ಯಲಬುರ್ಗಾ: ಅನೇಕ ನಾಟಕ ರಚಿಸಿ,ನಿರ್ದೇಶಿಸಿದ ಪಿ.ಬಿ. ಧುತ್ತರಗಿ ವೃತ್ತಿರಂಗಭೂಮಿಯ ಜನಪ್ರಿಯ ರಂಗಭೂಮಿ ಕಲಾವಿದರಾಗಿ ಜನ ಮಾನಸದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ ಎಂದು ಕೊಪ್ಪಳ ವಿವಿ ಕುಲಪತಿ ಡಾ. ಎಸ್.ವಿ. ಡಾಣಿ ಹೇಳಿದರು.
ಪಟ್ಟಣದ ಪಿಜಿ ಸೆಂಟರ್‌ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬಾಗಲಕೋಟೆಯ ಸುಳೆಬಾವಿಯ ಪಿ.ಬಿ. ಧುತ್ತರಗಿ ಟ್ರಸ್ಟ್ ಸಹಯೋಗದಲ್ಲಿ ಧುತ್ತರಗಿ ರಚಿಸಿದ ತಾಯಿಯ ಕರುಳು ನಾಟಕ ವಿದ್ಯಾರ್ಥಿಗಳಿಂದ ಓದು ನಾಟಕ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಧುತ್ತರಗಿ ಸಾಮಾಜಿಕ,ಪೌರಾಣಿಕ ಹಾಗೂ ಐತಿಹಾಸಿಕ ನಾಟಕಗಳು ರೀತಿ ನೀತಿ ಕಟ್ಟಿ ಕೊಡುತ್ತಿದ್ದವು. ಅಂತಹ ನಾಟಕಗಳು ಇಂದು ನೇಪತ್ಯಕ್ಕೆ ಸರಿಯುತ್ತಿವೆ.ತಂತ್ರಜ್ಞಾನದ ಯುಗದಲ್ಲಿ ಯುವಕರು ಓದು ಬರಹದಿಂದ ದೂರವಾಗುತ್ತಿದ್ದಾರೆ.ನಾಟಕ, ಕತೆ, ಕಾವ್ಯ ಹಾಗೂ ಕಾದಂಬರಿ ಓದಿದಾಗ ನಮಗೆ ನೆಮ್ಮದಿ ಮತ್ತು ಖುಷಿ ತರುತ್ತದೆ. ಧುತ್ತರಗಿ ಆದರ್ಶಗಳು ನಮಗೆ ದಾರಿ ದೀಪವಾಗುತ್ತವೆ. ಅವರ ಹೆಸರು ಜೀವಂತವಾಗಿ ಜನಮಾನಸದಲ್ಲಿ ಅಚ್ಚಳಿಯದೆ ಉಳಿಯಲು ಸುಳೆಬಾವಿ ಧುತ್ತರಗಿ ಟ್ರಸ್ಟ್ ಸಂಸ್ಥೆ ಮಾಡುತ್ತಿದೆ. ಅವರಿಗೆ ಸರ್ಕಾರ ನೆರವು ನೀಡಬೇಕು ಎಂದರು.
ಡಾ. ವೆಂಕಟಗಿರಿ ದಳವಾಯಿ ಮಾತನಾಡಿ, ಬಡತನದ ಕಾರಣದಿಂದ ಬಸನಗೌಡರಿಗೆ ಮಗನನ್ನು ಓದಿಸುವುದು ಸಾಧ್ಯವಾಗಲಿಲ್ಲ. ನಟನೆಯ ಬಗ್ಗೆ ಒಲವಿದ್ದ ಬಸನಗೌಡರು ಹಂದಿಗನೂರು ಸಿದ್ರಾಮಪ್ಪನವರ ಕಂಪನಿಗೆ ಸೇರಿ ನಟರಾದರು. ಇದರಿಂದ ಮಗ ಖ್ಯಾತ ನಾಟಕಕಾರನಾಗಲು ಸಾಧ್ಯವಾಯಿತು. ಹೀಗಾಗಿ ಧುತ್ತರಗಿ ಎಲ್ಲರ ಅಚ್ಚುಮೆಚ್ಚಿನವರಾದರು ಎಂದರು.ರವೀಂದ್ರ ಬೆಟಗೇರಿ ಮಾತನಾಡಿದರು. ಪಿ.ಬಿ.ಧುತ್ತರಗಿ ಟ್ರಸ್ಟ್ ಅಧ್ಯಕ್ಷ ಎಸ್ಕೆ ಕೋನೆಸಾಗರ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಪಿಜಿ ಸೆಂಟರ್ ಆಡಳಿತಾಧಿಕಾರಿ ಕೆ.ಎಚ್. ಛತ್ರದ, ಸಿದ್ದಪ್ಪ, ತಿಮ್ಮಪ್ಪ,ವಜ್ಜಲ್,ಸಂಯೋಜಕ ಪ್ರಹ್ಲಾದ್ ಡಿ.ಎಂ. ಸುನಂದಾ ಕಂದಗಲ್, ಡಾ.ಕಾಳಮ್ಮ, ಡಾ. ನಾಗಪ್ಪ ಹೂವಿನಬಾವಿ, ಡಾ. ತಿಮ್ಮಾರಡ್ಡಿ ಸೇರಿದಂತೆ ಮತ್ತಿತರರು ಇದ್ದರು.