ಯಾಗಶಾಲೆಯಲ್ಲಿ ಧರ್ಮಯಜ್ಞ, ಪ್ರಾಂಗಣದಲ್ಲಿ ಸೇವಾ ಯಜ್ಞ

| Published : Feb 20 2024, 01:50 AM IST

ಯಾಗಶಾಲೆಯಲ್ಲಿ ಧರ್ಮಯಜ್ಞ, ಪ್ರಾಂಗಣದಲ್ಲಿ ಸೇವಾ ಯಜ್ಞ
Share this Article
  • FB
  • TW
  • Linkdin
  • Email

ಸಾರಾಂಶ

ಸ್ವರ್ಣವಲ್ಲೀ‌ ಮಠದಲ್ಲಿ ಶಿಷ್ಯ ಸ್ವೀಕಾರ ‌ಮಹೋತ್ಸವದ ಹಿನ್ನೆಲೆಯಲ್ಲಿ ಧರ್ಮಯಜ್ಞದ ಜತೆಗೆ ಆಗಮಿಸುವ ಭಕ್ತರಿಗೆ ಸಕಲ ಸೌಲಭ್ಯ, ಸೌಕರ್ಯ ಒದಗಿಸಲು ಕಾರ್ಯಕರ್ತರು ಸೇವಾಯಜ್ಞಕ್ಕೆ ಕಂಕಣ ತೊಟ್ಟಿದ್ದಾರೆ.

ಶಿರಸಿ: ಸ್ವರ್ಣವಲ್ಲೀ‌ ಮಠದಲ್ಲಿ ಶಿಷ್ಯ ಸ್ವೀಕಾರ ‌ಮಹೋತ್ಸವದ ಹಿನ್ನೆಲೆಯಲ್ಲಿ ಧರ್ಮಯಜ್ಞದ ಜತೆಗೆ ಆಗಮಿಸುವ ಭಕ್ತರಿಗೆ ಸಕಲ ಸೌಲಭ್ಯ, ಸೌಕರ್ಯ ಒದಗಿಸಲು ಕಾರ್ಯಕರ್ತರು ಸೇವಾಯಜ್ಞಕ್ಕೆ ಕಂಕಣ ತೊಟ್ಟಿದ್ದಾರೆ.

ಫೆ. ೧೮ರಂದು ಶಿಷ್ಯ ಸ್ವೀಕಾರ ಸಮಾರಂಭಕ್ಕೆ ಚಾಲನೆ ನೀಡಲಾಗಿದ್ದು, ಐದು ದಿನಗಳ ಕಾಲ ಸ್ವರ್ಣವಲ್ಲೀ‌ ಮಠದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರತಿ‌ ದಿನ ೬೦೦ಕ್ಕೂ ಅಧಿಕ ಕಾರ್ಯಕರ್ತರು ಅವಿರತ ಕೆಲಸ ಮಾಡುತ್ತಿದ್ದಾರೆ. ಮಠದಲ್ಲಿಯೇ ೨೫೦ಕ್ಕೂ ಅಧಿಕ ಸ್ವಯಂ ಸೇವಕರು ಐದೂ ದಿನಗಳ ಕಾಲ ವಾಸ್ತವ್ಯ ಮಾಡಿ ಸೇವೆ ಸಲ್ಲಿಸುತ್ತಿದ್ದಾರೆ.

ಸ್ವಯಂ ಸೇವಕರಾಗಿ ಉದ್ಯೋಗಿಗಳು, ಎಂಜಿನಿಯರ್‌ಗಳು, ರೈತರು, ವಿದ್ಯಾರ್ಥಿಗಳು, ವರ್ತಕರು, ಮಾತೃ ಮಂಡಳಿ, ಮಠದ ವಿವಿಧ ಸಮಿತಿಗಳು, ಅಂಗ ಸಂಸ್ಥೆಯ ಪ್ರಮುಖರು, ಕಾರ್ಯಕರ್ತರು, ಶ್ರದ್ಧಾಳುಗಳು ಸೇರಿದಂತೆ ಅನೇಕರು ಸೇವಾ ಯಜ್ಞದಲ್ಲಿ ತೊಡಗಿದ್ದಾರೆ. ಹವ್ಯಕ, ರಾಮಕ್ಷತ್ರಿಯ, ಮರಾಠ, ಸಿದ್ದಿ, ಹಾಲಕ್ಕಿ, ಗೌಳಿ, ಕುಣಬಿ ಹಾಗೂ ಇತರ‌ ಸಮಾಜದವರು ಸೇವಾ ಮನೋಭಾವದಲ್ಲಿ ಕೆಲಸ‌ ಮಾಡುತ್ತಿದ್ದಾರೆ. ಶಿಷ್ಯ ಸ್ವೀಕಾರ ಮಹೋತ್ಸವದ ಯಶಸ್ವಿಗೆ, ಗುರುಗಳ ಸಂಕಲ್ಪಕ್ಕೆ ಕಟಿಬದ್ಧರಾಗಿದ್ದಾರೆ.

೮೦ಕ್ಕೂ ಅಧಿಕ ವೈದಿಕರ ಜತೆಗೆ ೯೦ಕ್ಕೂ ಅಧಿಕ ಪರಿಚಾರಕರು, ದೇವತಾ ಸೇವೆಯಲ್ಲಿ ಪಾರಂಪರಿಕವಾಗಿ ದ್ರವ್ಯ, ಹಣ್ಣುಕಾಯಿ, ಪ್ರಸಾದ ಸೇವೆಯಲ್ಲಿ ೪೦ಕ್ಕೂ ಅಧಿಕ ಜನರು ಪಾಳಿಯ ಪ್ರಕಾರ ಕೆಲಸ ಮಾತ್ತಿದ್ದಾರೆ. ಆಯ್ದ ಕಡೆ ರಕ್ಷಣೆ, ಭದ್ರತೆಗೂ ಕೆಲಸ ಮಾಡುತ್ತಿದ್ದಾರೆ.

ಸ್ವಾಗತ, ಮಾರ್ಗದರ್ಶನಕ್ಕೆ ೩೦ ಜನರು: ಫೆ. ೨೦ರ ತನಕ ಊಟೋಪಚಾರ ವ್ಯವಸ್ಥೆಯಿದ್ದು, ಪ್ರತಿದಿನ ೩೦೦ ಕಾರ್ಯಕರ್ತರು ಕಾರ್ಯ ಮಾಡುತ್ತಿದ್ದಾರೆ. ಕೊನೆಯ ಎರಡು‌ ದಿನ ಫೆ. ೨೧, ೨೨ಕ್ಕೆ ೬೦೦ರಿಂದ ೭೦೦ ಕಾರ್ಯಕರ್ತರು ಅನ್ನ ಪ್ರಸಾದ, ಪಾನೀಯ ಸೇವೆ ನೀಡಲು ಸಜ್ಜಾಗುತ್ತಿದ್ದಾರೆ. ಭಕ್ತರಿಗೆ ಊಟೋಪಚಾರ ಒದಗಿಸಲು ೪೦ ಬಾಣಸಿಗರು ಕೆಲಸ ಮಾಡುತ್ತಿದ್ದಾರೆ.

ಸರ್ವ ಸೇವೆಗೆ ಕಂಟ್ರೋಲ್ ರೂಂ ಮಾಡಲಾಗಿದೆ. ಆರೋಗ್ಯ, ಅಗ್ನಿಶಾಮಕ ದಳ, ಪೊಲೀಸರ ಸಹಕಾರ ಸೇರಿದಂತೆ ವಿವಿಧ ಇಲಾಖೆಗಳೂ ಸಹಕಾರ ನೀಡುತ್ತಿವೆ.

ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಕಳೆದ ಎರಡು‌ ದಿನಗಳಿಂದ ಮಠಕ್ಕೆ ನಿತ್ಯ ಒಂದೂವರೆ ಸಾವಿರಕ್ಕೂ ಅಧಿಕ ವಾಹನಗಳು ಬರುತ್ತಿವೆ. ದ್ವಿಚಕ್ರ, ಕಾರುಗಳ‌ ಪಾರ್ಕಿಂಗ್ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಯತಿಗಳು, ಅತಿ ಗಣ್ಯರು, ಋತ್ವಿಜರು, ಗಣ್ಯರು, ಮಾಧ್ಯಮ, ಪದಾಧಿಕಾರಿಗಳಿಗೆ, ಭಕ್ತರು, ಕಾರ್ಯಕರ್ತರು ಎಂಬ ಪ್ರತ್ಯೇಕ ವಿಭಾಗ ಮಾಡಲಾಗಿದ್ದು, ಸುಮಾರು ೧೧ ಕಡೆ ಸ್ಥಳ ನಿಯೋಜನೆ ಮಾಡಲಾಗಿದೆ. ಮಠದ ಗದ್ದೆಯಲ್ಲಿ ಫೆ. ೨೧, ೨೨ಕ್ಕೆ ವಿಶೇಷ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ೫೦ಕ್ಕೂ ಅಧಿಕ ಸ್ವಯಂ ಸೇವಕರು ಬಿಸಿಲು ಲೆಕ್ಕಿಸದೇ ಸಮವಸ್ತ್ರದಲ್ಲಿ‌ ವಾಹನ ನಿಲುಗಡೆಗಳಿಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಮಠದ ಪ್ರವೇಶ ದ್ವಾರದ ಪಕ್ಕದಲ್ಲಿ ಹೊರೆಗಾಣಿಕೆ ಸ್ವೀಕರಿಸಲು ಮಳಿಗೆ ತೆರೆದಿದ್ದು, ಭಕ್ತರು ಅತ್ಯಂತ ಪ್ರೀತಿಯಲ್ಲಿ ಮನೆಯಲ್ಲಿ ಬೆಳೆದ ದವಸ-ಧಾನ್ಯ, ತರಕಾರಿ ನೀಡುತ್ತಿದ್ದಾರೆ.ವಾಹನ ಸೇವಾ ಕೈಂಕರ್ಯ: ಸೋಂದಾ‌ ಕತ್ರಿಯಿಂದ ಮಠಕ್ಕೆ, ಮಠದಿಂದ ಊಟೋಪಚಾರ ವ್ಯವಸ್ಥೆಗೆ ವಾಹನ ಸೌಲಭ್ಯ ಮಾಡಲಾಗಿದೆ. ಉಚಿತವಾಗಿ ಭಕ್ತರ ಓಡಾಟಕ್ಕೆ ಸಹಕಾರ ನೀಡುತ್ತಿದ್ದಾರೆ. ಶಿರಸಿಯಿಂದ ವಾಯವ್ಯ ಸಾರಿಗೆ ಬಸ್ಸಿನ ಸೌಲಭ್ಯವೂ ಇದೆ.

ಯಾಗ, ಹವನ, ಜಪಾನುಷ್ಠಾ‌ನ: ಶಿಷ್ಯ ಸ್ವೀಕಾರ ಮಹೋತ್ಸವದ ಅಂಗವಾಗಿ ವಿ. ನಾಗರಾಜ ಭಟ್ಟ ಅವರಿಂದ ಸೋಮವಾರ‌ ಮಹಾರುದ್ರ ಹವನದ ಪೂರ್ಣಾಹುತಿ ನಡೆಯಿತು. ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಸಾನ್ನಿಧ್ಯ ನೀಡಿದರು.

ಶ್ರೀಸ್ವರ್ಣವಲ್ಲೀಯಲ್ಲಿ ಇಂದು: ಶಿಷ್ಯ ಮಹೋತ್ಸವ ಹಿನ್ನೆಲೆಯಲ್ಲಿ ಮೂರನೇ ದಿ‌ನ ಫೆ. 20ರಂದು ಅಷ್ಟಶ್ರಾದ್ಧ, ಒಂದು ಸಾವಿರ ಗಣಪತ್ಯಥರ್ವಶೀರ್ಷ ಜಪ, ಹವನ, ಮಧ್ಯಾಹ್ನೋತ್ತರ ಲಕ್ಷ್ಮೀನೃಸಿಂಹ ಜಪ ನಡೆಯಲಿದೆ. ಸಂಜೆ‌ ಶ್ರೀಮಠದ ಇತಿಹಾಸದ ಕುರಿತು ಡಾ. ಲಕ್ಷ್ಮೀಶ ಸೋಂದಾ ಉಪನ್ಯಾಸ, ಭಜನೆ, ಶಂಕರ ಭಟ್ಟ ಉಂಚಳ್ಳಿ ಅವರ ಕೀರ್ತನೆ ನಡೆಯಲಿದೆ.