ಬಡ ರೋಗಿಗಳು ಹಣಕೊಟ್ಟು ಡಯಾಲಿಸಿಸ್ ಮಾಡಿಸಿಕೊಳ್ಳಲಾಗದೇ ಮೃತಪಟ್ಟ ಘಟನೆಗಳು ಜರುಗಿವೆ. ₹೨ ಕೋಟಿ ವೆಚ್ಚದಲ್ಲಿ ಕೇಂದ್ರ ಪ್ರಾರಂಭಿಸಿದ್ದು, ರೋಗಿಗಳಿಗೆ ಉಚಿತವಾಗಿ ಸೇವೆ ದೊರೆಯಲಿದೆ
ಕುರುಗೋಡು: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಯಾಲಿಸಿಸ್ ಕೇಂದ್ರ ಪ್ರಾರಂಭಗೊಂಡಿದ್ದು, ತಾಲೂಕಿನ ಗ್ರಾಮೀಣ ಪ್ರದೇಶದ ರೋಗಿಗಳಿಗೆ ವರದಾನವಾಗಲಿದೆ ಎಂದು ಶಾಸಕ ಜೆ.ಎನ್. ಗಣೇಶ್ ಹೇಳಿದರು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬುಧವಾರ ಡಯಾಲಿಸಿಸ್ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.ವಾರದಲ್ಲಿ ಎರಡು ಬಾರಿ ಖಾಸಗಿ ಕೇಂದ್ರದಲ್ಲಿ ದೂರದ ಹೊಸಪೇಟೆ, ಬಳ್ಳಾರಿಗೆ ತೆರಳಿ ರಕ್ತ ಶುದ್ಧೀಕರಣ ಮಾಡಿಸುವ ಹಾಗೂ ಆರ್ಥಿಕ ಸಮಸ್ಯೆಯಿಂದ ಚಿಕಿತ್ಸೆ ಪಡೆಯದೇ ಡಯಾಲಿಸಿಸ್ ಮಾಡಿಸಿಕೊಳ್ಳಲು ಕನಿಷ್ಠ ₹೬ ಸಾವಿರ ಭರಿಸಬೇಕಾಗುತ್ತದೆ. ಬಡ ರೋಗಿಗಳು ಹಣಕೊಟ್ಟು ಡಯಾಲಿಸಿಸ್ ಮಾಡಿಸಿಕೊಳ್ಳಲಾಗದೇ ಮೃತಪಟ್ಟ ಘಟನೆಗಳು ಜರುಗಿವೆ. ₹೨ ಕೋಟಿ ವೆಚ್ಚದಲ್ಲಿ ಕೇಂದ್ರ ಪ್ರಾರಂಭಿಸಿದ್ದು, ರೋಗಿಗಳಿಗೆ ಉಚಿತವಾಗಿ ಸೇವೆ ದೊರೆಯಲಿದೆ ಎಂದರು.
ಮುಂದಿನ ಐದು ತಿಂಗಳಲ್ಲಿ ೧೦೦ ಹಾಸಿಗೆ ಆಸ್ಪತ್ರೆ ಪ್ರಾರಂಭಿಸಲಾಗುವುದು. ಕುರುಗೋಡು, ಕಂಪ್ಲಿ ತಾಲೂಕು ಆಸ್ಪತ್ರೆಗಳಿಗೆ ವೈದ್ಯಕೀಯ ಯಂತ್ರೋಪಕರಣ ಖರೀದಿಗೆ ಆಯ-ವ್ಯಯದಲ್ಲಿ ₹೪೪ ಕೋಟಿ ಮೀಸಲಿರಿಸಲಾಗಿದೆ. ಕುರುಗೋಡಿನ ಹಳೇ ಆಸ್ಪತ್ರೆ ಕಟ್ಟಡವನ್ನು ತಾಯಿ, ಮಕ್ಕಳ ಆಸ್ಪತ್ರೆಯಾಗಿ ಬದಲಾಯಿಸಲಾಗುವುದು ಎಂದರು.ತಾಲೂಕು ಆರೋಗ್ಯಾಧಿಕಾರಿ ಡಾ.ಮಂಜುನಾಥ ಜವಳಿ ಮಾತನಾಡಿ, ತಾಲೂಕಿನ ಕುರುಗೋಡು, ಕೋಳೂರು, ಸಿದ್ದಮ್ಮನಹಳ್ಳಿ, ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ೮೫೮ ಜನರು ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅಗತ್ಯವಿರುವ ರೋಗಿಗಳು ಇಲ್ಲಿ ಡಯಾಲಿಸಿಸ್ ಸೇವೆ ಪಡೆದುಕೊಳ್ಳಬಹುದು ಎಂದರು.
ಪುರಸಭೆ ಅಧ್ಯಕ್ಷ ಟಿ.ಶೇಖಣ್ಣ, ಉಪಾಧ್ಯಕ್ಷ ಚನ್ನಪಟ್ಟಣ, ಮುಖಂಡ ಬಂಗಿ ಮಲ್ಲಿಕಾರ್ಜುನ ಮತ್ತು ಪುರಸಭೆ ಸದಸ್ಯರು, ಆಸ್ಪತ್ರೆ ಸಿಬ್ಬಂದಿ ಅಶ್ವಿನಿ ಇದ್ದರು.ಕುರುಗೋಡು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜೆ.ಎನ್. ಗಣೇಶ್ ಡಯಾಲಿಸಿಸ್ ಕೇಂದ್ರ ಉದ್ಘಾಟಿಸಿದರು.