ಸಂವಿಧಾನ ಜಾಗೃತಿ ಜಾಥಾದಲ್ಲಿ ಧಾರವಾಡಕ್ಕೆ ಮೊದಲ ಸ್ಥಾನ

| Published : Feb 08 2024, 01:33 AM IST

ಸಾರಾಂಶ

ಸಾರ್ವಜನಿಕರಲ್ಲಿ ಸಂವಿಧಾನದ ಮಹತ್ವ ಮೂಡಿಸಲು ಈ ಜಾಗೃತಿಯಲ್ಲಿ ಧಾರವಾಡ ಜಿಲ್ಲೆಗೆ ಪ್ರಥಮ ಮತ್ತು ಕೋಲಾರ 2ನೇ ಸ್ಥಾನ, ಸೊನ್ನೆ ಅಂಕ ಪಡೆದು ಕೊನೆ ಸ್ಥಾನ ಯಾದಗಿರಿ ಪಡೆದಿವೆ.

ಬಸವರಾಜ ಹಿರೇಮಠ

ಧಾರವಾಡ: ಸಂವಿಧಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಕಳೆದ ಜ. 26ರಿಂದ ರಾಜ್ಯಾದ್ಯಂತ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿರುವ ಸಂವಿಧಾನ ಜಾಗೃತಿ ಜಾಥಾ ಧಾರವಾಡದಲ್ಲಿ ಅಭೂತಪೂರ್ವ ಯಶಸ್ಸು ಕಂಡಿದೆ. ರಾಜ್ಯದ 31 ಜಿಲ್ಲೆಗಳಲ್ಲಿ ಸಂವಿಧಾನ ಜಾಗೃತಿ ಜಾಥಾ ಮಾಡುವಲ್ಲಿ ಧಾರವಾಡ ಜಿಲ್ಲೆಯು ಮೊದಲ ಸ್ಥಾನದಲ್ಲಿದೆ.

ಸಾಮಾನ್ಯ ಜನರಿಗೆ ಈ ಜಾಥಾ ಯಾವ ರೀತಿ ಪರಿಣಾಮಕಾರಿಯಾಗಿ ಸಂವಿಧಾನವನ್ನು ತಿಳಿದುಕೊಳ್ಳಲು ಸಹಕಾರಿಯಾಗಿದೆ? ಸಂವಿಧಾನ ಜಾಗೃತಿ ಜಾಥಾ ಯಶಸ್ವಿಗೊಳಿಸಲು ಸಮಿತಿ ರಚನೆ, ಅವರ ಕ್ರಿಯಾಶೀಲತೆ ಹೇಗಿದೆ? ಸೈಕಲ್‌, ಬೈಕ್‌, ಟ್ರ್ಯಾಕ್ಟರ್‌ ಸೇರಿದಂತೆ ಹಲವು ರೀತಿಯ ರ್‍ಯಾಲಿಗಳನ್ನು ಹೇಗೆ ಮಾಡಲಾಗಿದೆ? ಪತ್ರಿಕೆ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಜಾಗೃತಿ ಯಾವ ರೀತಿಯ ಪ್ರಭಾವ ಬೀರಿದೆ ಸೇರಿ ಹಲವು ಅಂಶಗಳ ಆಧಾರದ ಮೇಲೆ ಪ್ರತಿಯೊಂದು ಜಿಲ್ಲೆಗೆ ಅಂಕಗಳನ್ನು ನೀಡಿದ್ದು, 700 ಅಂಕಗಳಲ್ಲಿ ಧಾರವಾಡ ಜಿಲ್ಲೆಯು 600 ಅಂಕಗಳನ್ನು ಪಡೆದು ಮೊದಲ ಸ್ಥಾನದಲ್ಲಿದೆ.

2ನೇ ಸ್ಥಾನ ಕೋಲಾರ (210), 3ನೇ ಸ್ಥಾನ ಬಾಗಲಕೋಟ (200), 4ನೇ ಸ್ಥಾನ ಬೆಳಗಾವಿ (180) ಹಾಗೂ 5ನೇ ಸ್ಥಾನ ಕಲಬುರಗಿ (180) ಪಡೆದಿದೆ. ದಾವಣಗೆರೆ, ಮಂಡ್ಯ, ಉತ್ತರ ಕನ್ನಡ ಹಾಗೂ ಯಾದಗಿರಿ ಜಿಲ್ಲೆಗಳು ಸೊನ್ನ ಅಂಕ ಪಡೆಯುವ ಮೂಲಕ ಕೊನೆ ಸ್ಥಾನದಲ್ಲಿವೆ.

ಏತಕ್ಕೆ ಧಾರವಾಡ ಪ್ರಥಮ

ಕಳೆದ ಜ. 26ರಂದು ನಡೆದ ಗಣರಾಜ್ಯೋತ್ಸವದ ದಿನ ಇಲ್ಲಿಯ ಆರ್‌.ಎನ್‌. ಶೆಟ್ಟಿ ಕ್ರೀಡಾಂಗಣದಲ್ಲಿ ಈ ಸಂವಿಧಾನ ಜಾಗೃತಿಗೆ ಜಾಥಾಗೆ ಚಾಲನೆ ದೊರೆಯಿತು. ವಾಹನವೊಂದರಲ್ಲಿ ಸುಮಾರು 15 ಅಡಿ ಎತ್ತರದಲ್ಲಿ ನಿಂತ ಸಂವಿಧಾನ ಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ ಅವರ ಮೂರ್ತಿಯೊಂದಿಗೆ ಅದ್ಭುತವಾದ ಎಲ್‌ಇಡಿ ಸ್ಕ್ರೀನ್‌ ಅಳವಡಿಸಿ ಈಗಾಗಲೇ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸಂವಿಧಾನದ ಜಾಗೃತಿ ಮೂಡಿಸಲಾಗಿದೆ. ವಾಹನದೊಂದಿಗೆ ಕಲಾ (ಜಗ್ಗಲಗಿ, ಲಂಬಾಣಿ ಕುಣಿತ, ಭಜನೆ, ಡೊಳ್ಳು) ತಂಡಗಳಿಂದ ಪ್ರದರ್ಶನ, ಸಂವಿಧಾನ ಅರಿತ ತಜ್ಞರಿಂದ ಜನರನ್ನು ಒಗ್ಗೂಡಿಸಿ ಉಪನ್ಯಾಸ ನೀಡಲಾಗಿದೆ. ಗ್ರಾಮೀಣದಲ್ಲಿ ಎತ್ತಿನಗಾಡಿ, ಟ್ರ್ಯಾಕ್ಟರ್‌ ರ್‍ಯಾ ಲಿ ಮಾಡಿ ಜನರ ಗಮನ ಸೆಳೆಯಲಾಗಿದೆ. ನಗರದಲ್ಲಿ ಪಂಜಿನ ಮೆರವಣಿಗೆ, ಕ್ಯಾಂಡಲ್‌ ಮಾರ್ಚ್‌, ಶಾಲಾ-ಕಾಲೇಜುಗಳಲ್ಲಿ ವಿವಿಧ ಸ್ಪರ್ಧೆಗಳನ್ನು ಮಕ್ಕಳಿಗೆ ಏರ್ಪಡಿಸಿ ಸಂವಿಧಾನ ಶ್ರೇಷ್ಠತೆ ಮಹತ್ವವನ್ನು ಮಕ್ಕಳಿಗೆ ತಿಳಿಸಲಾಗಿದೆ ಎಂದು ಸಂವಿಧಾನ ಜಾಗೃತಿ ಜಾಥಾದ ಜವಾಬ್ದಾರಿ ವಹಿಸಿಕೊಂಡ ಸಮಾಜ ಕಲ್ಯಾಣ ಇಲಾಖೆಯ ಅಪರ ನಿರ್ದೇಶಕ ಅಲ್ಲಭಕ್ಷ ಎಂ.ಎಸ್‌. ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.

ಪ್ರತಿಯೊಬ್ಬ ವ್ಯಕ್ತಿಯೂ ಸಂವಿಧಾನದ ಬಗ್ಗೆ ತಿಳಿದುಕೊಳ್ಳುವಂತೆ ಸಂವಿಧಾನ ಪೀಠಿಕೆಯನ್ನು ಕನ್ನಡ ಮತ್ತು ಇಂಗ್ಲೀಷ್‌ ಭಾಷೆಗಳಲ್ಲಿ ವಿತರಣೆ ಮಾಡಲಾಗಿದೆ. ಈ ಮೂಲಕ ತನ್ನ ಹಕ್ಕು, ಕರ್ತವ್ಯಗಳ ಬಗ್ಗೆ ಅರಿವು ಮೂಡಿಸಲಾಗಿದೆ. ಪ್ರಸ್ತುತ ಫೆ. 5ರ ವರೆಗೆ ಜಿಲ್ಲೆಯ 72 ಗ್ರಾಮ ಪಂಚಾಯ್ತಿಗಳು ಹಾಗೂ 16 ವಾರ್ಡ್‌ಗಳಲ್ಲಿ ಈ ಜಾಥಾ ಸಾಗಿದ್ದು, ಯಶಸ್ವಿಯಾಗಿದೆ. ಸಂವಿಧಾನದ ಪೀಠಿಕೆ, ನ್ಯಾಯ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ, ಡಾ. ಬಿ.ಆರ್‌. ಅಂಬೇಡ್ಕರ ಅವರ ಪರಿಕಲ್ಪನೆ, ಬಸವಣ್ಣನವರ ವಚನಗಳು ಮತ್ತು ಸಂವಿಧಾನದಲ್ಲಿ ವಚನಗಳ ಪ್ರಸ್ತುತತೆಯೊಂದಿಗೆ ಜಿಲ್ಲೆಯ ಸಾಧಕ, ಐತಿಹಾಸಿಕ ವ್ಯಕ್ತಿಗಳು, ಸಾಹಿತ್ಯ ದಿಗ್ಗಜರು, ಕಲಾವಿದರು, ಸಂಸ್ಕೃತಿ ಬಗ್ಗೆಯೂ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ಅಲ್ಲಾಭಕ್ಷ ತಿಳಿಸಿದರು.

ಹೆಮ್ಮೆ ತಂದಿದೆ.

ಭಾರತೀಯ ಪ್ರಜೆಗಳಿಗೆ ಭಾರತದ ಸಂವಿಧಾನವೇ ಮೂಲ. ಆದರೆ, ಬಹಳಷ್ಟು ಜನರಿಗೆ ಸಂವಿಧಾನದ ಬಗ್ಗೆ ಅರಿವಿಲ್ಲ. ಆದ್ದರಿಂದ ಭಾರತದ ಸಂವಿಧಾನ ಅಂಗೀಕಾರವಾಗಿ 75 ವರ್ಷಗಳಾಗಿರುವ ಹಿನ್ನೆಲೆಯಲ್ಲಿ ಜಾಗೃತಿ ನಡೆಯುತ್ತಿದೆ. ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರು ಸೇರಿದಂತೆ ಜನಪ್ರತಿಧಿಗಳು, ಅಧಿಕಾರಿಗಳು ಸಕ್ರೀಯವಾಗಿ ಪಾಲ್ಗೊಂಡ ಕಾರಣ ರಾಜ್ಯದಲ್ಲಿಯೇ ಧಾರವಾಡ ಪ್ರಥಮ ಸ್ಥಾನ ಪಡೆದಿರುವುದು ಹೆಮ್ಮೆ ತಂದಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ತಿಳಿಸಿದ್ದಾರೆ.