ಸಾರಾಂಶ
ಧಾರವಾಡ:
ಸಮೀಪದ ಬೇಲೂರು ಗ್ರಾಮದಲ್ಲಿ ಸೃಜಿಸಲು ಉದ್ದೇಶಿಸಿದ್ದ ಭಾರತ ಮೀಸಲು ಪಡೆ (ಐಆರ್‌ಬಿ) ಘಟಕದ ಪ್ರಸ್ತಾವನೆ ಕೈಬಿಟ್ಟು ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ಘಟಕ ಸ್ಥಾಪಿಸುವ ತೀರ್ಮಾನವನ್ನು ಸರ್ಕಾರ ಕೈಗೊಂಡಿದ್ದು, ಸ್ಥಳೀಯ ಜನಪ್ರತಿನಿಧಿಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ ಕುರಿತು ಸರ್ಕಾರದ ತೀರ್ಮಾನವನ್ನು ಪುನರ್ ಪರಿಶೀಲಿಸುವಂತೆ ವಿಧಾನಸಭೆ ಪ್ರತಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ ಆಗ್ರಹಿಸಿದ್ದು, ಬೇಲೂರು ಗ್ರಾಮದಲ್ಲಿ ಐಆರ್‌ಬಿಯನ್ನು ಹೊಸದಾಗಿ ಸೃಜಿಸಲು ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ 52.04 ಎಕರೆ ಜಮೀನು ಸಹ ಮಂಜೂರಾಗಿತ್ತು. ಈ ಜಮೀನನ್ನು ಈಗಾಗಲೇ ಕಮಾಂಡೆಂಟ್, 2ನೇ ಪಡೆ, ಕೆಎಸ್‌ಆರ್‌ಪಿ ಘಟಕದ ಅಧೀನದಲ್ಲಿದ್ದು, ಹೊಸದಾಗಿ ಐಆರ್‌ಬಿ ಘಟಕವನ್ನು ಸೃಜಿಸಲು ಈಗಾಗಲೇ ಸ್ಥಳ ಸಿದ್ಧವಿದೆ ಎಂದಿದ್ದಾರೆ.
ಬೇಲೂರಿನಲ್ಲಿ ಸ್ಥಾಪಿಸಬೇಕಾದ ಈ ಘಟಕದ ಪ್ರಸ್ತಾವನೆಯನ್ನು ಮಾರ್ಪಾಡುಗೊಳಿಸಿ ಅಥವಾ ರದ್ದುಗೊಳಿಸಿ ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ಹೊಸದಾಗಿ ಸ್ಥಾಪಿಸಲು ಪ್ರಸ್ತಾವನೆಯನ್ನು ಪೊಲೀಸ್ ಇಲಾಖೆಯಿಂದ ಸಲ್ಲಿಸಲಾಗಿದೆ. ಆದರೆ ಸದರಿ ಸ್ಥಳದಲ್ಲಿ ಸ್ಥಾಪಿಸಿದ್ದಲ್ಲಿ ಯಾವುದೇ ರೀತಿಯಲ್ಲಿಯೂ ಉಪಯೋಗವಿಲ್ಲ ಎಂದಿರುವ ಬೆಲ್ಲದ, ಘಟಕ ಸ್ಥಾಪಿಸಲು ಉದ್ದೇಶಿಸಿದ್ದ ಬೇಲೂರಲ್ಲಿನ ಜಮೀನನಲ್ಲಿ ಗಾರ್ಡ್ ರೂಂ, ಸುತ್ತಲು ತಂತಿ ಬೇಲಿ ಮತ್ತು ಬೋರ್‌ವೆಲ್ ಅಳವಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಅನುಕೂಲಕರ. ಬೆಳಗಾವಿಯಲ್ಲಿ ಕೆಎಸ್‌ಆರ್‌ಪಿಯ ಒಂದು ಘಟಕವಿದ್ದು, ಅಲ್ಲದೇ ಸುವರ್ಣಸೌಧವಿದೆ. ಅಧಿವೇಶನ ಸಂದರ್ಭ, ರೈತರ ಪ್ರತಿಭಟನೆಗಳು, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ ಗಡಿ, ಭಾಷಾ ವಿವಾದ, ಜಲವಿವಾದ, ನೆರೆ ಹಾವಳಿ, ಕೋಮುಗಲಭೆಗಳು ಹೀಗೆ ಹಲವಾರು ಸಂದರ್ಭಗಳಲ್ಲಿ ಕಾನೂನು ಸುವ್ಯವಸ್ಥೆಗೆ ಹೊರ ಘಟಕಗಳಿಂದ ಬಂದೋಬಸ್ತ್‌ಗೆ ತುಕಡಿಗಳನ್ನು ನಿಯೋಜಿಸಲಾಗುತ್ತಿದೆ. ಇದರಿಂದ ಆರ್ಥಿಕವಾಗಿ ಸರ್ಕಾರಕ್ಕೆ ನಷ್ಟ ಉಂಟಾಗುವುದನ್ನು ತಪ್ಪಿಸಬಹುದು ಎಂದಿದ್ದಾರೆ.ಧಾರವಾಡ ಜಿಲ್ಲೆಯು ಬೆಂಗಳೂರು ಮಹಾನಗರದಂತೆ ಬೆಳೆಯುತ್ತಿದ್ದು, ಇಲ್ಲಿ ವಿಮಾನ ನಿಲ್ದಾಣ, ಹೈಕೋರ್ಟ್ ಸಂಚಾರಿ ಪೀಠ ಹಾಗೂ ಮೂರು ವಿಶ್ವವಿದ್ಯಾಲಯ ಹಾಗೂ ಐಐಟಿ, ಐಐಐಟಿ ಸಹ ಇದೆ. ಅಲ್ಲದೇ ಬೃಹತ್ ಉದ್ಯಮಗಳು, ಕೈಗಾರಿಕೆಗಳು ಹೊಂದಿದ್ದು, ಕೋಮು ಸೂಕ್ಷ್ಮ ಪ್ರದೇಶವಾಗಿದೆ. ಧಾರವಾಡದಲ್ಲಿ ಸ್ಥಾಪಿಸುವುದರಿಂದ ಘಟಕದಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿ, ಸಿಬ್ಬಂದಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲಕರ. ಇಂತಹ ಸೂಕ್ತ ಸ್ಥಳ ಕೈಬಿಟ್ಟು ಬಂಗಾರಪೇಟೆಯಲ್ಲಿ ಘಟಕ ಸ್ಥಾಪಿಸುವುದು ಸರಿಯಲ್ಲ. ಆದ್ದರಿಂದ ಸರ್ಕಾರ ತನ್ನ ತೀರ್ಮಾನವನ್ನು ಪುನರ್ ಪರಿಶೀಲಿಸಬೇಕು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರಿಗೂ ಪತ್ರ ಬರೆಯಲಾಗಿದೆ ಎಂದು ಬೆಲ್ಲದ ಮಾಹಿತಿ ನೀಡಿದರು.