ಒಂದೊಮ್ಮೆ ಪ್ರತಿರೋಧ ಒಡ್ಡುತ್ತಿದ್ದ ಕನ್ನಡ ಸಾಹಿತ್ಯ ಇಂದು ಮೌನವಾಗಿದೆ. ವ್ಯವಸ್ಥೆ ಮತ್ತು ಜನರ ನಡುವಿನ ಮಧ್ಯವರ್ತಿಯಾಗಿ ಇರಬೇಕಾದ ಸಾಹಿತ್ಯ, ಇಂದು ಅಸತ್ಯ, ಅಪ್ರಾಮಾಣಿಕವಾಗಿ ಬದಲಾಗಿದೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ ಎಂದು ಸಾಹಿತಿ ಡಾ. ವಿನಯಾ ಒಕ್ಕುಂದ ಹೇಳಿದರು.

ಧಾರವಾಡ:

ಕನ್ನಡದ ಗರ್ಭಕೋಶದ ಮೇಲೆ ಸರ್ವಾಧಿಕಾರದ ಬಾವುಟಗಳು ರಾರಾಜಿಸುತ್ತಿವೆ. ಇದರಿಂದ ಕನ್ನಡ ಸಾಹಿತ್ಯ ಬಿಕ್ಕಿಟ್ಟಿಗೆ ಸಿಲುಕಿದೆ. ನಮ್ಮನ್ನು ನಾವು ಮಾರಿಕೊಳ್ಳುವ ಸಂದಿಗ್ಧತೆ ಬಂದಿದೆ ಎಂದು ಸಾಹಿತಿ ಡಾ. ವಿನಯಾ ಒಕ್ಕುಂದ ವಿಷಾದಿಸಿದರು.

ಮಂಗಳವಾರ 18ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಭಾಷಣ ಮಾಡಿದ ಅವರು, ಒಂದೊಮ್ಮೆ ಪ್ರತಿರೋಧ ಒಡ್ಡುತ್ತಿದ್ದ ಕನ್ನಡ ಸಾಹಿತ್ಯ ಇಂದು ಮೌನವಾಗಿದೆ. ವ್ಯವಸ್ಥೆ ಮತ್ತು ಜನರ ನಡುವಿನ ಮಧ್ಯವರ್ತಿಯಾಗಿ ಇರಬೇಕಾದ ಸಾಹಿತ್ಯ, ಇಂದು ಅಸತ್ಯ, ಅಪ್ರಾಮಾಣಿಕವಾಗಿ ಬದಲಾಗಿದೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ ಎಂದು ಎಚ್ಚರಿಸಿದರು.

ಇಂದು ಬರಹವು ಬಹಳಷ್ಟು ಸುಲಭವಾಗಿದೆ. ಆದರೆ, ಅದು ಅವಕಾಶವಾದಿಯಾಗಿಯೂ ಮತ್ತು ಅಪಾಯಕಾರಿಯಾಗಿಯೂ ಎರಡು ರೀತಿಯಲ್ಲಿ ಬದಲಾಗಿದೆ. ಇದರಿಂದ ಸಾಹಿತ್ಯದ ಗೌರವ ಕಡಿಮೆಯಾಗಿದೆ. ಈ ಬಗ್ಗೆ ಹಿರಿಯ ಸಾಹಿತಿಗಳು ಚಿಂತಿಸಬೇಕಿದೆ ಎಂದರು.

ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ. ಹೇಮಾ ಪಟ್ಟಣಶೆಟ್ಟಿ ಮಾತನಾಡಿ, ಕನ್ನಡ ಸಾಹಿತ್ಯವು ಅಕ್ಷರಗಳ ವಿಲಾಸವಾಗಬಾರದು, ಅದು ಸಮಾಜದ ಕಟ್ಟಕಡೆಯ ಮನುಷ್ಯನ ದನಿ ಆಗಬೇಕು. ಮನುಷ್ಯತ್ವ ಎಚ್ಚರಿಸುವ ಮತ್ತು ಪ್ರೀತಿಯನ್ನು ಬಿತ್ತುವ ಕನ್ನಡಿಯಾಗಲಿ ಎಂದರು.

ಜಾಗತೀಕರಣದ ಅಬ್ಬರದಲ್ಲಿ ಕನ್ನಡ ಭಾಷೆ ಸೊರಗಬಾರದು. ತಂತ್ರಜ್ಞಾನದ ಜತೆಗೆ ಕನ್ನಡವನ್ನು ಬೆಸೆಯಬೇಕು. ಕನ್ನಡಿಗರು ಕೀಳರಿಮೆ ಬಿಟ್ಟು ಹೆಮ್ಮೆಯಿಂದ ಕನ್ನಡ ಮಾತನಾಡಬೇಕು. ಶಿಕ್ಷಣದಲ್ಲಿ ಕನ್ನಡಕ್ಕೆ ಪ್ರಥಮ ಸ್ಥಾನ ಸಿಗಲೇಬೇಕು ಎಂದು ಪ್ರತಿಪಾದಿಸಿದರು.

ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಅಡವೀಶ ಇಟಗಿ ಮಾತನಾಡಿದರು. ನಾಟಕಕಾರ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ, ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಡಾ. ವೀಣಾ ಬಿರಾದಾರ, ವಕೀಲರಾದ ಶರಣು ಅಂಗಡಿ, ಸವಿತಾ ಅಮರಶೆಟ್ಟಿ, ಡಾ. ಎಸ್.ಎಸ್. ದೊಡಮನಿ, ಪ್ರಮೀಳಾ ಜಕ್ಕಣ್ಣವರ ಇದ್ದರು.

ಡಾ. ವಿನಯಾ ಭಾಷಣಕ್ಕೆ ಪ್ರತಿರೋಧ

ಡಾ. ವಿನಯಾ ಒಕ್ಕುಂದ ಸಮಾರೋಪ ಭಾಷಣದಲ್ಲಿ ನೀಡಿದ ಕೆಲವು ಪ್ರಸ್ತಾಪಗಳಿಗೆ ಸಭಿಕರ ಆಕ್ರೋಶಕ್ಕೆ ಕಾರಣವಾಯಿತು. ನುಗ್ಗೆಕೇರಿ ಹನುಮಂತನ ದೇವಸ್ಥಾನದ ಮುಂದೆ ಕಲ್ಲಂಗಡಿ ಮಾರುತ್ತಿದ್ದ ಮುಸ್ಲಿಂ ವ್ಯಕ್ತಿಯ ನಷ್ಟ ಮತ್ತು ಅಲ್ಲಿನ ಘಟನೆ ಉಲ್ಲೇಖಿಸಿದರು. ಈ ವಿಷಯ ಒಂದು ವರ್ಗದ ಸಾಹಿತ್ಯಾಸಕ್ತರನ್ನು ಕೆರಳಿಸಿತು. ಕಲ್ಲಂಗಡಿ ಮಾರುವ ವ್ಯಕ್ತಿಯ ನೋವು ನಿಮಗೆ ಕಾಣಿಸಿತು, ಹುಬ್ಬಳ್ಳಿಯ ಮಾನ್ಯ ಪಾಟೀಲ ಘಟನೆ ಕಾಣಿಸಲಿಲ್ಲವೇ? ಎಂದು ರಾಜೇಂದ್ರಕುಮಾರ ಪ್ರಶ್ನಿಸಿದರು. ಅಲ್ಲದೇ, ಇದು ಸರ್ಕಾರಿ ಕಾರ್ಯಕ್ರಮ ಅಲ್ಲ, ಸಾಹಿತ್ಯ ಸಮ್ಮೇಳನ. ಸಾಹಿತ್ಯದ ವೇದಿಕೆಯಲ್ಲಿ ಕೇವಲ ಒಂದು ಸಮುದಾಯದ ಓಲೈಕೆಯು ಏಕೆ? ಎಂದು ಪ್ರಶ್ನಿಸಲಾಯಿತು. ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯಗಳಿಗೆ ಗೌರವವಿರಬೇಕು. ನೀವು ನನ್ನ ಮಾತನ್ನು ವಿರೋಧಿಸುವ ಹಕ್ಕನ್ನು ಹೊಂದಿದ್ದೀರಿ, ಹಾಗೆಯೇ ಸಮಾಜದ ಕಹಿ ಸತ್ಯಗಳನ್ನು ವೇದಿಕೆಯ ಮೇಲೆ ಹೇಳುವ ಹಕ್ಕು ನನಗೂ ಇದೆ ಎಂದು ತಮ್ಮ ನಿಲುವನ್ನು ಒಕ್ಕುಂದ ಗಟ್ಟಿಯಾಗಿ ಪ್ರತಿಪಾದಿಸಿದರು.

ಸಮ್ಮೇಳನದಲ್ಲಿ ಮೂರು ನಿರ್ಣಯಗಳು!

1. ಕರ್ನಾಟಕ ಸರ್ಕಾರ ಕೆಪಿಎಸ್‌ಇ ಶಾಲೆ ಹಾಗೂ ಮ್ಯಾಗ್ನೆಟ್ ಶಾಲಾ ಯೋಜನೆ ಕೈಬಿಡುವ ನಿರ್ಣಯ ಮಂಡಿಸಬೇಕು.

2. ಸರೋಜಿನಿ ಮಹಿಷಿ ವರದಿ ಯಥಾವತ್ತಾಗಿ ಅನುಷ್ಠಾನಗೊಳಿಸುವುದು.

3. ಕನ್ನಡ ಮತ್ತು ಸಂಸ್ಕೃತಿ ವರ್ಧನೆಗೆ ಮುಕ್ತ ಅನುದಾನ ನೀಡುವ ನಿರ್ಣಯ.