ಬಿಜೆಪಿ ಮುಖಂಡರಿಗೆ ಒಂದೊಂದು ಕಡೆ ಒಂದೊಂದು ನ್ಯಾಯವೇ? ಬಿಜೆಪಿಯವರು ಮಾತ್ರ ಹಿಂದೂಗಳಲ್ಲ. ನಾವೂ ಹಿಂದೂಗಳೇ. ಹಾಗೆ ಹೇಳಿಕೊಳ್ಳಲು ನಮಗೂ ಗರ್ವ ಇದೆ. ಬೆಲ್ಲದ ಸೇರಿ ಬಿಜೆಪಿ ಮುಖಂಡರ ಹಿಂದೂ-ಮುಸ್ಲಿಂ ವಿಷಯ ಎಲ್ಲರಿಗೂ ಸಾಕಾಗಿದೆ.
ಧಾರವಾಡ:
ಧಾರವಾಡದ ಐತಿಹಾಸಿಕ ಕೋಟೆ ಬಳಿಯ ಹನುಮಂತದೇವರ ದೇವಸ್ಥಾನ, ಅಮರಗೋಳದ ಬನಶಂಕರಿ ದೇವಸ್ಥಾನದ ಬಳಿಯೂ ಪುಷ್ಕರಣಿಗಳಿದ್ದು, ಅದನ್ನು ಮುಚ್ಚಿ ಅಲ್ಲೇಕೆ ಸಿಸಿ ರಸ್ತೆ, ಗಟಾರು ನಿರ್ಮಿಸಿ ಅಭಿವೃದ್ಧಿಪಡಿಸಲಾಗಿದೆ? ಈ ಬಗ್ಗೆ ವಿಧಾನಸಭಾ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಅವರ ಆಕ್ಷೇಪಣೆ ಮಾಡಿಲ್ಲ ಏಕೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ದೀಪಕ ಚಿಂಚೋರೆ ಪ್ರಶ್ನಿಸಿದ್ದಾರೆ.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಮುಖಂಡರಿಗೆ ಒಂದೊಂದು ಕಡೆ ಒಂದೊಂದು ನ್ಯಾಯವೇ? ಬಿಜೆಪಿಯವರು ಮಾತ್ರ ಹಿಂದೂಗಳಲ್ಲ. ನಾವೂ ಹಿಂದೂಗಳೇ. ಹಾಗೆ ಹೇಳಿಕೊಳ್ಳಲು ನಮಗೂ ಗರ್ವ ಇದೆ. ಬೆಲ್ಲದ ಸೇರಿ ಬಿಜೆಪಿ ಮುಖಂಡರ ಹಿಂದೂ-ಮುಸ್ಲಿಂ ವಿಷಯ ಎಲ್ಲರಿಗೂ ಸಾಕಾಗಿದೆ. ಒಂದು ಬಾರಿಯಾದರೂ ಯುವಕರಿಗೆ ಉದ್ಯೋಗ ಕೊಡಿಸುವ ಬಗ್ಗೆ ಗಮನ ಹರಿಸಿದ್ದೀರಾ ಎಂದು ಬೆಲ್ಲದ ಅವರನ್ನು ಪ್ರಶ್ನಿಸಿದರು.
ಸಾಮರಸ್ಯಕ್ಕೆ ಕೊಳ್ಳಿ:ಜೆನ್ ಜಿಗಳ ಅಸಮಾಧಾನ, ಹೋರಾಟದಿಂದ ಬಿಜೆಪಿಗೆ ಆಗಿರುವ ಡ್ಯಾಮೇಜ್ ಕಂಟ್ರೋಲ್‌ಗಾಗಿ ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ ನೇತೃತ್ವದಲ್ಲಿ ಬಿಜೆಪಿಯು ಹುಬ್ಬಳ್ಳಿ ಆಸಾರ ಓಣಿಯ ದೇವಸ್ಥಾನದ ಪುಷ್ಕರಣಿ ವಿಚಾರವನ್ನು ಮುನ್ನೆಲೆಗೆ ತಂದಿದೆ. ಹಿಂದೂ-ಮುಸ್ಲಿಂರ ನಡುವಿನ ಸಾಮರಸ್ಯಕ್ಕೆ ಕೊಳ್ಳಿ ಇಡುತ್ತಿದೆ ಎಂದು ಆರೋಪಿಸದ ಚಿಂಚೋರೆ, ಬಿಜೆಪಿಯ ಮಾಜಿ ಶಾಸಕ, ಹಾಲಿ ಸಂಸದ ಜಗದೀಶ ಶೆಟ್ಟರ್ 2013ರಲ್ಲೆ ಹಳೇಹುಬ್ಬಳ್ಳಿಯ ಆಸಾರ ಓಣಿಯ ಭವಾನಿ ಶಂಕರ ನಾರಾಯಣ ದೇವಸ್ಥಾನದ ಮುಖ್ಯ ರಸ್ತೆಗೆ ಅನುದಾನ ನೀಡಿದ್ದಾರೆ. ಆಗ ಚಕಾರ ಎತ್ತದ ಬಿಜೆಪಿಗರು ಹಾಗೂ ಶಾಸಕ ಅರವಿಂದ ಬೆಲ್ಲದ ಈಗ ''''''''ಹೊಸ ಬಾಟಲ್‌ನಲ್ಲಿ ಹಳೇ ವೈನ್ ಹಾಕಿ'''''''' ಪ್ರಚಾರಕ್ಕಿಳಿದಿದ್ದಾರೆ ಎಂದು ಕಿಡಿಕಾರಿದರು.
ಆರ್‌ಎಸ್‌ಎಸ್ ಖುಷಿಪಡಿಸಲು ಬಿಜೆಪಿ ನಾಯಕರು ಈ ರೀತಿ ಯುವಕರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ದೇವಸ್ಥಾನ ವಿಚಾರ ತಂದು ಹಿಂದೂ-ಮುಸ್ಲಿಂ ಜಗಳ ಹಚ್ಚುವ ಪ್ರಯತ್ನದಲ್ಲಿದ್ದಾರೆ. ಉದ್ಯೋಗ ಸೃಷ್ಟಿಸದೇ ಯುವಜನರ ದೃಷ್ಟಿಯಲ್ಲಿ ವಿಲನ್‌ಗಳಾಗಿರುವ ಬಿಜೆಪಿಗರು, ಈಗ ಸ್ಥಳೀಯ ಸಂಸ್ಥೆಗಳ ಚುನಾವಣೆ ಕಾಲ ಸಮೀಪಿಸಿದ್ದರಿಂದ ಈ ವಿಷಯ ಮುನ್ನೆಲೆಗೆ ತಂದಿದ್ದಾರೆ. ಸುಧಾರಣೆಗೆ ನಿಮಗೆ ಕಾಲಾವಕಾಶ ನೀಡುವೆ. ಸುಧಾರಿಸದಿದ್ದರೆ ಹಿಂದೂ ಯುವಕರನ್ನು ಕರೆದುಕೊಂಡು ಧಾರವಾಡದಿಂದ ಆರ್‌ಎಸ್‌ಎಸ್ ಮುಖ್ಯ ಕಚೇರಿ ವರೆಗೆ ಪಾದಯಾತ್ರೆ ಮಾಡುತ್ತೇನೆ ಎಂದು ಚಿಂಚೋರೆ ಎಚ್ಚರಿಸಿದರು.ಬಾವಿ ನುಂಗಿದ ಬೆಲ್ಲದ:
ಮನೆಯಲ್ಲಿ ಗಣಪತಿ ಪೂಜಿಸದವರು ಈದ್ಗಾದಲ್ಲಿ ಗಣೇಶೋತ್ಸವ ಆಚರಣೆಗೆ ಒತ್ತಾಯಿಸುತ್ತಾರೆ. ಬಿಜೆಪಿಯವರಿಗೆ ಇಂತಹ ವಿಷಯಗಳೇ ಬೇಕು. ಶಾಸಕ ಅರವಿಂದ ಬೆಲ್ಲದ ಅವರು ಮನೆಯ ವಾಸ್ತುವಿಗಾಗಿ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ನೀರು ಕುಡಿದ ಭಾವಿಯನ್ನೇ ನುಂಗಿದ್ದಾರೆ. ಅದೇ ರೀತಿ ಶಾಸಕ ಮಹೇಶ ಟೆಂಗಿನಕಾಯಿ ಅವರೂ ತಮ್ಮ ಕ್ಷೇತ್ರದಲ್ಲಿ ಒಂದು ಪುಷ್ಕರಣಿ ಮುಚ್ಚಿದ್ದಾರೆ. ಈ ಎಪಿಸೋಡ್‌ನ್ನು ಮುಂದೆ ಹೇಳುವೆ ಎಂದರು.ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ನಾಗರಾಜ ಗುರಿಕಾರ, ಬಸವರಾಜ ಕಿತ್ತೂರ, ಎಚ್.ಎಂ. ರಾಜು, ಮೆಹಬೂಬ್‌ಖಾನ್ ಪಠಾಣ, ಸಂಗೀತಾ ಪೂಜಾರ, ಸುಮಾ ಮಿಣಗನವರ ಇದ್ದರು. ಎಲೆಕ್ಷನ್ ಪ್ರಚಾರ ಮಾಡುವಲ್ಲಿ ಶಾಸಕ ಬೆಲ್ಲದ ಸೇರಿದಂತೆ ಬಿಜೆಪಿಯವರು ಮಹಾ ಕಳ್ಳರು. ಈಗ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಮೀಪಿಸಿದ್ದರಿಂದ ಪುಷ್ಕರಣೆ ವಿಚಾರವನ್ನು ಮುನ್ನೆಲೆಗೆ ತಂದಿದ್ದಾರೆ. ತಮ್ಮ ಅನುಕೂಲಕ್ಕೆ ಅನೇಕ ದೇವಸ್ಥಾನಗಳ ಪುಷ್ಕರಣಿ, ಬಾವಿ ಮುಚ್ಚಿದ್ದು, ಈಗೇಕೆ ಧ್ವನಿ ಎತ್ತುತ್ತಿದ್ದಿರಿ. ಇದನ್ನು ಕೈ ಬಿಡದೇ ಇದ್ದಲ್ಲಿ ಧಾರವಾಡದಿಂದ ಆರ್‌ಎಸ್‌ಎಸ್ ಕಚೇರಿ ವರೆಗೆ ಪಾದಯಾತ್ರೆ ಮಾಡುತ್ತೇನೆ.
ದೀಪಕ ಚಿಂಚೋರೆ, ಕಾಂಗ್ರೆಸ್ ಹಿರಿಯ ಮುಖಂಡ