ಸಾರಾಂಶ
ಭಟ್ಕಳ: ಶಿರಾಲಿಯ ಅಳ್ವೆಕೋಡಿಯ ದುರ್ಗಾಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಸುಪ್ರಸಿದ್ಧ 6ನೇ ಮಾರಿ ಜಾತ್ರಾ ಮಹೋತ್ಸವಕ್ಕೆ ಮಂಗಳವಾರ ಬೆಳಗ್ಗೆ ಮಾರಿಕಾಂಬಾ ಉತ್ಸವ ಮೂರ್ತಿಯನ್ನು ಗದ್ದುಗೆಯಲ್ಲಿ ಪ್ರತಿಷ್ಠಾಪಿಸುವುದರ ಮೂಲಕ ಅದ್ಧೂರಿಯಾಗಿ ಚಾಲನೆ ನೀಡಲಾಯಿತು. ಅಳ್ವೆಕೋಡಿಯಲ್ಲಿ 6ನೇ ಮಾರಿಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಮಂಗಳವಾರ ಬೆಳಗ್ಗೆಯಿಂದಲೇ ಗದ್ದುಗೆಯಲ್ಲಿ ವಿರಾಜಮಾನವಾದ ಮಾರಿಯಮ್ಮನ ದರ್ಶನಕ್ಕೆ ಭಕ್ತಸಾಗರವೇ ಹರಿದು ಬಂದಿತ್ತು.
ಅಳ್ವೆಕೋಡಿ ಸೇರಿದಂತೆ ತಾಲೂಕು, ಹೊರ ತಾಲೂಕಿನ ಜನರೂ ಮಾರಿ ಜಾತ್ರೆಗೆ ಆಗಮಿಸಿದ್ದು, ಮಾರಿಗೆ ಶ್ರದ್ಧಾಭಕ್ತಿ ಪೂರ್ವಕವಾಗಿ ಪೂಜೆ, ಹರಕೆ ಮುಂತಾದವುಗಳನ್ನು ಸಲ್ಲಿಸಿದರು. ಇದೇ ಸಂದರ್ಭದಲ್ಲಿ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ತೆರಳಿ ದೇವಿಯ ದರ್ಶನವನ್ನೂ ಭಕ್ತರು ಪಡೆದರು.ಅಳ್ವೆಕೋಡಿಯಲ್ಲಿ ಮಾರಿಜಾತ್ರೆಯ ಹಿನ್ನೆಲೆ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಜಾತ್ರೆಯಲ್ಲಿ ದೇವಿಯ ದರ್ಶನಕ್ಕೆ ಹೋಗುವ ಭಕ್ತರಿಗೆ ನೂಕುನುಗ್ಗಲು ಉಂಟಾಗದಂತೆ ತಡೆಯಲು, ಉತ್ತಮ ಪಾರ್ಕಿಂಗ್, ಕುಡಿಯುವ ನೀರು ಸೇರಿದಂತೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿತ್ತು. ಮಂಗಳವಾರ ಮಧ್ಯಾಹ್ನ ಸಾವಿರಾರು ಜನರು ಪ್ರಸಾದ ಭೋಜನ ಸ್ವೀಕರಿಸಿದರು. ಸುಮಾರು 500ಕ್ಕೂ ಅಧಿಕ ಸ್ವಯಂ ಸೇವಕರ ತಂಡ ಜಾತ್ರೆಯ ಯಶಸ್ಸಿಗೆ ಕಾರ್ಯನಿರ್ವಹಿಸುತ್ತಿದೆ.
ಅರ್ಚಕ ಗಜಾನನ, ಮುಕುಂದ ಪುರಾಣಿಕರ ನೇತೃತ್ವದಲ್ಲಿ ಮಾರಿ ಜಾತ್ರೆಯ ಧಾರ್ಮಿಕ ವಿಧಿವಿಧಾನ ನಡೆಸಲಾಯಿತು. ಮಾರಿ ಜಾತ್ರಾ ಸಮಿತಿಯ ಅಧ್ಯಕ್ಷ ರಾಮಾ ಮೊಗೇರ, ದುರ್ಗಾಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ತಿಮ್ಮಪ್ಪ ಹೊನ್ನಿಮನೆ, ಧರ್ಮದರ್ಶಿಗಳಾದ ನಾರಾಯಣ ದೈಮನೆ, ಹನುಮಂತ ನಾಯ್ಕ, ಪ್ರಮುಖರಾದ ಬಾಬು ಮೊಗೇರ, ಭಾಸ್ಕರ ದೈಮನೆ, ಮಂಜುನಾಥ ಕೋಡಿಹಿತ್ತಲ, ಭಾಸ್ಕರ ಮೊಗೇರ ಮುಂಗ್ರಿಮನೆ, ವಿಠಲ ದೈಮನೆ, ರಾಜು ಮೊಗೇರ ಮುಂತಾದವರು ಜಾತ್ರೆಯಲ್ಲಿ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ನೋಡಿಕೊಳ್ಳುತ್ತಿದ್ದಾರೆ.ಬುಧವಾರ ಸಂಜೆ ೫ ಗಂಟೆಗೆ ಸಾವಿರಾರು ಭಕ್ತರು ಬೃಹತ್ ಮೆರವಣಿಗೆಯಲ್ಲಿ ಮಾರಿ ಉತ್ಸವ ಮೂರ್ತಿಯನ್ನು ವಿಶೇಷ ಅಲಂಕೃತ ವಾಹನದಲ್ಲಿ ಅಕರ್ಷಕ ಟ್ಯಾಬ್ಲೋ, ವಾದ್ಯ, ಚಂಡೆ, ನೃತ್ಯ, ಭಜನೆಯೊಂದಿಗೆ 10 ಕಿಮೀ ದೂರದ ಶಿರಾಲಿಯ ಗುಡಿಹಿತ್ತಲಿನ ಕಂಚಿನ ದುರ್ಗಾಪರಮೇಶ್ವರಿ ದೇವಸ್ಥಾನದವರೆಗೆ ಸಾಗಿ ನದಿಯಲ್ಲಿ ಮಾತಾಂಗಿ ಮೂರ್ತಿಯನ್ನು ವಿಸರ್ಜಿಸಲಾಗುತ್ತದೆ.