ಸಾರಾಂಶ
ಕಾರವಾರ:
ಜಿಲ್ಲೆಯಲ್ಲಿ ೬ ಗ್ರಾಮಗಳ ೧೬೦೦ಕ್ಕೂ ಅಧಿಕ ಮನೆಗಳಿಗೆ ವಿದ್ಯುತ್ ಸಂಪರ್ಕವಿಲ್ಲ. ಆದಷ್ಟು ಶೀಘ್ರದಲ್ಲಿ ಎಲ್ಲ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲು ಕ್ರಮವಹಿಸಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹೇಳಿದರು.ನಗರಕ್ಕೆ ಶುಕ್ರವಾರ ಆಗಮಿಸಿದ್ದ ವೇಳೆ ಪತ್ರಕರ್ತರೊಂದಿಗೆ ಮಾತನಾಡಿ, ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರ ಜತೆ ಸಭೆ ಮಾಡಲಾಗಿದೆ. ದೇಶಕ್ಕೆ ವಿದ್ಯುತ್ ನೀಡುವ ನಮ್ಮ ಜಿಲ್ಲೆಯಲ್ಲಿ ವಿದ್ಯುತ್ ಇಲ್ಲದ ಮನೆ ಇರಬಾರದು ಎಂದು ಸೂಚಿಸಲಾಗಿದೆ. ೭೫ ವರ್ಷ ಕಳೆದರೂ ವಿದ್ಯುತ್ ನೀಡಿಲ್ಲ ಎಂದಾದರೆ ನಾವು ಎಲ್ಲಿದ್ದೇವೆ ಎಂದು ಯೋಚಿಸಬೇಕಾದ ಪರಿಸ್ಥಿತಿಯಿದೆ. ರಸ್ತೆ, ಬಂದರು, ಶಿಕ್ಷಣ, ಮೀನುಗಾರಿಕೆ, ಕೃಷಿ, ತೋಟಗಾರಿಕೆ ಅಭಿವೃದ್ಧಿಗೆ, ಮೂಲಭೂತ ಸೌಕರ್ಯ ನೀಡಲು ಒತ್ತು ನೀಡಲಾಗುತ್ತಿದೆ ಎಂದರು.ರೈತರಿಗೆ ನೀಡುವ ಐಪಿ ಸೆಟ್ ವಿದ್ಯುತ್ ಸಂಪರ್ಕ ನೀಡುವ ಬಗ್ಗೆ ಪ್ರಶ್ನಿಸಿದಾಗ, ಕಳೆದ ಮೂರು ವರ್ಷದಿಂದ ಸಂಪರ್ಕ ನೀಡಿರಲಿಲ್ಲ. ಈಗ ಪುನಃ ಐಪಿ ಸೆಟ್‌ಗೆ ಸಂಪರ್ಕ ನೀಡುವ ಕಾರ್ಯ ಆರಂಭವಾಗಿದೆ. ಬೆಳಗಾವಿ ಅಧಿವೇಶನದ ವೇಳೆ ಇಲಾಖಾ ಸಚಿವರೊಂದಿಗೆ, ಅಧಿಕಾರಿಗಳೊಂದಿಗೆ ಮಾತುಕತೆ ಮಾಡಿ ೫೦೦ ಮೀ. ದೂರ ನಿಗದಿ ಮಾಡಿದ್ದೇವೆ. ಮೊದಲು ಈ ವ್ಯಾಪ್ತಿಯಲ್ಲಿ ಸಂಪರ್ಕ ನೀಡುತ್ತೇವೆ. ಬಳಿಕ ೫೦೦ ಮೀಟರ್‌ಗಿಂತ ಹೆಚ್ಚು ದೂರ ಇರುವುದಕ್ಕೆ ಹೇಗೆ ಐಪಿ ಸೆಟ್ ಸಂಪರ್ಕ ನೀಡಬೇಕೋ ಹಾಗೆ ನೀಡುತ್ತೇವೆ. ರೈತರ ಪರವಾಗಿ ಸರ್ಕಾರವಿದೆ. ಸಹಾಯ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಐಆರ್‌ಬಿ ಬಗ್ಗೆ ಆಕ್ರೋಶ:ರಾಷ್ಟ್ರೀಯ ಹೆದ್ದಾರಿ ೬೬ರ ಕೆಲಸ ನಿಂತು ಹೋದ ಕುರಿತು ಪ್ರಶ್ನಿಸಿದಾಗ, ಅವರಿಗೆ ಹೇಳುವವರು ಕೇಳುವವರು ಯಾರೂ ಇಲ್ಲ. ಐಆರ್‌ಬಿ ಕೇಂದ್ರದ ಬಿಜೆಪಿ ಸರ್ಕಾರದಲ್ಲಿ ಸಚಿವರೊಬ್ಬರು ಮಾಲಿಕರಾಗಿದ್ದಾರೆ. ಜನರು ಸಾಯುತ್ತಿದ್ದರೂ ಅವರಿಗೆ ಸಂಬಂಧವಿಲ್ಲ. ಕಂಪನಿ ಕೆಲಸ ಬಿಟ್ಟು ಹೋದರೆ ಅವರಿಗೆ ಅಭಿನಂದಿಸುತ್ತಿದ್ದೆವು. ರಾಜ್ಯ ಸರ್ಕಾರದಿಂದ ಹಣವನ್ನೂ ಕೊಡಿಸಲಾಗುತ್ತಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.ಅಂಕೋಲಾ ನಾಗರಿಕ ವಿಮಾನ ನಿಲ್ದಾಣದ ಬಗ್ಗೆ ಕೇಳಿದಾಗ, ಎರಡು ವರ್ಷದ ಹಿಂದೆ ಶಾಸಕ ಶಿವರಾಮ ಹೆಬ್ಬಾರ ಬಂದು ಸಭೆ ಮಾಡಿ ₹ ೧೦೦ ಪರಿಹಾರ ಇರುವುದಕ್ಕೆ ₹ ೨೦೦ ಕೊಡುತ್ತೇವೆ ಎಂದು ಹೇಳಿ ಹೋದರು. ಅದಕ್ಕೊಂದು ಮಾನದಂಡವಿರುತ್ತದೆ. ಸರ್ಕಾರದ ಮಾರ್ಗಸೂಚಿ ಇರುತ್ತದೆ. ಉತ್ತರ ಕನ್ನಡ ಜಿಲ್ಲೆ ಮಾತ್ರ ಸೀಮಿತವಾಗಿರುವುದಿಲ್ಲ. ನಾವು ಬಂದ ಬಳಿಕ ಸಭೆ ಮಾಡುತ್ತಿದ್ದೇವೆ. ಮುಂದಿನ ತಿಂಗಳು ಸಚಿವ ಎಂ.ಬಿ. ಪಾಟೀಲ್ ಅವರ ಸಮ್ಮುಖದಲ್ಲಿ ಸಭೆ ಕರೆಯಲಾಗಿದೆ. ಸ್ವಲ್ಪ ಹೆಚ್ಚು-ಕಮ್ಮಿ ದರ ನಿಗದಿ ಮಾಡುತ್ತೇವೆ. ಸಂತ್ರಸ್ತರಿಗೆ ಅನ್ಯಾಯ ಆಗದಂತೆ ನಿರ್ಧರಿಸುತ್ತೇವೆ. ಅವರ ಜತೆಗೆ ನಿಲ್ಲುತ್ತೇವೆ ಎಂದು ಸಚಿವರು ಹೇಳಿದರು.ಉತ್ತರ ಕನ್ನಡದಲ್ಲಿ ಕಾರ್ಮಿಕ ಕಾರ್ಡ್ ಅತಿಹೆಚ್ಚು ಅಕ್ರಮವಾದ ಬಗ್ಗೆ ಪ್ರಶ್ನಿಸಿದಾಗ, ನಮ್ಮ ಜಿಲ್ಲೆಯವರೆ ಕಾರ್ಮಿಕ ಮಂತ್ರಿಯಿದ್ದರು. ಹಾಗಾಗಿ ನಕಲಿ ಕಾರ್ಡ್ ಜಾಸ್ತಿಯಾಗಿರಬಹುದು ಎಂದು ಮಾಜಿ ಸಚಿವ ಶಿವರಾಮ ಹೆಬ್ಬಾರ ಅವರಿಗೆ ಟಾಂಗ್ ನೀಡಿದರು. ಬಜೆಟ್ ಅವಶ್ಯಕತೆಯಿಲ್ಲ:
ರಾಜ್ಯದ, ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗ ಅನುದಾನ ಯಾವಾಗಲು ತರುತ್ತೇವೆ. ನಮ್ಮ ಸರ್ಕಾರದಲ್ಲಿ ಬಜೆಟ್ ಮೂಲಕವೇ ಹಣ ತರಬೇಕು ಎನ್ನುವ ಪರಿಸ್ಥಿತಿಯಿಲ್ಲ. ಇಂತಹದ್ದೊಂದು ಯೋಜನೆ ಬೇಕು ಎಂದಾದರೆ ನೂರಿರಲಿ, ಸಾವಿರ ಕೋಟಿ ಇರಲಿ ಆ ಮೊತ್ತವನ್ನು ಮುಖ್ಯಮಂತ್ರಿ ಅವರ ಬಳಿಗೆ ಹೇಳಿ ತರುತ್ತೇವೆ. ಆ ರೀತಿಯಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದರು.ಮುರ್ಡೇಶ್ವರ ಜಲಸಾಹಸಿ ಕ್ರೀಡೆಯ ಟೆಂಡರ್ ಪ್ರಕ್ರಿಯೆ ಸಚಿವರ ಆಪ್ತರಿಗೆ ಬದಲಾಗುತ್ತಿದೆ ಎನ್ನುವ ಆರೋಪಕ್ಕೆ, ಸ್ಕೂಬಾ ಡೈವಿಂಗ್ ಶುರು ಮಾಡಿದ್ದು ಮಂಕಾಳು ವೈದ್ಯ. ಎಲ್ಲರೂ ನನ್ನ ಜನರೇ ಆಗಿದ್ದಾರೆ. ಟೆಂಡರ್ ಮುಗಿದಾಗ ಹೊಸದಾಗಿ ಕರೆಯಬೇಕಲ್ಲವೇ? ಟೆಂಡರ್ ಅವಧಿ ಮುಗಿದ ಬಳಿಕವೇ ಹೊಸದಾಗಿ ಕರೆಯಲಾಗಿದೆ. ಒಪ್ಪಂದ ಮುಗಿದಾಗ ನೋಟಿಸ್ ನೀಡಲಾಗಿತ್ತು. ಅದರ ಆಧಾರದ ಮೇಲೆ ನ್ಯಾಯಾಲಯಕ್ಕೆ ಹೋಗಿದ್ದರು. ಅವರು ಟೆಂಡರ್‌ನಲ್ಲಿ ಭಾಗವಹಿಸದೇ ನ್ಯಾಯಾಲಯಕ್ಕೆ ಹೋಗಿದ್ದಾರೆ ಎಂದು ಸ್ಪಷ್ಟಪಡಿಸಿದರು.