ಧಾರವಾಡ:
ಧಾರವಾಡ ಹಿಂದೂಸ್ತಾನಿ ಸಂಗೀತ ಕ್ಷೇತ್ರಕ್ಕೆ ಅನೇಕ ಸಂಗೀತ ದಿಗ್ಗಜರನ್ನು ನೀಡಿದೆ. ಅದರ ಮುಂದುವರಿಕೆಯಾಗಿ ಧಾರವಾಡದಲ್ಲಿ ಕಲೆ, ಸಾಹಿತ್ಯ, ಸಂಗೀತ ನೃತ್ಯವು ಹೆಚ್ಚಾಗಿ ನಡೆದುಕೊಂಡು ಹೋಗುತ್ತಿರುವುದು ಶ್ಲಾಘನೀಯ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಹೇಳಿದರು.ತಬಲಾ ವಾದಕ ಪಂ. ಶಂಕ್ರಪ್ಪ ಭೀಮಾಬಾಯಿ ಹೂಗಾರ ಸಂಗೀತ ಸಂಘವು ಆಲೂರು ಭವನದಲ್ಲಿ ಏರ್ಪಡಿಸಿದ್ದ ಪಂ. ಶಂಕ್ರಪ್ಪ ಮತ್ತು ಭೀಮಾಬಾಯಿ ಹೂಗಾರ 41ನೇ ಪುಣ್ಯಸ್ಮರಣೆಯಲ್ಲಿ ಮಾತನಾಡಿದ ಅವರು, ಪಂ. ಸಾತಲಿಂಗ ದೇಸಾಯಿ ಕಲ್ಲೂರ ಇಡೀ ಕುಟುಂಬವೇ ಸಂಗೀತಕ್ಕೆ ಮೀಸಲಾಗಿದೆ. ಧಾರವಾಡದ ಸಂಗೀತ ಪರಂಪರೆಗೆ ಅವರ ಕೊಡುಗೆ ಅಮೋಘ. ಇಂಥ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಪ್ರೋತ್ಸಾಹಿಸುತ್ತಿರುವ ಸಂಘ-ಸಂಸ್ಥೆಗಳಿಗೆ ಸರ್ಕಾರ ಇಲಾಖೆಯ ಮೂಲಕ ಪೋಷಿಸುತ್ತಿದೆ ಎಂದರು.
ಖ್ಯಾತ ಸ್ತ್ರೀರೋಗ ತಜ್ಞ ಡಾ. ಸೌಭಾಗ್ಯ ಕುಲಕರ್ಣಿ ಮಾತನಾಡಿ, ನಾವಿಂದು ತಂದೆ-ತಾಯಿಗಳನ್ನು ಅನಾಥಾಶ್ರಮದಲ್ಲಿಟ್ಟು ನೋಡುತ್ತಿರುವ ಅನೇಕ ಮಕ್ಕಳನ್ನು ನೋಡುತ್ತಿರುವ ಸಂದರ್ಭದಲ್ಲಿ ಪಂ. ಸಾತಲಿಂಗಪ್ಪ ದೇಸಾಯಿ ಕಲ್ಲೂರ ತಮ್ಮ ತಂದೆ-ತಾಯಿಗಳಾದ ಪಂ. ಶಂಕ್ರಪ್ಪ ಮತ್ತು ಭೀಮಾಬಾಯಿ ಹೂಗಾರ ಪುಣ್ಯಸ್ಮರಣೋತ್ಸವವನ್ನು ನಿರಂತರವಾಗಿ 41 ವರ್ಷಗಳಿಂದ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.ಹಿರಿಯ ನ್ಯಾಯವಾದಿ ಡಾ. ಉದಯಕುಮಾರ ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಧಾರವಾಡ ಮರಾಠಾ ವಿದ್ಯಾಪ್ರಸಾರಕ ಮಂಡಳಿ ಕಾರ್ಯದರ್ಶಿ ರಾಜು ಬಿರ್ಜೆನವರ ವರನ್ನು ಸನ್ಮಾನಿಸಲಾಯಿತು. ನಂತರ ಜರುಗಿದ ಸಂಗೀತೋತ್ಸವದಲ್ಲಿ ಗಾಯಕ ಪಂ. ಸೋಮನಾಥ ಮರಡೂರ ಹಿಂದೂಸ್ತಾನಿ ಗಾಯನದಲ್ಲಿ ರಾಗ ಹಮೀರ, ಕೇದಾರ ಹಾಗೂ ಶಾನ್ ಕಾನಡ ಪ್ರಸ್ತುತಪಡಿಸಿದರು. ಸಹ ಗಾಯನದಲ್ಲಿ ಪಂ. ಕುಮಾರ ಮರಡೂರ, ಡಾ. ಕೃಷ್ಣ ಸುತಾರ, ಬಸವರಾಜ ಹೂಗಾರ ಇದ್ದರು. ಸಚಿನ್ ಹಂಪೆ ಅವರ ಸರೋದ್ ವಾದನದಲ್ಲಿ ರಾಗ ಜೋಗೇಶ್ವರಿ ಪ್ರಸ್ತುತ ಪಡಿಸಿದರು. ಸಂಸ್ಥೆಯ ಸಂಗೀತ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ಜರುಗಿತು. ತಬಲಾದಲ್ಲಿ ಪಂ. ಸಾತಲಿಂಗಪ್ಪ ದೇಸಾಯಿ ಕಲ್ಲೂರ, ಮಳೇಮಲ್ಲೇಶ ಹೂಗಾರ, ಸಂವಾದಿನಿಯಲ್ಲಿ ಬಸವರಾಜ ಹಿರೇಮಠ ಸಾಥ್ ಸಂಗತ್ ನೀಡಿದರು.