ಸಾರಾಂಶ
ಬಸವರಾಜ ಹಿರೇಮಠ
ಧಾರವಾಡ:ಕರ್ನಾಟಕ ವಿಶ್ವವಿದ್ಯಾಲಯ, ಅಮೃತ ಮಹೋತ್ಸವ ಆಚರಿಸುತ್ತಿರುವ ಕೃಷಿ ವಿವಿ, ಆಕಾಶವಾಣಿ ಹಾಗೂ ಈಚೆಗೆ ಸೇರ್ಪಡೆಯಾಗಿರುವ ಐಐಟಿ, ಐಐಐಟಿ, ವಿಧಿ ವಿಜ್ಞಾನ ವಿಶ್ವವಿದ್ಯಾಲಯ ಸೇರಿದಂತೆ ಧಾರವಾಡ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕೇಂದ್ರವಾಗಿದೆ. ಜಿಲ್ಲಾ ಕೇಂದ್ರದ ಸ್ಥಾನಮಾನ ಹೊಂದಿರುವ ಅನೇಕ ವಿಷಯಗಳಲ್ಲಿ ಅಭಿವೃದ್ಧಿಯಿಂದ ಕುಂಠಿತವಾಗಿದೆ. ಇದೀಗ ಪ್ರತ್ಯೇಕ ಪಾಲಿಕೆಯ ಭಾಗ್ಯ ಪಡೆದಿರುವ ನಗರವೂ ಇನ್ನಾದರೂ ಸಮಗ್ರ ಅಭಿವೃದ್ಧಿ ಕಾಣಲಿದೆಯೇ? ಎಂಬ ಪ್ರಶ್ನೆ ಜನರದ್ದು.
ಏನೇನು ಸಮಸ್ಯೆಗಳು:ಟ್ರಾಫಿಕ್ ಸಮಸ್ಯೆ, ಪಾರ್ಕಿಂಗ್ ತೊಂದರೆ, ಸುಸಜ್ಜಿತ ಮಾರುಕಟ್ಟೆ ಇಲ್ಲದೇ ಇರುವುದು, ಕ್ರೀಡಾಂಗಣ ಕೊರತೆ, ಎಂಟು ವಾರ್ಡ್ ಹೊರತುಪಡಿಸಿ ಉಳಿದ ವಾರ್ಡ್‌ಗಳಿಗೆ 24 ಗಂಟೆ ನೀರು, ಒಳಚರಂಡಿ ಕಾಮಗಾರಿ ವಿಳಂಬ, ಸಾರ್ವಜನಿಕ ಶೌಚಾಲಯ ಇಲ್ಲದಿರುವುದು ಹಾಗೂ ಪ್ರಮುಖ ಕೆರೆ-ಬಾವಿಗಳ ಸುರಕ್ಷತೆ ಸೇರಿದಂತೆ ಧಾರವಾಡಕ್ಕೆ ಹತ್ತಾರು ಸಮಸ್ಯೆಗಳು ಅಂಟಿಕೊಂಡಿವೆ. ಇದೀಗ ದೊರಕಿರುವ ಸ್ವತಂತ್ರ ಪಾಲಿಕೆಯಿಂದಾದರೂ ಅಂಟಿರುವ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆಯೇ ಎಂದು ಸಾರ್ವಜನಿಕರು ಎದುರು ನೋಡುತ್ತಿದ್ದಾರೆ.
ಟ್ರಾಫಿಕ್ ತೊಂದರೆ:ಹುಬ್ಬಳ್ಳಿಯಿಂದ ಬಂದರೆ ಟೋಲ್‌ನಾಕಾ, ಸವದತ್ತಿಯಿಂದ ಬಂದರೆ ಶಿವಾಜಿ ವೃತ್ತ, ನವಲಗುಂದ ಅಥವಾ ಹೆಬ್ಬಳ್ಳಿಯಿಂದ ಬಂದರೆ ಹೆಬ್ಬಳ್ಳಿ ಅಗಸಿ, ಹಳಿಯಾಳದಿಂದ ಬಂದರೆ ಶ್ರೀನಗರ ಅಥವಾ ಸಪ್ತಾಪೂರ, ಅಳ್ನಾವರ ಕಡೆಯಿಂದ ಬಂದರೆ ಓಲ್ಡ್ ಎಸ್ಪಿ ಕಚೇರಿ ಹಾಗೂ ಇಡೀ ಧಾರವಾಡಕ್ಕೆ ಪ್ರಮುಖ ವೃತ್ತವಾಗಿರುವ ಜ್ಯುಬಿಲಿ ವೃತ್ತ ದಿನದ ಎಲ್ಲ ಸಮಯದಲ್ಲಿ ಈ ಎಲ್ಲ ವೃತ್ತ, ರಸ್ತೆಗಳು ಟ್ರಾಫಿಕ್ ಜಾಮ್‌ನಿಂದ ಕೂಡಿರುತ್ತವೆ. ಇದರಿಂದ ಜನರು ಕಿರಿಕಿರಿ ಅನುಭವಿಸುತ್ತಿದ್ದಾರೆ.
ಸೂಪರ್ ಆಗಲಿ ಮಾರುಕಟ್ಟೆ:ಹಳೆಯ ಧಾರವಾಡ ಅಂದರೆ, ಸೂಪರ್ ಮಾರುಕಟ್ಟೆ ಸೇರಿದಂತೆ ಹೊಸಯಲ್ಲಾಪುರ, ಗಾಂಧಿಚೌಕ್ ಹಾಗೂ ಸುತ್ತಲಿನ ಪ್ರದೇಶ ತೀವ್ರ ಇಕ್ಕಟ್ಟಿನಿಂದ ಕೂಡಿದ್ದು ಸುಸಜ್ಜಿತ ಮಾರುಕಟ್ಟೆ ಅಗತ್ಯವಿದೆ. ಸ್ಥಳೀಯ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಎರಡ್ಮೂರು ದಶಕಗಳಿಂದ ಸೂಪರ್ ಮಾರುಕಟ್ಟೆ ಅಭಿವೃದ್ಧಿ ನನೆಗುದಿಗೆ ಬಿದ್ದಿದೆ. ಹೊಸ ಎಪಿಎಂಸಿಯಲ್ಲಿ ತರಕಾರಿ ಮಾರುಕಟ್ಟೆ ಸ್ಥಳಾಂತರವಾದರೂ ಅಲ್ಲಿಂದ ತರಕಾರಿ ತಂದು ನಗರದ ಮಧ್ಯೆದಲ್ಲಿಯೇ ಮಾರಾಟ ಮಾಡಲಾಗುತ್ತಿದೆ. ಮೀನು ಹಾಗೂ ಮಾಂಸದ ಮಾರುಕಟ್ಟೆ ಸಹ ನಗರದ ಮಧ್ಯೆದಲ್ಲಿದ್ದೂ ಅವುಗಳಿಗೆ ಊರಿನ ಹೊರ ಪ್ರದೇಶಕ್ಕೆ ಸ್ಥಳಾಂತರದ ಬೇಡಿಕೆ ಇದೆ.
ರಂಗಮಂದಿರ ಬೇಕು:ಆರ್.ಎನ್. ಶೆಟ್ಟಿ ಕ್ರೀಡಾಂಗಣ ಹೊರತುಪಡಿಸಿದರೆ ನಗರದಲ್ಲಿ ಹೇಳಿಕೊಳ್ಳುವಂತ ಮತ್ತ್ಯಾವ ಕ್ರೀಡಾಂಗಣವಿಲ್ಲ. ಹೀಗಾಗಿ ಕ್ರೀಡಾ ಚಟುವಟಿಕೆ, ಸಾಧನೆಯೂ ಅಷ್ಟಕಷ್ಟೇ. ಕಲಾಭವನ ಮೈದಾನ ಇದ್ದೂ ಇಲ್ಲದಂತಿದೆ. ಸೃಜನಾ ರಂಗಮಂದಿರ ಬಿಟ್ಟು ಮತ್ತ್ಯಾವ ರಂಗಮಂದಿರ ಇಲ್ಲ. ರಂಗಾಯಣಕ್ಕೆ ಸ್ವತಂತ್ರ ಜಾಗವಿಲ್ಲ. ಸೃಜನಾ ಬಾಡಿಗೆ ಜಾಸ್ತಿ ಇರುವುದರಿಂದ ಸಂಗೀತ, ನಾಟಕ ಹಾಗೂ ಇತರೆ ರಂಗ ಚಟುವಟಿಕೆಗಳಿಗೂ ತೊಂದರೆ. ಯಾವುದೇ ಪ್ರದರ್ಶನ-ಮಾರಾಟಕ್ಕೆ ಸುಸಜ್ಜಿತ ಮೈದಾನ ಅಥವಾ ಸರ್ಕಾರದ ಜಾಗವಿಲ್ಲ.
ಶತಮಾನ ಕಂಡಿರುವ ಕೆಲಗೇರಿ ಕೆರೆ ಸ್ಥಿತಿ ಬಗ್ಗೆ ಪ್ರತ್ಯೇಕವಾಗಿ ಹೇಳುವಂತಿಲ್ಲ. ಇಡೀ ಕೆರೆ ಕಳೆಯಿಂದ ಮುಚ್ಚಿದೆ. ಬಾರೋ ಸಾಧನಕೇರಿ ಕೆರೆಯ ಸ್ಥಿತಿ ಬೇರಿಲ್ಲ. ಎರಡೂ ಕೆರೆಗಳಿಗೆ ಇಡೀ ಊರಿನ ಚರಂಡಿ ನೀರು ಹರಿದು ಬರುತ್ತಿದೆ. ಬರೀ ಬಾಹ್ಯ ಸೌಂದರ್ಯಕ್ಕೆ ಹಣ ವೆಚ್ಚ ಮಾಡುತ್ತಿದ್ದು ನೀರು ಸ್ವಚ್ಛವಾಗಿಟ್ಟುಕೊಳ್ಳುವ ಚಿಂತನೆಯೇ ಮಾಡುತ್ತಿಲ್ಲ. ಹೊಸಯಲ್ಲಾಪುರದ ಕೋಳಿಕೆರೆ ಸಹ ಅಭಿವೃದ್ದಿಗೆ ಕಾಯುತ್ತಿದೆ.ಹತ್ತು ವರ್ಷಗಳಿಂದ ನಗರದಲ್ಲಿ ಒಳಚರಂಡಿ ಕಾಮಗಾರಿ ನಡೆಯುತ್ತಿದ್ದು ಪೂರ್ತಿಗೊಳ್ಳುತ್ತಿಲ್ಲ. ಕೆಲವೆಡೆ ಒಳಚರಂಡಿ ಮಾಡಿದ್ದರೂ ಸಂಪರ್ಕ ಕೊಟ್ಟಿಲ್ಲ. ಹಾಗೆಯೇ, ಎಂಟು ವಾರ್ಡ್‌ಗಳಿಗೆ ನಿರಂತರ ನೀರು ನೀಡಿದ್ದು ಉಳಿದ ವಾರ್ಡ್‌ಗಳಿಗೆ ಬರೀ ಪೈಪ್‌ಲೈನ್ ಹಾಕಲಾಗಿದೆ. ಆ ಪೈಪ್‌ಗಳಲ್ಲಿ ನೀರು ಹರಿಯುತ್ತಲೇ ಇಲ್ಲ. ನಗರದಲ್ಲಿ ಸಾರ್ವಜನಿಕ ಶೌಚಾಲಯಗಳ ಕೊರತೆ ಸಾಕಷ್ಟಿದೆ. ಹೀಗಾಗಿ ಜನರು ಬಯಲನ್ನೇ ಆಶ್ರಯಿಸಿದ್ದಾರೆ. ಸ್ವಚ್ಛತೆಗೆ ಪಾಲಿಕೆ ಎಷ್ಟೇ ಕ್ರಮಕೈಗೊಂಡರು ರಸ್ತೆ ಮೇಲೆ ಕಸ ಚೆಲ್ಲುವುದು ನಿಂತಿಲ್ಲ.
ರಾಜ್ಯದಲ್ಲಿ ಧಾರವಾಡಕ್ಕೆ ಒಂದು ಸ್ಥಾನಮಾನವಿದ್ದು ಅದನ್ನು ಉಳಿಸಿಕೊಳ್ಳಲು ಇನ್ನಾದರೂ ಜನಪ್ರತಿನಿಧಿಗಳು, ಆಡಳಿತ ವ್ಯವಸ್ಥೆ ಚಿತ್ತ ಹರಿಸಬೇಕು ಎಂಬುದು ಜನರ ಆಶಯವಾಗಿದೆ.ಪರಿಸರ ದೃಷ್ಟಿಯಿಂದ ಧಾರವಾಡ ಇನ್ನೂ ಹೆಸರು ಉಳಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಈ ಊರು ಸುಸ್ಥಿರ ಅಭಿವೃದ್ಧಿಯತ್ತ ಹೆಜ್ಜೆ ಹಾಕಬೇಕಿದೆ. ಪ್ರತ್ಯೇಕ ಪಾಲಿಕೆಯ ಪರಿಣಾಮವಾಗಿ ನಗರ ಮೂಲಭೂತ ಸೌಕರ್ಯಗಳ ದೃಷ್ಟಿಯಿಂದ ಸಾಕಷ್ಟು ಉತ್ತಮ ಹೆಜ್ಜೆ ಇಡಲು ಅವಕಾಶ ಸೃಷ್ಟಿಯಾಗಿದೆ. ಇದನ್ನು ಬಳಸಿಕೊಂಡು ಬರೀ ರಸ್ತೆ, ಚರಂಡಿ ಮಾತ್ರವಲ್ಲದೇ ಧಾರವಾಡದ ಸಮಗ್ರ ಅಭಿವೃದ್ಧಿಗೆ ಜನಪ್ರತಿನಿಧಿಗಳು ಸ್ವಹಿತಾಸಕ್ತಿ ಮರೆತು ಇಚ್ಛಾಶಕ್ತಿ ತೋರಬೇಕು ಎಂದು ಅಭಿವೃದ್ಧಿ ಪರ ಚಿಂತಕ ಡಾ. ಪ್ರಕಾಶ ಭಟ್ ಹೇಳಿದರು.