೂರ್ತಿ, ಪ್ರಸಾದ್, ರೈತ ಹೋರಾಟಗಾರರಾದ ಮುಪ್ನೇಗೌಡ, ಸಾಮೂಹಿಕ ಶ್ರೀ ಶನಿಪೂಜಾ ಸಮಿತಿ ಅಧ್ಯಕ್ಷ ಜಗದೀಶ್,ಉದಯ್.ಕೆ ಇತರರಿದ್ದರು.