ಸಾರಾಂಶ
2023-24ನೇ ಸಾಲಿನ ಬಸವ ರಾಷ್ಟ್ರೀಯ ಪುರಸ್ಕಾರಕ್ಕೆ ಡಾ .ಎನ್.ಜಿ. ಮಹಾದೇವಪ್ಪ, 2022-23ನೇ ಸಾಲಿನ ಭಾಗವಾನ್ ಮಹಾವೀರ ಶಾಂತಿ ಪ್ರಶಸ್ತಿಗೆ ಹಿರಿಯ ಸಾಹಿತಿ ಜಿನದತ್ತ ದೇಸಾಯಿ, 2022-23ನೇ ಸಾಲಿನ ಗಾನಯೋಗಿ ಪಂ. ಪಂಚಾಕ್ಷರಿ ಗವಾಯಿ ಪ್ರಶಸ್ತಿಯು ಹಿಂದೂಸ್ತಾನಿ ಗಾಯನಕ್ಕಾಗಿ ಪಂ.ಸೋಮನಾಥ ಮರಡೂರ ಅವರಿಗೆ ನೀಡಲಾಗುತ್ತಿದೆ
ಧಾರವಾಡ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ವಿವಿಧ ರಾಷ್ಟ್ರೀಯ ಹಾಗೂ ರಾಜ್ಯ ಪ್ರಶಸ್ತಿ ಘೋಷಣೆ ಮಾಡಿದ್ದು, ಈ ಪೈಕಿ ಧಾರವಾಡದ ಹಲವು ಗಣ್ಯರಿಗೆ ಪ್ರಶಸ್ತಿಗಳು ಸಂದಿವೆ.
2023-24ನೇ ಸಾಲಿನ ಬಸವ ರಾಷ್ಟ್ರೀಯ ಪುರಸ್ಕಾರಕ್ಕೆ ಡಾ .ಎನ್.ಜಿ. ಮಹಾದೇವಪ್ಪ, 2022-23ನೇ ಸಾಲಿನ ಭಾಗವಾನ್ ಮಹಾವೀರ ಶಾಂತಿ ಪ್ರಶಸ್ತಿಗೆ ಹಿರಿಯ ಸಾಹಿತಿ ಜಿನದತ್ತ ದೇಸಾಯಿ, 2022-23ನೇ ಸಾಲಿನ ಗಾನಯೋಗಿ ಪಂ. ಪಂಚಾಕ್ಷರಿ ಗವಾಯಿ ಪ್ರಶಸ್ತಿಯು ಹಿಂದೂಸ್ತಾನಿ ಗಾಯನಕ್ಕಾಗಿ ಪಂ.ಸೋಮನಾಥ ಮರಡೂರ ಅವರಿಗೆ ನೀಡಲಾಗುತ್ತಿದೆ. ಪ್ರಶಸ್ತಿಯು ತಲಾ ₹10 ಲಕ್ಷ ನಗದು, ಸ್ಮರಣಿಕೆ, ಪ್ರಶಸ್ತಿ ಫಲಕ ಹೊಂದಿದೆ.ಸಾಮಾಜಿಕ ಮತ್ತು ಸಾಂಸ್ಕೃತಿಕ ವಿಭಾಗದಲ್ಲಿ 2020-21ನೇ ಸಾಲಿನ ಅಕ್ಕಮಹಾದೇವಿ ಪ್ರಶಸ್ತಿಯನ್ನು ಇಲ್ಲಿಯ ಜಗನ್ಮಾತೆ ಅಕ್ಕಮಹಾದೇವಿ ಆಶ್ರಮ ಟ್ರಸ್ಟ್ ಪಡೆದುಕೊಂಡಿದೆ. ಈ ಪ್ರಶಸ್ತಿಯು ತಲಾ ₹ 5 ಲಕ್ಷ ಹಾಗೂ ಸ್ಮರಣಿಕೆ, ಪ್ರಶಸ್ತಿ ಫಲಕ ಒಳಗೊಂಡಿದೆ. ಇನ್ನು, ಸಂಗೀತ, ನೃತ್ಯ ಪ್ರಶಸ್ತಿ ವಿಭಾಗದಲ್ಲಿ 2023-24ನೇ ಸಾಲಿನ ಶ್ರೀ ನಿಜಗುಣ-ಪುರಂದರ ಪ್ರಶಸ್ತಿಯು ಧಾರವಾಡದ ಅಕ್ಕಮಹಾದೇವಿ ಮಠವು ಪಡೆದುಕೊಂಡಿದ್ದು, ಪ್ರಶಸ್ತಿ ₹ 5 ಲಕ್ಷ ನಗದು, ಪ್ರಶಸ್ತಿ ಫಲಕ ಒಳಗೊಂಡಿದೆ.
ಇದರೊಂದಿಗೆ ಈಗಾಗಲೇ ಘೋಷಣೆಯಾಗಿ ಪ್ರಶಸ್ತಿ ಪ್ರದಾನ ಮಾಡದೇ ಇರುವ ಹಲವು ಪ್ರಶಸ್ತಿಗಳಲ್ಲಿ ಧಾರವಾಡದ ಸಾಧಕರು ಇದ್ದಾರೆ. 2021-22ನೇ ಸಾಲಿನ ಬಸವ ರಾಷ್ಟ್ರೀಯ ಪುರಸ್ಕಾರ ಪಡೆದ ಡಾ. ವೀರಣ್ಣ ರಾಜೂರ, 2020-21ನೇ ಸಾಲಿನ ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ ಪಡೆದ ಗಾಯತ್ರಿ ದೇಸಾಯಿ ಹಾಗೂ ಶ್ರೀ ನಿಜಗುಣ-ಪುರಂದರ ಪ್ರಶಸ್ತಿಗೆ ಪುರಸ್ಕೃತರಾದ ಪಂ.ವೆಂಕಟೇಶ ಕುಮಾರ ಅವರ ಹೆಸರನ್ನು ಸಹ ಮರು ಘೋಷಣೆ ಮಾಡಿದ್ದು ತಲಾ ₹ 5 ಲಕ್ಷ ನಗದು ಹಾಗೂ ಪ್ರಶಸ್ತಿ ಒಳಗೊಂಡಿದೆ. ಜ. 31ರಂದು ಈ ಎಲ್ಲ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತಿಳಿಸಿದೆ.