ಕನ್ನಡಪ್ರಭ ವಾರ್ತೆ ಶಿರಸಿ
ಧಾರವಾಡ ಹಾಲು ಒಕ್ಕೂಟವು ಕೆಲ ವಿಭಾಗಗಳಲ್ಲಿ ರಾಜ್ಯದ ಇತರ 15 ಹಾಲು ಒಕ್ಕೂಟಗಳನ್ನು ಮೀರಿಸಿ, ಪ್ರಥಮ ಬಾರಿ ಮೊದಲನೇ ಸ್ಥಾನ ತಲುಪಿದೆ. ಇದಕ್ಕೆ ಒಕ್ಕೂಟದ ವ್ಯಾಪ್ತಿಯ ಹಾಲು ಉತ್ಪಾದಕ ರೈತರು, ಕಾರ್ಯದರ್ಶಿಗಳು ಹಾಗೂ ಸಿಬ್ಬಂದಿ ಪರಿಶ್ರಮ ಕಾರಣ ಎಂದು ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಶಂಕರ ಮುಗದ ಹೇಳಿದರು.ನಗರದ ಟಿಎಂಎಸ್ ಸಭಾಭವನದಲ್ಲಿ ತಾಲೂಕಿನ ಎಲ್ಲ ಹಾಲು ಉತ್ಪಾದಕರ ಸಹಕಾರ ಸಂಘಗಳ ಮುಖ್ಯಕಾರ್ಯನಿರ್ವಾಹಕರ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಒಕ್ಕೂಟದಿಂದ ಜು. 1ರಿಂದ ನಂದಿನಿ ಗೋಲ್ಡ್ ಪ್ರತೀ ಚೀಲದ ದರ ₹1264, ನಂದಿನಿ ಬೈಪಾಸ್‌ನ ಪ್ರತೀ ಚೀಲದ ದರ ₹1390 ಆಗಿದ್ದು, ಪ್ರತೀ ಚೀಲ ನಂದಿನಿ ಗೋಲ್ಡ್ ಹಾಗೂ ಬೈಪಾಸ್ ಚೀಲದ ಮಾರಾಟಕ್ಕಾಗಿ ಸಂಘಕ್ಕೆ ₹20 ಹಾಗೂ ಕಾರ್ಯದರ್ಶಿಗೆ ₹20 ಪ್ರೋತ್ಸಾಹಧನ ನೀಡಲಾಗಿದೆ. ಹೊಸದಾಗಿ ಮಿಲ್ಕ್ ಅನ್‌ಲೈಸರ್ ಖರೀದಿಗಾಗಿ ₹1.8 ಕೋಟಿ ಮೀಸಲಿಡಲಾಗಿದೆ. ಹೊಸದಾಗಿ ಪ್ರಾರಂಭಗೊಂಡ ಸಂಘಗಳಿಗೆ ₹1.86 ಲಕ್ಷ ಮೊತ್ತದ 40ಕ್ಕೂ ಹೆಚ್ಚಿನ ಉಪಕರಣಗಳನ್ನು ಉಚಿತವಾಗಿ ನೀಡಲಾಗಿದೆ. ಸುರೇಶ್ಚಂದ್ರ ಹೆಗಡೆ ಅವರ ಸತತ ಪರಿಶ್ರಮ ಶಿರಸಿ ತಾಲೂಕಿನ ಹಾಲು ಸಂಘಗಳಲ್ಲಿ ಸಮಗ್ರ ಬೆಳವಣಿಗೆ ಸಾಧ್ಯವಾಗಿದೆ. ತಾಲೂಕಿನಲ್ಲಿ ಅವರ ಪಾತ್ರ ಹಾಗೂ ಕೊಡುಗೆ ಅಪಾರವಾಗಿದೆ ಎಂದರು.
ಧಾರವಾಡ ಹಾಲು ಒಕ್ಕೂಟದ ಉಪಾಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಮಾತನಾಡಿ, ಶಿರಸಿ ತಾಲೂಕಿನ ಎಲ್ಲ ಹಾಲು ಸಂಘಗಳ ಮುಖ್ಯ ಕಾರ್ಯ ಕಾರ್ಯನಿರ್ವಾಹಕರು ಹಗಲಿರುಳು ಶ್ರಮಪಟ್ಟು ಕಾರ್ಯನಿರ್ವಹಿಸುತ್ತಿರುವುದರಿಂದ ಕಳೆದ ವರ್ಷಕ್ಕತಿಂತ ಪ್ರತಿ ದಿನ 4 ಸಾವಿರ ಲೀಟರ್ ಹಾಲಿನ ಶೇಖರಣೆಯಲ್ಲಿ ಹೆಚ್ಚಳವಾಗಿದೆ. ಜಿಲ್ಲೆಯಲ್ಲೂ ಪ್ರತಿ ದಿನದ ಹಾಲು ಶೇಖರಣೆಯಲ್ಲಿ 20 ಸಾವಿರ ಲೀಟರ್ ಹೆಚ್ಚಳವಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ ಪ್ರತಿ ದಿನ 84 ಸಾವಿರ ಲೀಟರ್ ಹಾಲು ಶೇಖರಣೆಯಾಗುತ್ತಿದ್ದು, ಅದನ್ನು 1 ಲಕ್ಷಕ್ಕೆ ತಲುಪುವ ಗುರಿ ಹೊಂದಲಾಗಿದೆ.ಪ್ರಕಾಶ ಕೆ. ಸ್ವಾಗತಿಸಿದರು, ಜಿಲ್ಲಾ ಮುಖ್ಯಸ್ಥರಾದ ಎಸ್.ಎಸ್. ಬಿಜೂರ್ ಕಾರ್ಯಕ್ರಮ ನಿರೂಪಿಸಿ, ಮೌನೇಶ ಎಂ. ಸೋನಾರ ವಂದಿಸಿದರು. ಸಹಾಯಕ ವ್ಯವಸ್ಥಾಪಕ ಡಾ. ವಿವೇಕ್ ಎಸ್.ಆರ್., ಶಿರಸಿ ಉಪವಿಭಾಗದ ಸಿಬ್ಬಂದಿ ಹಾಗೂ ಶಿರಸಿ ತಾಲೂಕಿನ ಹಾಲು ಸಂಘಗಳ ಮುಖ್ಯಕಾರ್ಯನಿರ್ವಾಹಕರು ಉಪಸ್ಥಿತರಿದ್ದರು.