ಕೈ ಬೀಸಿ ಕರೆಯುತ್ತಿದೆ ಧಾರವಾಡದ ಕೃಷಿ ಮೇಳ!

| Published : Sep 14 2025, 01:04 AM IST

ಕೈ ಬೀಸಿ ಕರೆಯುತ್ತಿದೆ ಧಾರವಾಡದ ಕೃಷಿ ಮೇಳ!
Share this Article
  • FB
  • TW
  • Linkdin
  • Email

ಸಾರಾಂಶ

500ಕ್ಕೂ ಹೆಚ್ಚು ಮಳಿಗೆ ಸ್ಥಾಪಿಸಲಾಗಿದ್ದು, ಕೃಷಿ ವಸ್ತು ಪ್ರದರ್ಶನ, ಯಂತ್ರೋಪಕರಣಗಳು, ಜಾನುವಾರು ಪ್ರದರ್ಶನಗಳು ರೈತರನ್ನು ಕೈ ಬೀಸಿ ಕರೆಯುತ್ತಿವೆ.

ಧಾರವಾಡ: ಅಂದ ಚಂದದ ಫಲ-ಪುಷ್ಪಗಳು, ತರಹೇವಾರಿ ತಳಿಗಳು, ಬಣ್ಣ ಬಣ್ಣದ ಕೀಟಗಳ ಪ್ರಪಂಚ ಒಂದೆಡೆಯಾದರೆ, ಮತ್ತೊಂದೆಡೆ ಕಣ್ಣು ಹಾಯಿಸಿದಷ್ಟು ರೈತರು, ನೂರಾರು ಮಳಿಗೆಗಳಲ್ಲಿ ಅವರಿಗೆ ಬೇಕಾದ ಬೆಳೆಗಳ ತಾಂತ್ರಿಕತೆಗಳು, ಸಣ್ಣ-ದೊಡ್ಡ ಯಂತ್ರೋಪಕರಣಗಳು, ಕೃಷಿ ಪರಿಕರಗಳು, ಪ್ರಾತ್ಯಕ್ಷಿಕೆಗಳು, ತಜ್ಞರೊಂದಿಗೆ ಸಮಾಲೋಚನೆ, ಸಂವಾದ, ಜಾನುವಾರು ಪ್ರದರ್ಶನ ಹೀಗೆ ಅನೇಕ...!

ಇಲ್ಲಿಯ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಸುಮಾರು ಮೂರು ದಶಕಗಳಿಂದ ನಡೆಯುತ್ತಿರುವ ರೈತರ ಜಾತ್ರೆ ಎಂದೇ ಖ್ಯಾತಿ ಪಡೆದಿರುವ ಕೃಷಿ ಮೇಳದ ನೋಟವಿದು.

ಮೇಳದ ಮುನ್ನಾ ದಿನ ಶುಕ್ರವಾರ ಸಂಜೆ ಸಾಕಷ್ಟು ಮಳೆಯಾಗಿದ್ದು, ಕೃಷಿ ಮೇಳಕ್ಕೆ ಮಳೆ ಅಡ್ಡಿ ಗ್ಯಾರಂಟಿ, ಜನರ ಸಂಖ್ಯೆ ಕಡಿಮೆ ಆಗಬಹುದು ಎಂದುಕೊಂಡಿದ್ದು ಸುಳ್ಳಾಯಿತು. ನಿರೀಕ್ಷೆ ಮೀರಿ ಮೊದಲ ದಿನವೇ ಲಕ್ಷಾಂತರ ಜನರು ಮೇಳಕ್ಕೆ ಆಗಮಿಸಿದ್ದು ಸಂತಸದ ಸಂಗತಿ. ಆದರೆ, ಮೊದಲ ದಿನದ ಆರಂಭದಲ್ಲಿಯೇ ಪ್ರದರ್ಶನಕ್ಕೆ ಟ್ರ್ಯಾಕ್ಟರ್‌ ಇಳಿಸುವಾಗ ಆಯತಪ್ಪಿ ಬಿದ್ದು ತುಮಕೂರು ಮೂಲದ ಪರಶುರಾಮ ಎಂ. ಎಂಬ ಕಾರ್ಮಿಕ ಸಾವಿಗೀಡಾಗಿದ್ದು ಬೇಸರ ಸಂಗತಿ.

500ಕ್ಕೂ ಹೆಚ್ಚು ಮಳಿಗೆ ಸ್ಥಾಪಿಸಲಾಗಿದ್ದು, ಕೃಷಿ ವಸ್ತು ಪ್ರದರ್ಶನ, ಯಂತ್ರೋಪಕರಣಗಳು, ಜಾನುವಾರು ಪ್ರದರ್ಶನಗಳು ರೈತರನ್ನು ಕೈ ಬೀಸಿ ಕರೆಯುತ್ತಿವೆ. ಈ ಬಾರಿ ಪೌಷ್ಟಿಕ ಭದ್ರತೆಗೆ ಸಾಂಪ್ರದಾಯಿಕ ತಳಿಗಳು ಹಾಗೂ ಮಣ್ಣು ಆರೋಗ್ಯ ತಾಂತ್ರಿಕತೆಗಳ ಹೆಸರಿನಲ್ಲಿ ಮೇಳ ನಡೆಸಲಾಗುತ್ತಿದೆ. ಹಿಂಗಾರು ಹಂಗಾಮಿಗೆ ರೈತರಿಗೆ ಅನುಕೂಲವಾಗಲು ಬೀಜ ಮೇಳ ನಡೆಯುತ್ತಿದ್ದು, ರೈತರು ಹಿಂಗಾರು ಬಿತ್ತನೆ ಬೀಜ ಖರೀದಿಸಿದರು.

ಮೊದಲ ದಿನ ಮುಖ್ಯ ವೇದಿಕೆಯಲ್ಲಿ ಸಾಂಪ್ರದಾಯಿಕ ತಳಿಗಳ ಪ್ರಾಮುಖ್ಯತೆ ಹಾಗೂ ಸಂರಕ್ಷಣೆ ವಿಚಾರಗೋಷ್ಠಿ ನಡೆಯಿತು. ಸಂಶೋಧನಾ ನಿರ್ದೆಶಕ ಡಾ. ಬಿ.ಡಿ.ಬಿರಾದಾರ, ಸಾಂಪ್ರದಾಯಿಕ ತಳಿಗಳ ಮಹತ್ವ ಮತ್ತು ಸಂರಕ್ಷಣೆ ಬಗ್ಗೆ ಮಾತನಾಡಿದರು.

ಕೃಷಿಯಲ್ಲಿ ಸಾಂಪ್ರದಾಯಿಕ ತಳಿಗಳು, ರೋಗ ಮತ್ತು ಬರ ನಿರೋಧಕತೆ ಹೊಂದಿದ್ದು, ಮಾನವ ಹಾಗೂ ಜಾನುವಾರು ಆರೋಗ್ಯ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತವೆ. ವಿವಿ ವಿಶಿಷ್ಟ ಗುಣಗಳ ಆಧಾರದ ಮೇಲೆ ಪ್ರದೇಶವಾರು ತಳಿಗಳ ಸಂಗ್ರಹ, ಸಂರಕ್ಷಣೆ ಮತ್ತು ಬಿಡುಗಡೆಗೆ ಒತ್ತು ನೀಡುತ್ತಿದ್ದು, ಸಾವಯವ ಕೃಷಿ ಮತ್ತು ನೈಸರ್ಗಿಕ ಕೃಷಿ ಅನುಸರಿಸುತ್ತಿರುವ ರೈತರಿಗೆ ವರದಾನವಾಗಲಿದೆ ಎಂದರು.

260ಕ್ಕೂ ಹೆಚ್ಚು ದೇಸಿ ಭತ್ತದ ತಳಿಗಳ ಸಂರಕ್ಷಕ ಡಾ. ಶಂಕರ ಲಂಗಟಿ ತಮ್ಮ ಮೂವತ್ತು ವರ್ಷಗಳ ಸಾಂಪ್ರದಾಯಿಕ ತಳಿಗಳ ಸಂಗ್ರಹ ಮತ್ತು ಸಂರಕ್ಷಣೆಯ ಸುದೀರ್ಘ ಅನುಭವ ಹಂಚಿಕೊಂಡರು. ಉದ್ಘಾಟನೆ ನೇರವೇರಿಸಿ ಸನ್ಮಾನ ಸ್ವೀಕರಿಸಿದ ಹಾವೇರಿಯ ಅಕ್ಕಿಮಠದ ಡಾ.ಗುರುಲಿಂಗ ಸ್ವಾಮೀಜಿ ಮಾತನಾಡಿದರು. ನಂತರ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಹಾಗೂ ಪೌಷ್ಠಿಕ ಆಹಾರ ಭದ್ರತೆ ಕುರಿತು ವಿಚಾರಗೋಷ್ಠಿ ನಡೆಯಿತು. ಡಾ. ಉಷಾ ಮಳಗಿ, ಡಾ. ಸುನಂದಾ ಇಟಗಿ, ಡಾ. ವಿ.ಆರ್.ಕಿರೇಸೂರ ಇದ್ದರು.

ಮತ್ತೊಂದು ವೇದಿಕೆಯಲ್ಲಿ ಎಕರೆಗೆ ಹತ್ತು ಟನ್ ಕಬ್ಬು ಇಳುವರಿ ಪಡೆಯುವ ಬಗ್ಗೆ ಆಯೋಜಿಸಿದ ತರಬೇತಿಯಲ್ಲಿ ವಿಜ್ಞಾನಿ ಡಾ.ಅರುಣಕುಮಾರ ಬಿ., ಕಬ್ಬಿನ ತಳಿಗಳು ಮತ್ತು ಅವುಗಳ ವಿಶೇಷತೆಯ ಕುರಿತು ಮಾಹಿತಿ ನೀಡಿದರು. ವಿಜ್ಞಾನಿಗಳಾದ ಡಾ. ಸುನಿಲಕುಮಾರ ನೂಲಿ, ಡಾ.ಮಂಜುನಾಥ ಚೌರಡ್ಡಿ, ಬೆಳೆಗಾರರಾದ ಶಂಕರ ನಾಗಣ್ಣವರ, ಕಲ್ಮೇಶ ಯಲ್ಲಡಗಿ ಅನುಭವ ಹಂಚಿಕೊಂಡರು.