ಕನ್ನಡಪ್ರಭವಾರ್ತೆ ಅರಸೀಕೆರೆ
ಕಾವೇರಿ ನದಿ ನೀರಿನ ಹಂಚಿಕೆ ವಿವಾದವು ರಾಜಕೀಯ ಆರೋಪ-ಪ್ರತ್ಯಾರೋಪಗಳ ವೇದಿಕೆಯಾಗದೆ, ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳು ಪರಸ್ಪರ ಸಂವಾದ ನಡೆಸುವ ಮೂಲಕ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಅಭಿಪ್ರಾಯಪಟ್ಟರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮಳೆ ಕೊರತೆಯಿಂದ ಜಲಾಶಯಗಳಲ್ಲಿ ನೀರಿನ ಸಂಗ್ರಹ ತೀರಾ ಕಡಿಮೆ ಇದೆ. ಕುಡಿಯುವ ನೀರು ಹಾಗೂ ರೈತರ ಹಿತಾಸಕ್ತಿಗೆ ಮೊದಲ ಆದ್ಯತೆ ನೀಡುವುದು ಅನಿವಾರ್ಯ. ಹೀಗಾಗಿ ಪ್ರಸ್ತುತ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಹರಿಸುವುದು ಸಾಧ್ಯವಿಲ್ಲ ಎಂಬ ವಾಸ್ತವವನ್ನು ಎರಡೂ ರಾಜ್ಯಗಳು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಶೀಘ್ರದಲ್ಲೇ ಭೇಟಿಯಾಗಿ ಚರ್ಚೆ ನಡೆಸಲಿದ್ದಾರೆ ಎಂಬ ಮಾಹಿತಿ ಇದ್ದು, ಆ ಸಭೆಯಲ್ಲಿ ವಾಸ್ತವ ಪರಿಸ್ಥಿತಿ ಆಧರಿಸಿ ಸಮನ್ವಯದ ನಿರ್ಧಾರ ಕೈಗೊಳ್ಳಬೇಕು. ಪ್ರತಿ ವರ್ಷ ನಿಗದಿತ ಪ್ರಮಾಣದ ನೀರು ಹರಿಸುವ ಆದೇಶವಿದ್ದರೂ, ನೀರಿನ ಲಭ್ಯತೆ ಇಲ್ಲದ ಸಂದರ್ಭಗಳಲ್ಲಿ ಪರ್ಯಾಯ ಮಾರ್ಗಗಳ ಬಗ್ಗೆ ಚಿಂತನೆ ನಡೆಸುವುದು ಅಗತ್ಯ ಎಂದು ಹೇಳಿದರು.ಮುಂದಿನ ದಿನಗಳಲ್ಲಿ ನೀರಿನ ಸಮರ್ಪಕ ಬಳಕೆ, ಜಲಸಂರಕ್ಷಣೆ ಹಾಗೂ ಪರಸ್ಪರ ಸಹಕಾರದ ಕುರಿತು ದೀರ್ಘಾವಧಿಯ ಯೋಜನೆ ರೂಪಿಸಿದರೆ ಹಲವು ದಶಕಗಳಿಂದ ಮುಂದುವರಿದಿರುವ ಕಾವೇರಿ ವಿವಾದಕ್ಕೆ ಶಾಶ್ವತ ಪರಿಹಾರ ಸಿಗಲಿದೆ. ಈ ಸಮಸ್ಯೆಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸದೆ ಈಗಲೇ ಬಗೆಹರಿಸುವುದು ಸರ್ಕಾರಗಳ ಜವಾಬ್ದಾರಿ ಎಂದು ತಿಳಿಸಿದರು.ಬಾಕ್ಸನೀಟ್ ಹಗರಣದ ವಿರುದ್ಧ ಆಕ್ರೋಶ:
ಇದೇ ವೇಳೆ ನೀಟ್ ಪರೀಕ್ಷೆ ಹಗರಣದ ಕುರಿತು ಪ್ರತಿಕ್ರಿಯಿಸಿದ ಅವರು, ಈ ಪ್ರಕರಣದಲ್ಲಿ ನಡೆದ ಅಕ್ರಮಗಳು ದೇಶದ ಶಿಕ್ಷಣ ವ್ಯವಸ್ಥೆಯ ಮೇಲಿನ ನಂಬಿಕೆಗೆ ಧಕ್ಕೆ ತಂದಿವೆ. ತಪ್ಪಿತಸ್ಥರನ್ನು ಯಾವುದೇ ಒತ್ತಡಕ್ಕೂ ಮಣಿಯದೆ ಕಾನೂನು ಕ್ರಮಕ್ಕೆ ಒಳಪಡಿಸಬೇಕು ಹಾಗೂ ಮೃತಪಟ್ಟ ವಿದ್ಯಾರ್ಥಿಗಳ ಕುಟುಂಬಗಳಿಗೆ ಕೇಂದ್ರ ಸರ್ಕಾರ ಸೂಕ್ತ ಪರಿಹಾರ ಘೋಷಿಸಬೇಕು ಎಂದು ಒತ್ತಾಯಿಸಿದರು.ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಆರಂಭದಲ್ಲಿ ನಿರ್ಲಕ್ಷ್ಯ ಮಾಡಿದ್ದು ಸರಿಯಲ್ಲ. ಶಿಕ್ಷಣ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ವಿಶ್ವಾಸ ಮರುಸ್ಥಾಪಿಸಲು ಕೇಂದ್ರ ಸರ್ಕಾರ ತಕ್ಷಣವೇ ಅಗತ್ಯ ಸುಧಾರಣೆಗಳನ್ನು ಜಾರಿಗೊಳಿಸಬೇಕು. ಪ್ರಧಾನಮಂತ್ರಿ ಸಹ ನೊಂದ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳಿಗೆ ಧೈರ್ಯ ತುಂಬುವ ಸಂದೇಶ ನೀಡಬೇಕಿತ್ತು ಎಂದು ಹೇಳಿದರು.ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಪರೀಕ್ಷಾ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ ತರಬೇಕು. ವಿದ್ಯಾರ್ಥಿಗಳ ಹೋರಾಟಕ್ಕೆ ರಾಜಕೀಯ ಬಣ್ಣ ಬಳಿಯಬಾರದು. ಯಾವುದೇ ಪಕ್ಷವೂ ಈ ಹೋರಾಟದ ಯಶಸ್ಸನ್ನು ತನ್ನ ಲಾಭಕ್ಕಾಗಿ ಬಳಸಿಕೊಳ್ಳುವ ಪ್ರಯತ್ನ ಮಾಡಬಾರದು ಎಂದು ಎಚ್ಚರಿಸಿದರು.ಮುಂದೆಯೂ ವಿದ್ಯಾರ್ಥಿಗಳ ನ್ಯಾಯಸಮ್ಮತ ಹೋರಾಟಗಳಿಗೆ ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲ ನೀಡಲಿದೆ ಎಂದು ಘೋಷಿಸಿದ ಅವರು, ಪ್ರತಿಭಟನೆಯ ವೇಳೆ ವಿದ್ಯಾರ್ಥಿಗಳ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನು ವಾಪಸ್ ಪಡೆಯಬೇಕು. ಪ್ರಶ್ನೆಪತ್ರಿಕೆ ಸೋರಿಕೆ ಜಾಲದಲ್ಲಿ ಭಾಗಿಯಾದ ಎಲ್ಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ರಾಜ್ಯೋತ್ಸವ ಸೇರಿದಂತೆ ವಿವಿಧ ಪ್ರಶಸ್ತಿಗಳನ್ನು ನೀಡುವ ಸಂದರ್ಭದಲ್ಲಿ ರಾಜಕೀಯ ಶಿಫಾರಸು ಅಥವಾ ಲಾಬಿಗಿಂತ ನೈಜ ಸಾಧಕರನ್ನು ಗುರುತಿಸಿ ಗೌರವಿಸುವ ಪರಂಪರೆ ಬೆಳೆಸಬೇಕು ಎಂದು ಹೇಳಿದರು.ಜಿಲ್ಲಾ ಕರವೇ ಅಧ್ಯಕ್ಷ ಮೋಹನ್, ತಾಲೂಕು ಅಧ್ಯಕ್ಷ ಕಿರಣ್ ಕುಮಾರ್, ನಗರ ಅಧ್ಯಕ್ಷ ಸಂತೋಷ್, ಮುಖಂಡರಾದ ತುಳಸಿದಾಸ್, ಉಮಾಶಂಕರ್, ಮಂಜುನಾಥ್, ರಘು ಹಾಗೂ ಇತರರು ಉಪಸ್ಥಿತರಿದ್ದರು.