ಸಾಮಾಜಿಕ ಜವಾಬ್ದಾರಿಯ ಭಾಗವಾಗಿ (ಸಿಎಸ್‌ಆರ್) ಸಿಡ್ವಿನ್ ಔಟೋಟೆಕ್ ಎಂಜಿನಿಯರಿಂಗ್ ಸಂಸ್ಥೆಯು ಸವಣೂರು ಸರ್ಕಾರಿ ಆಸ್ಪತ್ರೆಗೆ ಅತ್ಯಾಧುನಿಕ ಡಯಾಲಿಸಿಸ್ ಯಂತ್ರವನ್ನು ಕೊಡುಗೆಯಾಗಿ ನೀಡಿದ್ದು, ಈ ಯಂತ್ರದ ವಿತರಣೆ ಕಾರ್ಯಕ್ರಮ ಇತ್ತೀಚೆಗೆ ಆಸ್ಪತ್ರೆ ಆವರಣದಲ್ಲಿ ನಡೆಯಿತು.
ಹಾವೇರಿ: ಸಾಮಾಜಿಕ ಜವಾಬ್ದಾರಿಯ ಭಾಗವಾಗಿ (ಸಿಎಸ್‌ಆರ್) ಸಿಡ್ವಿನ್ ಔಟೋಟೆಕ್ ಎಂಜಿನಿಯರಿಂಗ್ ಸಂಸ್ಥೆಯು ಸವಣೂರು ಸರ್ಕಾರಿ ಆಸ್ಪತ್ರೆಗೆ ಅತ್ಯಾಧುನಿಕ ಡಯಾಲಿಸಿಸ್ ಯಂತ್ರವನ್ನು ಕೊಡುಗೆಯಾಗಿ ನೀಡಿದ್ದು, ಈ ಯಂತ್ರದ ವಿತರಣೆ ಕಾರ್ಯಕ್ರಮ ಇತ್ತೀಚೆಗೆ ಆಸ್ಪತ್ರೆ ಆವರಣದಲ್ಲಿ ನಡೆಯಿತು.
ಸಿಡ್ವಿನ್ ಔಟೋಟೆಕ್ ಎಂಜಿನಿಯರಿಂಗ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪ್ರವೀಣ ಈಶ್ವರ ಪಾವಡಶೆಟ್ಟರ್ ಮಾತನಾಡಿ, ಈ ಡಯಾಲಿಸಿಸ್ ಯಂತ್ರದ ಕೊಡುಗೆಯಿಂದ ಸವಣೂರು ಹಾಗೂ ಸುತ್ತಮುತ್ತಲಿನ ಪ್ರದೇಶದ ಕಿಡ್ನಿ ಸಂಬಂಧಿತ ರೋಗಿಗಳಿಗೆ ಉತ್ತಮ ಚಿಕಿತ್ಸಾ ಸೌಲಭ್ಯ ದೊರಕಲಿದೆ. ಗ್ರಾಮೀಣ ಭಾಗದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವುದು ಸಿಡ್ವಿನ್ ಔಟೋಟೆಕ್ ಎಂಜಿನಿಯರಿಂಗ್ ಸಂಸ್ಥೆಯ ಪ್ರಮುಖ ಉದ್ದೇಶವಾಗಿದ್ದು, ಮುಂದಿನ ದಿನಗಳಲ್ಲಿಯೂ ಸಮಾಜಮುಖಿ ಕಾರ್ಯಗಳನ್ನು ಮುಂದುವರಿಸುವುದಾಗಿ ತಿಳಿಸಿದರು.ಡಯಾಲಿಸಿಸ್ ಯಂತ್ರವನ್ನು ಸವಣೂರು ಸರ್ಕಾರಿ ಆಸ್ಪತ್ರೆಯ ಸಹಾಯಕ ವೈದ್ಯಾಧಿಕಾರಿ ಎಸ್.ವೈ. ಹಿರೇಗೌಡರ ಸ್ವೀಕರಿಸಿದರು. ಬಳಿಕ ಅವರು ಸರ್ಕಾರಿ ಆಸ್ಪತ್ರೆಯ ಆಡಳಿತ ಮಂಡಳಿ ಪರವಾಗಿ ಸಿಡ್ವಿನ್ ಔಟೋಟೆಕ್ ಎಂಜಿನಿಯರಿಂಗ್ ಸಂಸ್ಥೆಗೆ ಕೃತಜ್ಞತೆ ಸಲ್ಲಿಸುತ್ತಾ, ಈ ಸಹಕಾರದಿಂದ ಸಾರ್ವಜನಿಕ ಆರೋಗ್ಯ ಸೇವೆಗೆ ಮಹತ್ವದ ಬೆಂಬಲ ದೊರಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ವೇಳೆ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದು, ಸಂಸ್ಥೆಯ ಈ ಸೇವಾ ಮನೋಭಾವವನ್ನು ಶ್ಲಾಘಿಸಿದರು. ಸಂಸ್ಥೆಯ ಹಣಕಾಸು ವ್ಯವಸ್ಥಾಪಕ ಮನು ಪ್ರಭಾಕರ್, ಸಿಎಸ್‌ಆರ್ ಸಮಿತಿ ಅಧ್ಯಕ್ಷೆ ರೇಣುಕಾ ಪಾಟೀಲ, ಸಿಎಸ್‌ಆರ್ ಸಮಿತಿ ಸದಸ್ಯರಾದ ನಾಗರಾಜು ಎಸ್., ಪವನ್ ಹೊಟ್ಟಿಗೌಡರ, ಮನೀಶ ನಾಯಕ್, ಪೂಜಾ ಪಾಟೀಲ, ಬಿಂದುಮಾಲಾ ಉಪಸ್ಥಿತರಿದ್ದರು.