ಸಾರಾಂಶ
ಚಾಮರಾಜನಗರ: ರಾಷ್ಟ್ರೀಯ ಕ್ರೀಡಾ ದಿನಾಚರಣೆ ಹಾಗೂ ಮೇಜರ್ ಧ್ಯಾನ್‌ಚಂದ್ ಅವರ ಜನ್ಮದಿನದ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಚಾಮರಾಜನಗರ ಜಿಲ್ಲಾಮಟ್ಟದ ಮ್ಯಾರಾಥಾನ್ ಓಟ ಏರ್ಪಡಿಸಲಾಗಿತ್ತು.ಗುರುವಾರ ಬೆಳಗ್ಗೆಯೇ ಮ್ಯಾರಾಥಾನ್ ಓಟದಲ್ಲಿ ಪಾಲ್ಗೊಳ್ಳುವ ಸಲುವಾಗಿ ನಗರದ ಶ್ರೀ ಚಾಮರಾಜೇಶ್ವರ ದೇವಾಲಯದ ಆವರಣದಲ್ಲಿ ಸಮಾವೇಶಗೊಂಡಿದ್ದ ಜಿಲ್ಲೆಯ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಆಕರ್ಷಕ ಸಮವಸ್ತ್ರ ಧರಿಸಿ ಮ್ಯಾರಥಾನ್ ಓಟದಲ್ಲಿ ಭಾಗವಹಿಸಿ ಗಮನ ಸೆಳೆದರು.
ಜಿಪಂ ಸಿಇಒ ಮೋನಾ ರೋತ್ ಜಿಲ್ಲಾಮಟ್ಟದ ಮ್ಯಾರಥಾನ್ ಓಟಕ್ಕೆ ಹಸಿರು ನಿಶಾನೆ ತೋರಿದರು. ಬಳಿಕ ಮಾತನಾಡಿದ ಅವರು, ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ಹಾಗೂ ಮೇಜರ್ ಧ್ಯಾನ್‌ಚಂದ್ ಸ್ಮರಣಾರ್ಥ ಜಿಲ್ಲಾಮಟ್ಟದ ಮ್ಯಾರಥಾನ್ ಏರ್ಪಡಿಸಲಾಗಿದೆ. ಮ್ಯಾರಥಾನ್‌ನಲ್ಲಿ ಭಾಗವಹಿಸುವ ಮೂಲಕ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸೇರಿದಂತೆ ಪ್ರತಿಯೊಬ್ಬರು ಶಾರೀರಿಕ ಸುಸ್ಥಿತಿಯನ್ನು ಕಾಪಾಡಿಕೊಳ್ಳಬೇಕು ಎಂದರು.ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಪಿ.ಲಕ್ಷ್ಮಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಶಿವಸ್ವಾಮಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ ಪ್ರಸನ್ನ, ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿ ಸಮಿತಿ ಸದಸ್ಯ ಶ್ರೀನಿವಾಸಪ್ರಸಾದ್, ಇತರರು ಇದ್ದರು. ಮ್ಯಾರಥಾನ್ ಓಟವು ಚಾಮರಾಜೇಶ್ವರ ದೇವಸ್ಥಾನದಿಂದ ಆರಂಭವಾಗಿ ನಗರದ ಜೋಡಿರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಾಗಿ ಪ್ರವಾಸಿಮಂದಿರದಲ್ಲಿ ಮುಕ್ತಾಯಗೊಂಡಿತು.