ರವೀಂದ್ರ ಕಲಾಕ್ಷೇತ್ರ ವಜ್ರ ಮಹೋತ್ಸವ

| Published : Mar 27 2024, 02:05 AM IST / Updated: Mar 27 2024, 02:06 AM IST

ಸಾರಾಂಶ

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ವಜ್ರ ಮಹೋತ್ಸವ ಸಂಭ್ರಮ ಮಂಗಳವಾರ ನಡೆಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ವ್ಯವಸ್ಥೆಯ ವಿರುದ್ಧ ಹೋರಾಟಕ್ಕೆ ರಂಗಭೂಮಿ ವೇದಿಕೆಯಾಗಿದೆ. ನಾಟಕದಲ್ಲಿ ನೋವು, ನಲಿವಿನ ಎರಡು ಮುಖಗಳನ್ನು ಹಾಕಿರುತ್ತಾರೆ. ಅಂದರೆ ಜೀವನದಲ್ಲಿ ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು ಎಂಬುದು ಇದರ ಅರ್ಥ ಎಂದು ಹಿರಿಯ ನಾಟಕಕಾರ ಟಿ.ಎನ್‌.ಸೀತಾರಾಮ್‌ ಅಭಿಪ್ರಾಯಪಟ್ಟರು.

ಮಂಗಳವಾರ ನಾಟಕ ಬೆಂಗ್ಳೂರು ಸಂಸ್ಥೆ ಜೆ.ಸಿ.ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ನಾಟಕ ರಚನಾ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ, 16ನೇ ರಂಗ ಸಂಭ್ರಮ ಮತ್ತು ರವೀಂದ್ರ ಕಲಾಕ್ಷೇತ್ರ ವಜ್ರ ಮಹೋತ್ಸವ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರವೀಂದ್ರ ಕಲಾಕ್ಷೇತ್ರ ಅನೇಕರ ಬದುಕನ್ನು ಕಟ್ಟಿಕೊಟ್ಟಿದ್ದು ಮಾತ್ರವಲ್ಲ ಬದುಕು ಏನು ಎಂಬುದನ್ನು ತಿಳಿಸಿಕೊಟ್ಟಿದೆ. ನನಗೆ ಶಿವರಾಮ ಕಾರಂತ, ಪಿ.ಲಂಕೇಶ್‌, ಗಿರೀಶ್‌ ಕಾರ್ನಾಡ್‌ ಅವರಂತ ದೊಡ್ಡ ನಾಟಕಕಾರನ್ನು ಪರಿಚಯಿಸಿದ್ದು ಇದೇ ರವೀಂದ್ರ ಕಲಾಕ್ಷೇತ್ರ. ವಿದ್ಯಾರ್ಥಿಯಾಗಿರುವಾಗ ಈ ಕಲಾಕ್ಷೇತ್ರದ ವೇದಿಕೆಯಲ್ಲಿ ಅಭಿನಯಿಸಬೇಕೆಂಬ ಆಸೆಯಿತ್ತು. ವಾರ್ತಾ ಇಲಾಖೆಯವರು ಆಯೋಜಿಸಿದ್ದ ಶ್ರೀರಂಗರಾಯ ಮತ್ತು ಪೋಲಿ ಕಿಟ್ಟಿ ನಾಟಕದಲ್ಲಿ ನಾನು ಮೊದಲು ಅಭಿನಯಿಸಿದ್ದೆ. ಹೀಗೆ ಈ ಕಲಾಕ್ಷೇತ್ರವು ಯುವಪೀಳಿಗೆಗೆ ರಂಗಭೂಮಿ, ನಾಟಕಗಳ ಕುರಿತು ಆಸಕ್ತಿ ಮೂಡಿಸಿದ್ದಲ್ಲದೇ ಅನೇಕ ಹಿರಿ-ಕಿರಿ ರಂಗಕರ್ಮಿಗಳನ್ನು ಪರಿಚಯಿಸಿದೆ ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ 16ನೇ ರಂಗಸಂಭ್ರಮದ ಅಂಗವಾಗಿ ಆಯೋಜಿಸಿದ್ದ ರಾಜ್ಯಮಟ್ಟದ ನಾಟಕ ರಚನಾ ಸ್ಪರ್ಧೆಯಲ್ಲಿ ವಿಜೇತರಾದ 9 ಮಂದಿ ಯುವ ನಾಟಕರಾರರಿಗೆ ಬಹುಮಾನ ವಿತರಿಸಲಾಯಿತು.

ಸಮಾರಂಭದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ನಿಯೋಜಿತ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ, ಹಿರಿಯ ನಾಟಕಕಾರ ಡಾ.ರಾಜಪ್ಪ ದಳವಾಯಿ, ಲೇಖಕಿ ಸಂಧ್ಯಾರಾಣಿ, ಯುವ ನಾಟಕಕಾರ ಡಾ.ಬೇಲೂರು ರಘುನಂದನ ಉಪಸ್ಥಿತರಿದ್ದರು.