ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದ ‘ಯಲಹಂಕ ಏರ್‌ಫೋರ್ಸ್ ಸ್ಟೇಷನ್’ ದೇಶ ಸೇವೆಯಲ್ಲಿ 60 ವರ್ಷಗಳನ್ನು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಶನಿವಾರ ಆಕರ್ಷಕ ವೈಮಾನಿಕ ಪ್ರದರ್ಶನದೊಂದಿಗೆ ಸಂಭ್ರಮದ ‘ವಜ್ರ ಮಹೋತ್ಸವ’ ಆಚರಿಸಲಾಯಿತು.ಹೆಸರಾಂತ ಆಕಾಶಗಂಗಾ ಸ್ಕೈ ಡೈವಿಂಗ್ ತಂಡದಿಂದ ಪ್ಯಾರಾ ಜಂಪಿಂಗ್, ಐಎಎಫ್‌ನ ಸರಕು ಸಾಗಣೆ ಹೆಲಿಕಾಪ್ಟರ್ ಮತ್ತು ವಿಮಾನಗಳು, ಲಘು ಯುದ್ಧ ಹೆಲಿಕಾಪ್ಟರ್ (ಎಲ್‌ಸಿಎಚ್) ‘ಪ್ರಚಂಡ’ ತಂಡಗಳು ಆಕರ್ಷಕ ವೈಮಾನಿಕ ಪ್ರದರ್ಶನ ನೀಡಿದವು. ವಜ್ರ ಮಹೋತ್ಸವ ಸಂದರ್ಭದಲ್ಲಿ ಯಲಹಂಕ ಏರ್‌ಫೋರ್ಸ್ ಸ್ಟೇಷನ್‌ನಲ್ಲಿ ‘ಪುಲ್ ಮೋಷನ್ ಸಿಮ್ಯುಲೇಟರ್’ (ಎಫ್‌ಎಂಎಸ್) ಲೋಕಾರ್ಪಣೆ ಮಾಡಲಾಗಿದೆ. ಸೈಕ್ಲಿಂಗ್ ಮತ್ತು ಟ್ರೆಕ್ಕಿಂಗ್, ಏರ್ ಅಡ್ವೆಂಚರ್ ಕ್ಯಾಂಪ್‌ಗಳ ಆಯೋಜನೆ ಸೇರಿದಂತೆ ಅನೇಕ ಚಟುವಟಿಕೆಗಳನ್ನು ಕೈಗೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಐಎಎಫ್ ಟ್ರೈನಿಂಗ್ ಕಮಾಂಡ್‌ನ ಏರ್ ಮಾರ್ಷಲ್ ಎಸ್.ಕೆ.ಇಂದೋರಿಯ ಅವರು ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿದರು.ಎರಡು ವರ್ಷಗಳಿಗೊಮ್ಮೆ ನಡೆಯುವ ಪ್ರತಿಷ್ಠಿತ ಏರೋ ಇಂಡಿಯಾ ವೈಮಾನಿಕ ಪ್ರದರ್ಶನಕ್ಕೆ ಯಲಹಂಕ ಏರ್‌ಫೋರ್ಸ್ ಸ್ಟೇಷನ್ ಹೆಸರು ವಾಸಿಯಾಗಿದೆ. ಸರಕು ಸಾಗಣೆ ವಿಮಾನ ಮತ್ತು ಹೆಲಿಕಾಪ್ಟರ್‌ಗಳಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿ ಮತ್ತು ಸಿಬ್ಬಂದಿಗೆ ಇಲ್ಲಿ ತರಬೇತಿ ನೀಡಲಾಗುತ್ತದೆ. ದೇಶದಲ್ಲೇ ವಿಶೇಷ ಎನಿಸಿಕೊಂಡಿರುವ ಈ ಏರ್‌ಫೋರ್ಸ್ ಸ್ಟೇಷನ್‌ನ ಎಲ್ಲಾ ಯೋಧರು ಅಭಿನಂದನಾರ್ಹರು ಎಂದು ಎಸ್.ಕೆ.ಇಂದೋರಿಯ ಹೇಳಿದರು.
ಹೆಲಿಕಾಪ್ಟರ್‌ಗಳ ಕಾರ್ಯಾಚರಣೆ ಕುರಿತು ವಿಚಾರ ಸಂಕಿರಣ ಮತ್ತು ವಿಶೇಷ ಸಂದರ್ಭದ ಸ್ಮರಣಾರ್ಥ ಕವರ್ ಪೇಜ್ ಅನ್ನು ಇದೇ ವೇಳೆ ಬಿಡುಗಡೆಗೊಳಿಸಲಾಯಿತು.