ಸಾರಾಂಶ
ಪ್ರತ್ಯೇಕ ಪಾಲಿಕೆಯಿಂದ ಇನ್ಮುಂದೆ ಇಡೀ ರಾಜ್ಯದ ಮಹಾನಗರ ಪಾಲಿಕೆಗಳಿಗೆ ಬರುವ ಅನುದಾನವು ಹು-ಧಾ ಅವಳಿ ನಗರಕ್ಕೆ ಪ್ರತ್ಯೇಕವಾಗಿಯೇ ಬರಲಿದೆ. ಹೀಗಾಗಿ ಅಭಿವೃದ್ಧಿಗೆ ವೇಗ ದೊರಯಲಿದೆ.
ಬಸವರಾಜ ಹಿರೇಮಠ
ಧಾರವಾಡ:ಧಾರವಾಡ ನಗರಕ್ಕೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ, ಸಮ ಪ್ರಮಾಣದಲ್ಲಿ ಮೇಯರ್-ಉಪಮೇಯರ್ ಸ್ಥಾನಮಾನ ಸಿಗದಿರುವುದು, ಧಾರವಾಡ ಅಭಿವೃದ್ಧಿ ವಿಷಯವಾಗಿ ಪಾಲಿಕೆ ಆಯುಕ್ತರು ಸೇರಿದಂತೆ ಅಧಿಕಾರಿಗಳ ನಿರ್ಲಕ್ಷ್ಯ, ವಿಳಂಬ ನೀತಿಯ ಹಿನ್ನೆಲೆಯಲ್ಲಿ ಧಾರವಾಡ ಪಾಲಿಕೆಯನ್ನು ಪ್ರತ್ಯೇಕಗೊಳಿಸಲಾಯಿತು ಎಂಬುದು ಸ್ಪಷ್ಟ.
ಈ ಎಲ್ಲ ವಿಷಯಗಳ ಹೊರತಾಗಿಯೂ ಧಾರವಾಡ ಜಿಲ್ಲಾ ಕೇಂದ್ರವಾದರೂ ಸಾಮಾಜಿಕ, ಆರ್ಥಿಕ, ರಾಜಕೀಯ ಅಧಿಕಾರ ಮತ್ತು ಮಹತ್ವ ಹುಬ್ಬಳ್ಳಿಯ ಕೈಯಲ್ಲಿವೆ. ಧಾರವಾಡ ಬರೀ ಸಾಂಸ್ಕೃತಿಕ, ಶೈಕ್ಷಣಿಕ ಕೇಂದ್ರವಾಗಿ ಮಾತ್ರ ಉಳಿದುಕೊಂಡಿದೆ. ಇದೀಗ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ಧಾರವಾಡ ಪ್ರತ್ಯೇಕಗೊಂಡ ಹಿನ್ನೆಲೆಯಲ್ಲಿ ಧಾರವಾಡಕ್ಕೂ ಪ್ರತ್ಯೇಕ ಮನ್ನಣೆ ದೊರೆಯಬಹುದು ಎಂಬ ನಿರೀಕ್ಷೆಗಳು ಧಾರವಾಡ ಜನರಲ್ಲಿ ಹುಟ್ಟಿಕೊಂಡಿವೆ.ಕಡತಗಳ ವಿಲೇವಾರಿ ನಿರೀಕ್ಷೆ:
ಪ್ರತ್ಯೇಕ ಪಾಲಿಕೆಯಿಂದ ಇನ್ಮುಂದೆ ಇಡೀ ರಾಜ್ಯದ ಮಹಾನಗರ ಪಾಲಿಕೆಗಳಿಗೆ ಬರುವ ಅನುದಾನವು ಹು-ಧಾ ಅವಳಿ ನಗರಕ್ಕೆ ಪ್ರತ್ಯೇಕವಾಗಿಯೇ ಬರಲಿದೆ. ಧಾರವಾಡಕ್ಕೆ ಸಂಬಂಧಿಸಿದ ಸಾಕಷ್ಟು ಕಡತಗಳು ಈ ಹಿಂದೆ ಹುಬ್ಬಳ್ಳಿಯ ಕೇಂದ್ರ ಕಚೇರಿಯ ಬಾಗಿಲು ಮುಟ್ಟಿ ಮರಳಿ ಧಾರವಾಡಕ್ಕೆ ಬರಬೇಕಿತ್ತು. ಇದಕ್ಕಾಗಿ ಸಮಯಾವಕಾಶ, ಅಲೆದಾಟ ಹಾಗೂ ಖರ್ಚು-ವೆಚ್ಚವೂ ಆಗುತ್ತಿತ್ತು. ಇನ್ಮುಂದೆ ಧಾರವಾಡದಲ್ಲಿಯೇ ಆಯುಕ್ತರು, ಮೇಯರ್-ಉಪ ಮೇಯರ್ ಲಭ್ಯ ಇರುವುದರಿಂದ ಧಾರವಾಡ ಅಭಿವೃದ್ಧಿ ಹಿನ್ನೆಲೆಯಲ್ಲಿ ಶೀಘ್ರ ಕಡತಗಳ ವಿಲೇವಾರಿ ನಿರೀಕ್ಷೆ ಹೊಂದಲಾಗಿದೆ.ಸಮಸ್ಯೆಗೆ ಶೀಘ್ರ ಪರಿಹಾರ:
ಧಾರವಾಡದ ಮಂದಿ ಪ್ರತಿಯೊಂದು ಸಮಸ್ಯೆ-ತೊಂದರೆಗಳಿಗೆ ಆಯುಕ್ತರನ್ನೇ ನೆಚ್ಚಬೇಕಿತ್ತು. ಅವರು ಸಹ ಮಂಗಳವಾರ, ಶುಕ್ರವಾರ ಧಾರವಾಡಕ್ಕೆ ಬರುತ್ತೇನೆ ಎನ್ನುತ್ತಿದ್ದರು. ಆದರೆ, ಕಾರ್ಯದ ಒತ್ತಡದಿಂದ ಪ್ರಾಯೋಗಿಕವಾಗಿ ಸಾಧ್ಯವಾಗುತ್ತಿರಲಿಲ್ಲ. ಧಾರವಾಡದಲ್ಲಿ ನಾಲ್ಕು ವಲಯ ಕಚೇರಿಗಳಿದ್ದು, ಸಹಾಯಕ ಆಯುಕ್ತರೇ ನಿಭಾಯಿಸಿ ಅಂತಿಮವಾಗಿ ಕೇಂದ್ರ ಕಚೇರಿ ನಿರ್ದೇಶನದ ಮೇಲೆಯೇ ಕೆಲಸ-ಕಾರ್ಯಗಳನ್ನು ಮಾಡುತ್ತಿದ್ದರು. ಇನ್ಮುಂದೆ ಧಾರವಾಡದ ಪಾಲಿಕೆಯೇ ಕೇಂದ್ರ ಕಚೇರಿಯಾಗುವ ಕಾರಣ ಸ್ವತಂತ್ರ್ಯವಾಗಿ ಕೆಲಸ ಮಾಡುವುದರಿಂದ ಸಮಸ್ಯೆ-ಸವಾಲುಗಳಿಗೆ ಶೀಘ್ರ ಸ್ಪಂದನೆಯ ನಿರೀಕ್ಷೆ ಇದೆ.ರಾಜಕೀಯ ಲಾಭ:
ಧಾರವಾಡದ ಪಾಲಿಕೆ ಸದಸ್ಯರಿಗೆ ರಾಜಕೀಯವಾಗಿ ಬೆಳೆಯಲು ಪ್ರತ್ಯೇಕ ಪಾಲಿಕೆ ವೇದಿಕೆ ಒದಗಿಸಿಕೊಡಲಿದೆ ಎಂಬ ವಿಶ್ಲೇಷಣೆಗಳೂ ಶುರುವಾಗಿವೆ. ಧಾರವಾಡದ ಸಹ ಮೊದಲಿನಂತಿಲ್ಲ. ಬೆಳೆಯುತ್ತಿರುವ ನಗರವಾಗಿದ್ದು ಸದ್ಯ ಇರುವ 26 ವಾರ್ಡ್‌ಗಳಿಗೆ ಪೂರಕವಾಗಿ ಹೆಚ್ಚುವರಿ ವಾರ್ಡ್‌ಗಳ ರಚನೆ ಆಗುವ ಸಾಧ್ಯೆತೆಯಿಂದ ಮತ್ತಷ್ಟು ಇಲ್ಲಿಯ ಜನರಿಗೆ ರಾಜಕೀಯ ಅವಕಾಶಗಳು ಲಭ್ಯವಾಗಲಿವೆ. ನಾಗರಿಕರಿಗೆ ಅಧಿಕಾರಿಗಳ ಲಭ್ಯತೆ ಸಿಗಲಿದೆ. ಜತೆಗೆ ತಮ್ಮ ಆಡಳಿತ ವ್ಯವಸ್ಥೆಯನ್ನು ತಾವೇ ಸ್ವತಂತ್ರ್ಯವಾಗಿ ರೂಪಿಸಿಕೊಳ್ಳಲು ಪ್ರತ್ಯೇಕ ಪಾಲಿಕೆ ಅನುವು ಮಾಡಿಕೊಡಲಿದೆ ಎಂದು ನಂಬಿದ್ದೇವೆ ಎಂದು ಹಿರಿಯ ನ್ಯಾಯವಾದಿ ಪಿ.ಎಚ್. ನೀರಲಕೇರಿ ಅಭಿಪ್ರಾಯ ವ್ಯಕ್ತಪಡಿಸಿದರು. ಅಧಿಕಾರ ವಿಕೇಂದ್ರೀಕರಣದ ಹಿನ್ನೆಲೆಯಲ್ಲಿ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಭಾಗ್ಯ ದೊರೆತಿರುವುದು ಧಾರವಾಡ ಜನತೆಗೆ ಸಂತಸದ ಕ್ಷಣ. ಪ್ರತ್ಯೇಕ ಅನುದಾನದೊಂದಿಗೆ ಇನ್ಮುಂದೆ ಕೆಲಸಗಳಿಗೆ ಹುಬ್ಬಳ್ಳಿಗೆ ಅಲೆದಾಟ ತಪ್ಪಲಿದೆ. ಜತೆಗೆ ಸ್ವತಂತ್ರ ಆಡಳಿತದ ಹಿನ್ನೆಲೆಯಲ್ಲಿ ಧಾರವಾಡ ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಇನ್ನಷ್ಟು ಬೆಳೆಯಲಿದೆ. ಈ ಕಾರಣಕ್ಕಾಗಿಯೇ ನಾವು ಹೋರಾಟ ಮಾಡಿದ್ದು ಎಂದು ಪ್ರತ್ಯೇಕ ಪಾಲಿಕೆ ಹೋರಾಟಗಾರ ಲಲಿತ ಭಂಡಾರಿ ಹೇಳಿದರು.