ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(ಎಸ್ಐಆರ್‌) ಪ್ರಕ್ರಿಯೆ ಸಂಬಂಧ ಬೆಂಗಳೂರಿನಲ್ಲಿ ಗುರುವಾರ ನಡೆದ ರಾಜಕೀಯ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ವಿದೇಶಿ ಪ್ರಜೆ ಧ್ರುವ್‌ ರಾಠಿ ಅವರ ಪೌರತ್ವ, ವೀಸಾ, ಕಾನೂನುಗಳ ಪಾಲನೆ ಕುರಿತು ಪರಿಶೀಲಿಸುವಂತೆ ನಿವೃತ್ತ ಐಪಿಎಸ್ ಅಧಿಕಾರಿ ಹಾಗೂ ಬಿಜೆಪಿ ಮುಖಂಡ ಭಾಸ್ಕರ್‌ ರಾವ್‌ ಅವರು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಗೃಹ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(ಎಸ್ಐಆರ್‌) ಪ್ರಕ್ರಿಯೆ ಸಂಬಂಧ ಬೆಂಗಳೂರಿನಲ್ಲಿ ಗುರುವಾರ ನಡೆದ ರಾಜಕೀಯ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ವಿದೇಶಿ ಪ್ರಜೆ ಧ್ರುವ್‌ ರಾಠಿ ಅವರ ಪೌರತ್ವ, ವೀಸಾ, ಕಾನೂನುಗಳ ಪಾಲನೆ ಕುರಿತು ಪರಿಶೀಲಿಸುವಂತೆ ನಿವೃತ್ತ ಐಪಿಎಸ್ ಅಧಿಕಾರಿ ಹಾಗೂ ಬಿಜೆಪಿ ಮುಖಂಡ ಭಾಸ್ಕರ್‌ ರಾವ್‌ ಅವರು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಗೃಹ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

ರಾಠಿ ಪ್ರಸ್ತುತ ಜರ್ಮನ್‌ ಪೌರತ್ವ ಹೊಂದಿದ್ದಾರೆ. ವಿದೇಶಿ ಪ್ರಜೆ ಆಗಿರುವ ಅವರು ಇಸಿಐ ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದ ಸಂಘಟಿತ ರಾಜಕೀಯ ಚಟುವಟಿಕೆಯಲ್ಲಿ ಭಾಗವಹಿಸಲು, ಸಭೆ ಉದ್ದೇಶಿಸಿ ಮಾತನಾಡಲು ಅಥವಾ ಗುರುತಿಸಿಕೊಳ್ಳಲು ಕಾನೂನುಬದ್ಧವಾಗಿ ಅರ್ಹರೇ ಎಂಬುದನ್ನು ಪರಿಶೀಲಿಸಬೇಕು ಎಂದು ಭಾಸ್ಕರ್‌ ರಾವ್‌ ಒತ್ತಾಯಿಸಿದ್ದಾರೆ. ವಿದೇಶಿ ಪ್ರಜೆಗಳು ತಮ್ಮ ವೀಸಾ ಅಥವಾ ಇತರ ವಲಸೆ ಅನುಮತಿಗೆ ಸಂಬಂಧಿಸಿದ ಷರತ್ತುಗಳನ್ನು ಪಾಲಿಸಬೇಕು ಮತ್ತು ಯಾವ ಉದ್ದೇಶಕ್ಕಾಗಿ ಅಂಥ ಅನುಮತಿ ನೀಡಲಾಗಿದೆಯೋ ಅದಕ್ಕೆ ಬದ್ಧರಾಗಿರಬೇಕು ಎಂದು ತಿಳಿಸಿದ್ದಾರೆ.

ಭಾರತದಲ್ಲಿ ವಿದೇಶಿ ಪ್ರಜೆಗಳ ಪ್ರವೇಶ, ವಾಸ್ತವ್ಯ ಮತ್ತು ಚಟುವಟಿಕೆಗಳನ್ನು ನಿಯಂತ್ರಿಸುವ ನಿಯಂತ್ರಕ ಚೌಕಟ್ಟನ್ನು ಕೇಂದ್ರ ಸರ್ಕಾರ ನಿಗದಿಪಡಿಸಿದೆ.ಗುರುವಾರ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ರಾಠಿ ಸೇರಿ ಹಲವರು ಭಾಗವಹಿಸಿ, ಕೇಂದ್ರ ಚುನಾವಣಾ ಆಯೋಗದ(ಇಸಿಐ) ಎಸ್‌ಐಆರ್‌ ಪ್ರಕ್ರಿಯೆ ಸಂಬಂಧ ಮಾತನಾಡಿದ್ದಾರೆ. ಈ ವೇಳೆ ರಾಠಿ ಅವರು ಇಸಿಐ ಕುರಿತು ಸಾರ್ವಜನಿಕವಾಗಿ ಟೀಕಿಸಿದ್ದಾರೆ. ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಶೂನ್ಯ ಪಾರದರ್ಶಕತೆ ಮತ್ತು ಶೂನ್ಯ ಹೊಣೆಗಾರಿಕೆ ಇದೆ ಆರೋಪಿಸಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ವಿದೇಶಿ ಪ್ರಜೆಯಾಗಿದ್ರೂ ರಾಜಕೀಯ ಚಟುವಟಿಕೆಯಲ್ಲಿ ಭಾಗಿ:ಹೀಗಾಗಿ ಪ್ರಸ್ತುತ ಪ್ರಕರಣದಲ್ಲಿ ರಾಠಿ ಅವರು ಯಾವ ನಿಖರವಾದ ವಲಸೆ ಸ್ಥಾನಮಾನದ ಅಡಿ ಭಾರತಕ್ಕೆ ಪ್ರವೇಶಿಸಿದ್ದಾರೆ? ಭಾರತಕ್ಕೆ ಪ್ರವೇಶಿಸಲು ಅವರು ಬಳಸಿದ ಪಾಸ್‌ಪೋರ್ಟ್, ನೀಡಲಾದ ವೀಸಾ ಅಥವಾ ಇತರ ಅನುಮತಿಯ ವರ್ಗ, ಅವರ ಭೇಟಿಯ ಘೋಷಿತ ಉದ್ದೇಶ, ಅವರ ಅಧಿಕೃತ ವಾಸ್ತವ್ಯದ ಅವಧಿ ಮತ್ತು ಅಂತಹ ಅನುಮತಿಗೆ ಸಂಬಂಧಿಸಿದ ಷರತ್ತುಗಳನ್ನು ಖಚಿತಪಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದಿದ್ದಾರೆ.ರಾಠಿ ಈ ಹಿಂದೆ ಇದೇ ರೀತಿಯ ರಾಜಕೀಯ ಚಟುವಟಿಕೆಗಳು, ಪ್ರತಿಭಟನೆಗಳು, ಸಾರ್ವಜನಿಕ ಸಭೆಗಳು ಅಥವಾ ರಾಜಕೀಯವಾಗಿ ಸೂಕ್ಷ್ಮವಾದ ಇತರ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆಯೇ ಎಂಬುದನ್ನು ಸಚಿವಾಲಯ ಖಚಿತಪಡಿಸಿಕೊಳ್ಳಬೇಕು. ವಿದೇಶಿಯರ ಕಾಯ್ದೆ, 1946 ಅನ್ವಯವಾಗುವ ವಲಸೆ ನಿಯಮಗಳು, ವೀಸಾ ಷರತ್ತುಗಳು, ಒಸಿಐ ನಿಯಮಗಳು ಅಥವಾ ಇತರ ಯಾವುದೇ ಅನ್ವಯವಾಗುವ ಕಾನೂನಿನ ಉಲ್ಲಂಘನೆ ಕಂಡುಬಂದರೆ, ಕಾನೂನು ಪ್ರಕಾರ ಅವರ ವಿರುದ್ಧ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಬೇಕು ಎಂದು ಭಾಸ್ಕರ್‌ ರಾವ್‌ ಮನವಿ ಮಾಡಿದ್ದಾರೆ.