ಅಂಗಾಂಗ, ಅಂಗಾಂಶ ದಾನದಲ್ಲಿ ಧಾರವಾಡ ಪ್ರಥಮ!

| Published : May 13 2025, 11:49 PM IST

ಸಾರಾಂಶ

https://notto.mohfw.gov.in ಈ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಬಹುದಾಗಿದೆ. ಈ ವೆಬ್‌ಸೈಟ್‌ ಮೂಲಕ ರಾಜ್ಯದಲ್ಲಿ ಈವರೆಗೆ (ಏಪ್ರಿಲ್‌) 35,868 ಜನರು ಅಂಗಾಂಗ ದಾನಕ್ಕೆ ಒಪ್ಪಿ ಸ್ವಯಂಪ್ರೇರಿತವಾಗಿ ನೋಂದಣಿ ಮಾಡಿಸಿದ್ದಾರೆ. ಅದರಲ್ಲಿ ಧಾರವಾಡ ಜಿಲ್ಲೆಯ 8,177 ಜನರು ಅಂಗಾಂಗ ಹಾಗೂ ಅಂಗಾಂಶಗಳ ದಾನಕ್ಕೆ ನೋಂದಣಿ ಮಾಡಿಸಿದ್ದಾರೆ. ಇದರಿಂದಾಗಿ ಧಾರವಾಡ ಜಿಲ್ಲೆ ದೇಶದಲ್ಲೇ ಎರಡನೆಯ ಜಿಲ್ಲೆಯಾಗಿದ್ದರೆ, ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ: ದಾನಗಳಲ್ಲೇ ರಕ್ತದಾನ, ನೇತ್ರದಾನ ಹಾಗೂ ದೇಹದಾನಗಳು ಶ್ರೇಷ್ಠದಾನ ಎಂಬ ಮಾತಿದೆ. ಆದರೆ, ಇದೀಗ ಅಂಗಾಂಗ ಹಾಗೂ ಅಂಗಾಂಶ ದಾನವೂ ಅಷ್ಟೇ ಮಹತ್ವ ಪಡೆಯುತ್ತಿದ್ದು, ಅಂಗಾಂಗ ದಾನದಲ್ಲಿ ದೇಶದಲ್ಲೇ ಧಾರವಾಡ ಜಿಲ್ಲೆ 2ನೆಯ ಹಾಗೂ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ ಎಂಬುದು ವಿಶೇಷ.

ಅಪಘಾತ ಸೇರಿದಂತೆ ವಿವಿಧ ತುರ್ತು ಪರಿಸ್ಥಿತಿಗಳಲ್ಲಿ ಮನುಷ್ಯನ ಮೆದುಳು ನಿಷ್ಕ್ರಿಯಗೊಳ್ಳುತ್ತದೆ. ಆಗ ವ್ಯಕ್ತಿ ಸಹಜವಾಗಿ ಕೋಮಾ ಸ್ಥಿತಿಗೆ ಹೋಗುತ್ತಾನೆ. ಅಂಥ ವ್ಯಕ್ತಿ ಇದ್ದು ಇಲ್ಲದಂತಾಗುತ್ತಾನೆ. ಆದರೆ, ಆ ವ್ಯಕ್ತಿಯ ಇತರೆ ಅಂಗಾಂಗಗಳು ಐದಾರು ಜನರ ಜೀವ ಉಳಿಸುವ ಸಾಮರ್ಥ್ಯ ಹೊಂದಿರುತ್ತವೆ. ಆ ರೀತಿ ಮೆದುಳು ನಿಷ್ಕ್ರಿಯಗೊಳ್ಳುವ ವ್ಯಕ್ತಿಯ ಅಂಗಾಂಗ ಮತ್ತು ಅಂಗಾಂಶಗಳನ್ನು ದಾನ ಮಾಡುವ ಪ್ರಕ್ರಿಯೆ ಇತ್ತೀಚಿಗೆ ಶುರುವಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ವೆಬ್‌ಸೈಟ್‌ನ್ನೂ ತೆರೆದಿರುವುದು ವಿಶೇಷ.

ವೆಬ್‌ಸೈಟ್‌ ಏನು?:

https://notto.mohfw.gov.in (National Organ & Tissue Transplant Organisation) ರಾಷ್ಟ್ರೀಯ ಅಂಗಾಂಗ ಹಾಗೂ ಅಂಗಾಶಗಳ ದಾನ ನೀಡಲು ಮಾಡಿರುವ ವೆಬ್‌ಸೈಟ್‌ ಇದು. ಯಾರಾದರೂ ಇದರಲ್ಲಿ ನೋಂದಣಿ ಮಾಡಬಹುದಾಗಿದೆ. ಅಂದರೆ ಯಾರಾದರೂ ತಮ್ಮ ಮೆದುಳು ನಿಷ್ಕ್ರಿಯಗೊಂಡರೆ ನಾನು ನನ್ನ ಅಂಗಾಂಗ ಹಾಗೂ ಅಂಗಾಂಶಗಳನ್ನು ದಾನ ಮಾಡಲು ಸಿದ್ಧನಿದ್ದೇನೆ ಎಂದು ವಾಗ್ದಾನ ಮಾಡುವ ಪ್ರಕ್ರಿಯೆ ಇದು. ಒಂದು ವೇಳೆ ಹಾಗೇನಾದರೂ ಮೆದುಳು ನಿಷ್ಕ್ರಿಯಗೊಂಡರೆ ಆ ವ್ಯಕ್ತಿಯ ವಿವಿಧ ಅಂಗಾಂಶ ಹಾಗೂ ಅಂಗಾಂಗಳನ್ನು ಅಗತ್ಯವಿರುವ ವ್ಯಕ್ತಿಗೆ ನೀಡಿ ಕಸಿ ಮಾಡಿ ಆತನನ್ನು ಬದುಕಿಸಲಾಗುತ್ತಿದೆ. ಇದಕ್ಕಾಗಿ ಅಗತ್ಯವಿರುವ ವ್ಯಕ್ತಿಗಳು ವೆಬ್‌ಸೈಟ್‌ನಲ್ಲೇ ಸರತಿ ಸಾಲು ಹಚ್ಚಿರುತ್ತಾರೆ ಎಂಬುದು ತಿಳಿಯಬೇಕಾದ ಅಂಶ.

ರಾಷ್ಟ್ರಕ್ಕೆ ದ್ವಿತೀಯ, ರಾಜ್ಯಕ್ಕೆ ಪ್ರಥಮ:

https://notto.mohfw.gov.in ಈ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಬಹುದಾಗಿದೆ. ಈ ವೆಬ್‌ಸೈಟ್‌ ಮೂಲಕ ರಾಜ್ಯದಲ್ಲಿ ಈವರೆಗೆ (ಏಪ್ರಿಲ್‌) 35,868 ಜನರು ಅಂಗಾಂಗ ದಾನಕ್ಕೆ ಒಪ್ಪಿ ಸ್ವಯಂಪ್ರೇರಿತವಾಗಿ ನೋಂದಣಿ ಮಾಡಿಸಿದ್ದಾರೆ. ಅದರಲ್ಲಿ ಧಾರವಾಡ ಜಿಲ್ಲೆಯ 8,177 ಜನರು ಅಂಗಾಂಗ ಹಾಗೂ ಅಂಗಾಂಶಗಳ ದಾನಕ್ಕೆ ನೋಂದಣಿ ಮಾಡಿಸಿದ್ದಾರೆ. ಇದರಿಂದಾಗಿ ಧಾರವಾಡ ಜಿಲ್ಲೆ ದೇಶದಲ್ಲೇ ಎರಡನೆಯ ಜಿಲ್ಲೆಯಾಗಿದ್ದರೆ, ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ. ದೇಶದಲ್ಲಿ ಮೊದಲ ಸ್ಥಾನ ಗುಜರಾತ್‌ ಅಥವಾ ಉತ್ತರ ಪ್ರದೇಶದ ಒಂದು ಜಿಲ್ಲೆಯಾಗಿರಬಹುದು. ಜತೆಗೆ ರಾಜ್ಯದ ಉಳಿದ ಜಿಲ್ಲೆಗಳ ಸ್ಥಾನ ಎಲ್ಲಿದೆ ಎಂಬುದು ಗೊತ್ತಾಗಲ್ಲ. ಆದರೆ, ನಮ್ಮ ಜಿಲ್ಲೆ ರಾಜ್ಯಕ್ಕೆ ಮೊದಲ ಹಾಗೂ ದೇಶಕ್ಕೆ 2ನೆಯ ಸ್ಥಾನದಲ್ಲಿದೆ ಎಂಬುದು ಗೊತ್ತಾಗುತ್ತದೆ ಎಂಬುದು ಆರೋಗ್ಯ ಇಲಾಖೆ ಸ್ಪಷ್ಟನೆ.

ಯಾವ್ಯಾವ ಅಂಗಾಂಗ ದಾನ?: ಅಂಗಾಂಗ ದಾನವೆಂದರೆ ಮೆದುಳು, ಶ್ವಾಸಕೋಶ, ಲಿವರ್, ಕಿಡ್ನಿ, ಹೃದಯ ಸೇರಿದಂತೆ ಮತ್ತಿತರರ ಅಂಗಾಂಗಳಾಗಿವೆ. ಇನ್ನು ಅಂಗಾಂಶವೆಂದರೆ ಬೆನ್ನುಮೂಳೆ, ರಕ್ತನಾಳ ಸೇರಿದಂತೆ ಮತ್ತಿತರವುಗಳಾಗಿವೆ ಎಂಬುದು ಆರೋಗ್ಯ ಇಲಾಖೆ ಸ್ಪಷ್ಟನೆ.

ಹೇಗೆ ಸಾಧ್ಯವಾಯ್ತು: ಹಾಗೆ ನೋಡಿದರೆ ಅಂಗಾಂಶ ಹಾಗೂ ಅಂಗಾಂಗಗಳ ದಾನದ ಬಗ್ಗೆಯೂ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಸಬಹುದು ಎಂಬುದು ಎಷ್ಟೋ ಜನರಿಗೆ ಗೊತ್ತೇ ಇಲ್ಲ. ಆದರೆ, ಧಾರವಾಡ ಜಿಲ್ಲೆಯಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ವರ್ಗ, ಜಿಪಂ ಸಿಇಒ, ಜಿಲ್ಲಾಡಳಿತ ಸಾಕಷ್ಟು ಜನಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದೆ. ಜತೆಗೆ ಗ್ರಾಮೀಣ ಪ್ರದೇಶಗಳಲ್ಲಿ ಜಾಥಾ, ಆಶಾ ಕಾರ್ಯಕರ್ತರು, ತಾಲೂಕು ಮಟ್ಟದ ಅಧಿಕಾರಿಗಳ ಶ್ರಮದಿಂದಾಗಿ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂಬುದು ಜಿಲ್ಲಾ ಆರೋಗ್ಯ ಇಲಾಖೆ ಅಂಬೋಣ.

ಏನೇ ಆಗಲಿ ಅಂಗಾಂಗ ಹಾಗೂ ಅಂಗಾಂಶ ದಾನದಲ್ಲಿ ಧಾರವಾಡ ಜಿಲ್ಲೆಯ ರಾಜ್ಯದಲ್ಲಿ ಪ್ರಥಮ ಹಾಗೂ ದೇಶದಲ್ಲಿ ದ್ವಿತೀಯ ಸ್ಥಾನದಲ್ಲಿರುವುದು ಹೆಮ್ಮೆಯ ವಿಷಯ ಎಂದರೆ ತಪ್ಪಾಗಲಿಕ್ಕಿಲ್ಲ..

ಅಂಗಾಂಗ ಹಾಗೂ ಅಂಗಾಂಶ ದಾನದಲ್ಲಿ ಧಾರವಾಡ ಜಿಲ್ಲೆ ಇತರೆ ಜಿಲ್ಲೆಗಳನ್ನು ಹಿಂದಿಕ್ಕಿದೆ. ದೇಶದಲ್ಲಿ ದ್ವಿತೀಯ ಹಾಗೂ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ. ರಾಜ್ಯದಲ್ಲಿ 35,868 ಜನ ನೋಂದಣಿ ಮಾಡಿಸಿದ್ದಾರೆ. ಅದರಲ್ಲಿ ಧಾರವಾಡ ಜಿಲ್ಲೆಯದ್ದೇ 8177 ಜನ ನೋಂದಣಿ ಮಾಡಿಸಿರುವುದು ವಿಶೇಷ. ಇಲಾಖೆಯಿಂದ ಮಾಡಿರುವ ಜಾಗೃತಿಯೇ ಇದಕ್ಕೆ ಕಾರಣ. ಉಳಿದ ಜಿಲ್ಲೆಗಳ ಸ್ಥಾನಮಾನ ಇಲ್ಲಿ ಗೊತ್ತಾಗಲ್ಲ ಎಂದು ಡಿಎಚ್‌ಒ ಡಾ. ಎಸ್‌.ಎಂ. ಹೊನಕೇರಿ ಹೇಳಿದರು.