ಹಾಕಿ ಮಾಂತ್ರಿಕ ಮೇಜರ್ ಧ್ಯಾನಚಂದ್ ಅವರ ಕ್ರೀಡಾಕೌಶಲ್ಯ, ಶಿಸ್ತು, ರಾಷ್ಟ್ರಪ್ರೇಮ ಹಾಗೂ ಕ್ರೀಡೆಯ ಬಗೆಗಿನ ಬದ್ಧತೆ ಇಂದಿನ ಯುವಜನತೆಗೆ ಮಾದರಿಯಾಗಲಿ ಎಂದು ಡಾ. ಎಚ್. ತಿಪ್ಪೇಸ್ವಾಮಿ ಅಭಿಪ್ರಾಯಪಟ್ಟರು.
ಸಂಡೂರು: ಹಾಕಿ ಮಾಂತ್ರಿಕ ಮೇಜರ್ ಧ್ಯಾನಚಂದ್ ಅವರ ಕ್ರೀಡಾಕೌಶಲ್ಯ, ಶಿಸ್ತು, ರಾಷ್ಟ್ರಪ್ರೇಮ ಹಾಗೂ ಕ್ರೀಡೆಯ ಬಗೆಗಿನ ಬದ್ಧತೆ ಇಂದಿನ ಯುವಜನತೆಗೆ ಮಾದರಿಯಾಗಲಿ ಎಂದು ವಿಜಯನಗರ ಶ್ರೀಕೃಷ್ಣವಿಶ್ವವಿದ್ಯಾಲಯದ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ. ಎಚ್. ತಿಪ್ಪೇಸ್ವಾಮಿ ಅಭಿಪ್ರಾಯಪಟ್ಟರು.
ತಾಲೂಕಿನ ನಂದಿಹಳ್ಳಿಯಲ್ಲಿರುವ ಸ್ನಾತಕೋತ್ತರ ಕೇಂದ್ರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.ವಿದ್ಯಾರ್ಥಿಗಳು ಪಠ್ಯ ಕಲಿಕೆಯ ಜೊತೆಗೆ ಕ್ರೀಡೆಗಳಲ್ಲೂ ಸಕ್ರಿಯವಾಗಿ ಭಾಗವಹಿಸಬೇಕು. ಕ್ರೀಡೆಯು ದೈಹಿಕ ಸದೃಢತೆಯೊಂದಿಗೆ ಶಿಸ್ತು, ಆತ್ಮವಿಶ್ವಾಸ, ನಾಯಕತ್ವ ಗುಣ ಹಾಗೂ ತಂಡದ ಮನೋಭಾವವನ್ನು ಬೆಳೆಸುತ್ತದೆ. ವಿದ್ಯಾರ್ಥಿಗಳು ಕ್ರೀಡಾಕ್ಷೇತ್ರದಲ್ಲಿಯೂ ಉತ್ತಮ ಸಾಧನೆ ಮಾಡುವ ಮೂಲಕ ವಿಶ್ವವಿದ್ಯಾಲಯಕ್ಕೆ ಕೀರ್ತಿ ತರಬೇಕು. ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ದಕ್ಷಿಣ ವಲಯ ಅಂತರ್ ವಿಶ್ವವಿದ್ಯಾಲಯ ವಾಲಿಬಾಲ್ ಪಂದ್ಯಾವಳಿ ಆಯೋಜಿಸಿರುವುದು ಶ್ಲಾಘನೀಯ ಬೆಳವಣಿಗೆಯಾಗಿದೆ ಎಂದರು.
ಜನಪ್ರಿಯ ಕ್ರೀಡೆಗಳ ಜೊತೆಗೆ ಸಾಂಪ್ರದಾಯಿಕ ಹಾಗೂ ದೇಶಿ ಕ್ರೀಡೆಗಳಿಗೂ ವಿಶ್ವವಿದ್ಯಾಲಯದ ಮಟ್ಟದಲ್ಲಿ ಹೆಚ್ಚಿನ ಪ್ರೋತ್ಸಾಹ ನೀಡಬೇಕಾಗಿದೆ. ದೇಶಿ ಕ್ರೀಡೆಗಳು ನಮ್ಮ ಸಂಸ್ಕೃತಿ ಮತ್ತು ಪರಂಪರೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದು, ಅವುಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಯುವಜನರ ಮೇಲಿದೆ ಎಂದು ತಿಳಿಸಿದರು.ಸಹಾಯಕ ಕ್ರೀಡಾ ನಿರ್ದೇಶಕ ಶಿವರಾಮಪ್ಪ ರಾಗಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿದ್ಯಾರ್ಥಿ ರಶ್ಮಿ ಅವರು ಮೇಜರ್ ಧ್ಯಾನಚಂದ್ ಅವರ ಜೀವನ, ಕ್ರೀಡಾ ಸಾಧನೆ ಹಾಗೂ ದೇಶಕ್ಕೆ ನೀಡಿದ ಕೊಡುಗೆ ಕುರಿತು ವಿವರಿಸಿದರು.
ಉಪನ್ಯಾಸಕ ಡಾ. ಅಶ್ವಿನ್ ಕುಮಾರ್, ಡಾ. ನರಸಿಂಹಮೂರ್ತಿ, ಡಾ. ಮಲ್ಲಯ್ಯ ಸೇರಿದಂತೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಕ್ರೀಡಾ ಸಹಾಯಕ ಕಣಿವೆಹಳ್ಳಿ ಪಾಪಯ್ಯ ನಿರೂಪಿಸಿದರು.