ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹಗಳನ್ನು ಹೂತು ಹಾಕಿದ ಆರೋಪದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅನಾಮಿಕ ಸಾಕ್ಷಿ ದೂರುದಾರ ಗುರುತಿಸಿರುವ 11 ಮತ್ತು 12ನೇ ಗುರುತು ಸ್ಥಳದಲ್ಲಿ ಮಂಗಳವಾರ ಅಗೆತ ನಡೆಸಲಾಯಿತಾದರೂ, ಯಾವುದೇ ಅವಶೇಷಗಳು ಪತ್ತೆಯಾಗಲಿಲ್ಲ.
ಉತ್ಖನನ ಕಾರ್ಯಾಚರಣೆಯ 7ನೇ ದಿನವಾದ ಮಂಗಳವಾರ 11ನೇ ಸ್ಥಳದಲ್ಲಿ ಬೆಳಗ್ಗೆ 11.30ರಿಂದ ಮಧ್ಯಾಹ್ನ 1.55ರವರೆಗೆ ಅಗೆತ ನಡೆಸಲಾಯಿತು. ದೂರುದಾರನ ಜೊತೆ ಎಸ್ಐಟಿ ಅಧಿಕಾರಿಗಳು ಹಾಗೂ ಇತರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಪೌರ ಕಾರ್ಮಿಕರನ್ನು ಬಳಸಿಕೊಂಡು ಸುಮಾರು 6 ಅಡಿಯಷ್ಟು ಗುಂಡಿ ಅಗೆದರೂ ಯಾವುದೇ ಅವಶೇಷ ಸಿಗಲಿಲ್ಲ. ಬಳಿಕ, ಈ ಗುಂಡಿ ಮುಚ್ಚಲಾಯಿತು.ಭೋಜನ ವಿರಾಮದ ಬಳಿಕ, 3.15ರಿಂದ ನೇತ್ರಾವತಿ ಸಮೀಪ ರಾಷ್ಟ್ರೀಯ ಹೆದ್ದಾರಿಯಿಂದ ಕೆಲವೇ ಅಡಿ ದೂರದಲ್ಲಿ ದೂರುದಾರ ಗುರುತಿಸಿರುವ 12ನೇ ಸ್ಥಳದಲ್ಲಿ ಹಿಟಾಚಿ ಬಳಸಿ ಉತ್ಖನನ ನಡೆಸಲಾಯಿತು. ಸಂಜೆ 4:45ರ ಸುಮಾರಿಗೆ ಕಾರ್ಯಾಚರಣೆ ಅಂತ್ಯಗೊಂಡಿತು. ಸುಮಾರು 6 ಅಡಿಗಳಷ್ಟು ಗುಂಡಿ ಅಗೆದರೂ, ಯಾವುದೇ ಕುರುಹು ಪತ್ತೆಯಾಗಲಿಲ್ಲ. ನಂತರ ಈ ಗುಂಡಿಯನ್ನೂ ಮುಚ್ಚಲಾಯಿತು. ಈ ಎರಡೂ ಸ್ಥಳಗಳು ರಸ್ತೆಗೆ ತೀರಾ ಸಮೀಪವಿದ್ದ ಹಿನ್ನೆಲೆಯಲ್ಲಿ ಶೆಡ್ ನೆಟ್ ಕಟ್ಟಿ, ಪೊಲೀಸರ ಬಿಗಿ ಬಂದೋಬಸ್ತಿನಲ್ಲಿ ಕಾರ್ಯಾಚರಣೆ ನಡೆಸಲಾಯಿತು.
ಉತ್ಖನನ ಕಾರ್ಯಾಚರಣೆಯ 8ನೇ ದಿನವಾದ ಬುಧವಾರ, 13ನೇ ಸ್ಥಳದಲ್ಲಿ ಉತ್ಖನನ ಕಾರ್ಯ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಕಾರ್ಯಾಚರಣೆ ನಡೆದು ಬಂದ ಹಂತಗಳು...: - ವಿಶೇಷ ತನಿಖಾ ತಂಡದ (ಎಸ್‌ಐಟಿ) ನೇತೃತ್ವದಲ್ಲಿ ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನಘಟ್ಟ ಪರಿಸರದಲ್ಲಿ ಜು.28ರಂದು ಸ್ಥಳ ಮಹಜರು ಪ್ರಕ್ರಿಯೆ ಆರಂಭವಾಗಿದ್ದು, ಅಂದು ಅನಾಮಿಕ ದೂರುದಾರ 13 ಸ್ಥಳಗಳನ್ನು ಗುರುತಿಸಿದ್ದ. - ಜು.29ರಂದು 1,2, ಜು.30ರಂದು 3,4,5ನೇ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ನಡೆದಿದ್ದು, ಯಾವುದೇ ಕುರುಹು ಪತ್ತೆಯಾಗಿರಲಿಲ್ಲ. - ಜು.31ರಂದು 6ನೇ ಸ್ಥಳದಲ್ಲಿ ಕಳೆಬರಹದ ಕುರುಹುಗಳು ಪತ್ತೆಯಾಗಿದ್ದವು. - ಆ.1ರಂದು 7 ಹಾಗೂ 8 ಆ.2ರಂದು 9 ಹಾಗೂ 10ನೇ ಸ್ಥಳದಲ್ಲಿ ಶೋಧಕಾರ್ಯ ನಡೆದ ವೇಳೆ ಯಾವುದೇ ಕುರುಹುಗಳು ಕಂಡು ಬಂದಿರಲಿಲ್ಲ. - ಆ.3ರಂದು ಕಾರ್ಯಾಚರಣೆಗೆ ವಿರಾಮ ನೀಡಲಾಗಿತ್ತು.- ಆ.4ರಂದು ಮೊದಲು ಗುರ್ತಿಸಿದ್ದ ಸ್ಥಳದಿಂದ ಬೇರೆ ಸ್ಥಳದಲ್ಲಿ ಕಾರ್ಯಾಚರಣೆ ನಡೆದಿದ್ದು, ಈ ವೇಳೆ ಅಸ್ಥಿಪಂಜರದ ಅವಶೇಷಗಳು ಸಿಕ್ಕಿದ್ದವು. ಆದರೆ, ಇದು ಕೆಲವು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿರುವ ಯಾವುದೋ ವ್ಯಕ್ತಿಯ ಅಸ್ಥಿಪಂಜರವಾಗಿರಬಹುದು ಎಂದು ಶಂಕಿಸಲಾಗಿದೆ. ಸ್ಥಳದಲ್ಲಿ ಹಗ್ಗ ಮೊದಲಾದ ಪರಿಕರಗಳು ಸಿಕ್ಕಿವೆ ಎನ್ನಲಾಗಿದೆ. ಪ್ರಥಮ ಹಂತದಲ್ಲಿ ಗುರುತಿಸಲಾಗಿರುವ 13 ಸ್ಥಳಗಳ ಪೈಕಿ ಕೊನೆಯ ಸ್ಥಳ ನೇತ್ರಾವತಿ-ಅಜಿಕುರಿ ರಸ್ತೆ ಸಮೀಪವಿದ್ದು, ಇಲ್ಲಿ ಬುಧವಾರ ಕಾರ್ಯಾಚರಣೆ ನಡೆಯಲಿದೆ. ಈ ಮೂಲಕ ಒಂದು ಹಂತದ ಕಾರ್ಯಾಚರಣೆ ಪೂರ್ಣಗೊಳ್ಳಲಿದೆ. ಪ್ರಕರಣದ ಮುಂದಿನ ಪ್ರಕ್ರಿಯೆಗಳ ಕುರಿತು ಇನ್ನಷ್ಟೇ ತಿಳಿದು ಬರಬೇಕಿದೆ.ಧರ್ಮಸ್ಥಳ ಗ್ರಾಮದ ಮತ್ತೆರಡು ಎಸ್‌ಐಟಿ ತಂಡಕ್ಕೆ ಹಸ್ತಾಂತರ:ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹಗಳನ್ನು ಹೂತು ಹಾಕಿದ ಆರೋಪದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಡೆಯುತ್ತಿರುವ ಉತ್ಖನನ ಕಾರ್ಯಾಚರಣೆ ವೇಳೆ ಪಾಯಿಂಟ್ 6ರಲ್ಲಿ ಮಾನವನ ಕಳೇಬರ ಪತ್ತೆಯಾಗಿತ್ತು. ಈ ಸಂಬಂಧ ಧರ್ಮಸ್ಥಳ ಠಾಣೆಯಲ್ಲಿ ಯುಡಿಆರ್ (ಅಸಹಜ ಸಾವು ಪ್ರಕರಣ) ದಾಖಲಾಗಿತ್ತು. ಈ ಪ್ರಕರಣವನ್ನೂ ಎಸ್‌ಐಟಿಗೆ ಹಸ್ತಾಂತರಿಸಲಾಗಿದೆ.
ಧರ್ಮಸ್ಥಳ ಗ್ರಾಮದಲ್ಲಿ ಪೊಲೀಸರು ಈ ಹಿಂದೆ ಪ್ರಕರಣ ದಾಖಲಿಸದೇ ಮೃತದೇಹವೊಂದನ್ನು ಹೂತು ಹಾಕಿದ್ದಾರೆ ಎಂದು ಜಯಂತ ಎಂಬುವರು ಧರ್ಮಸ್ಥಳ ಠಾಣೆಗೆ ದೂರರ್ಜಿ ಸಲ್ಲಿಸಿದ್ದರು. ಜೊತೆಗೆ, ಜು.31ರಂದು ಆರನೇ ಸ್ಥಳದಲ್ಲಿ ಉತ್ಖನನ ಕಾರ್ಯಾಚರಣೆ ವೇಳೆ ಪತ್ತೆಯಾದ ಅಸ್ಥಿಪಂಜರಕ್ಕೆ ಸಂಬಂಧಪಟ್ಟಂತೆ ಆ.1ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಯುಡಿಆರ್ ದಾಖಲಾಗಿದೆ. ಈ ಎರಡೂ ಪ್ರಕರಣಗಳನ್ನು ಮುಂದಿನ ತನಿಖೆಗಾಗಿ ಎಸ್‌ಐಟಿಗೆ ಹಸ್ತಾಂತರಿಸಲಾಗಿದೆ. ಈ ಬಗ್ಗೆ ಡಿಜಿಪಿ ಹಾಗೂ ಐಜಿಪಿ ಆದೇಶ ಹೊರಡಿಸಿದ್ದಾರೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.ಈ ಮಧ್ಯೆ, ಕಳೇಬರಗಳನ್ನು ಹೆಚ್ಚಿನ ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪಾಯಿಂಟ್ 11ರಲ್ಲಿ ಸಿಕ್ಕಿದ್ದು ಒಂದಲ್ಲ, 3 ಅಸ್ಥಿಪಂಜರ: ವಕೀಲಧರ್ಮಸ್ಥಳ ಗ್ರಾಮ ಪ್ರಕರಣದಲ್ಲಿ ಸೋಮವಾರ ನಡೆದ ಉತ್ಖನನ ವೇಳೆ ಪಾಯಿಂಟ್ 11ರ ನೂರು ಮೀಟರ್ ದೂರದಲ್ಲಿ ಮೂರು ಮಾನವನ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿವೆ ಎಂದು ದೂರುದಾರೆ ಸುಜಾತ ಭಟ್ಟ ಪರ ವಕೀಲ ಮಂಜುನಾಥ್ ಹೇಳಿದ್ದಾರೆ.ಈ ಸಂಬಂಧ ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ಸೋಮವಾರ ಸಿಕ್ಕಿದ್ದು ಒಂದಲ್ಲ, ಮೂರು ಅಸ್ಥಿಪಂಜರದ ಅವಶೇಷಗಳು. ಪಾಯಿಂಟ್ 11ರ ನೂರು ಮೀಟರ್ ದೂರದಲ್ಲಿ ಮೂರು ಮಾನವನ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿವೆ. ಈ ಪೈಕಿ ಒಂದು ಅವಶೇಷ ಮಹಿಳೆಗೆ ಸೇರಿದ್ದಾಗಿದೆ. ಇದರೊಂದಿಗೆ ಮಹಿಳೆಯ ಸೀರೆಯೂ ಪತ್ತೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಸೋಮವಾರ ಪಾಯಿಂಟ್ 11ರ ಬದಲು ಹೊಸ ಜಾಗದಲ್ಲಿ ಉತ್ಖನನ ನಡೆದಿತ್ತು. ಉತ್ಖನನ ವೇಳೆ ಮಾನವನ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿದ್ದವು.