ಮುರುಘಾಶ್ರೀ ಸಾಕ್ಷಿ ನಾಶ ಯತ್ನಕ್ಕೆ ಪ್ರಯತ್ನಿಸಿದರಾ?

| Published : May 30 2024, 12:51 AM IST

ಸಾರಾಂಶ

ಚಿಕ್ಕಪ್ಪನ ವಿರುದ್ಧ ಸಂತ್ರಸ್ತೆ ದೂರು । ಶ್ರೀಗಳ ವಿರುದ್ಧ ಸಾಕ್ಷ್ಯ ನುಡಿಯದಂತೆ ಒತ್ತಡ । ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲು

ಕನ್ನಡಪ್ರಭ ವಾರ್ತೆ, ಚಿತ್ರದುರ್ಗಫೋಕ್ಸೋ ಪ್ರಕರಣದಲ್ಲಿ ಬಂಧಿತರಾಗಿ ಜೈಲು ವಾಸದಲ್ಲಿರುವ ಮುರುಘಾಶ್ರೀ ಸಾಕ್ಷಿ ನಾಶಕ್ಕೆ ಯತ್ನಿಸಿದರಾ ? ಪ್ರೋಕ್ಸೋ ಪ್ರಕರಣದ ಸಂತ್ರಸ್ತೆ ಚಿತ್ರದುರ್ಗದ ಮಹಿಳಾ ಠಾಣೆಯಲ್ಲಿ ಸಲ್ಲಿಸಲಾದ ದೂರು ಇಂತಹದ್ದೊಂದು ಅನುಮಾನ ಮೂಡಲು ಕಾರಣವಾಗಿದೆ. ಮುರುಘಾಶ್ರೀ ಬೆಂಬಲಿಗರು ಸಂತ್ರಸ್ತೆಯ ಚಿಕ್ಕಪ್ಪನಿಗೆ ಆಮಿಷವೊಡ್ಡಿ ಸಾಕ್ಷ್ಯ ನುಡಿಯದಂತೆ ಹಾಗೂ ನೀಡಿದ ದೂರು ವಾಪಸ್ಸು ಪಡೆಯುವಂತೆ ಸಂತ್ರಸ್ತೆಯ ಮೇಲೆ ಪ್ರಭಾವ ಬೀರಿದರಾ ಎಂಬ ಮತ್ತೊಂದು ಪ್ರಶ್ನೆ ಎದುರಾಗಿದೆ.

ಸುಪ್ರಿಂ ಕೋರ್ಟ್ ನಾಲ್ಕು ತಿಂಗಳ ಒಳಗಾಗಿ ಮುರುಘಾಶ್ರೀ ಪೋಕ್ಸೋ ಪ್ರಕರಣದ ಕುರಿತು ವಿಚಾರಣೆ ಮುಕ್ತಾಯಗೊಳಿಸುವಂತೆ ನಿರ್ದೇಶನ ನೀಡಿರುವುದರ ನಡುವೆಯೇ, ಸಂತ್ರಸ್ತೆ ತನ್ನ ಚಿಕ್ಕಪ್ಪನ ವಿರುದ್ಧ ದೂರು ದಾಖಲು ಮಾಡಿರುವುದು ಕುತೂಹಲ ಮೂಡಿಸಿದೆ.

ಮೇ 24ರಂದು ಚಿತ್ರದುರ್ಗ ತೊರೆದು ಮೈಸೂರಿನ ಒಡನಾಡಿ ಸಂಸ್ಥೆಗೆ ತೆರಳಿದ್ದ ಸಂತ್ರಸ್ತೆ. ಅಲ್ಲಿ ತಮ್ಮ ಚಿಕ್ಕಪ್ಪ ನೀಡುತ್ತಿರುವ ಕಿರುಕುಳದ ಬಗ್ಗೆ ಸುದೀರ್ಘವಾಗಿ ತಿಳಿಸಿದ್ದಳು. ನಂತರ ಒಡನಾಡಿ ಸಂಸ್ಥೆಯವರು ಅಲ್ಲಿನ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಸಂತ್ರಸ್ತೆಯನ್ನು ಕರೆದೊಯ್ದು ದೂರು ದಾಖಲಿಸಿ, ನಂತರ ಚಿತ್ರದುರ್ಗದ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರು ಪಡಿಸಿದ್ದರು.ಮಂಗಳವಾರ ಸಂಜೆ ಮಕ್ಕಳ ಕಲ್ಯಾಣ ಸಮಿತಿ ಸಂತ್ರಸ್ತೆಯ ಕೌನ್ಸಿಲಿಂಗ್ ನಡೆಸಿದ ನಂತರ ಸಂತ್ರಸ್ತೆಗೆ ಚಿಕ್ಕಪ್ಪ ಕಿರುಕುಳ ನೀಡಿರುವುದ ಮನಗಂಡು ನೇರವಾಗಿ ಮಹಿಳಾ ಠಾಣೆಗೆ ದೂರು ನೀಡಲಾಗಿದೆ. ಚಿಕ್ಕಪ್ಪನಿಂದ‌ಲೇ ಹಲ್ಲೆಗೆ ಒಳಗಾಗಿದ್ದು ದೂರು ವಾಪಸ್ಸು ಪಡೆಯುವಂತೆ ಹಾಗೂ ಮುರುಘಾಶ್ರೀ ವಿರುದ್ಧ ಸಾಕ್ಷ್ಯ ನುಡಿಯದಂತೆ ಚಿಕ್ಕಪ್ಪ ಒತ್ತಡ ಹಾಕುತ್ತಿದ್ದಾನೆ ಎಂದು ಸಂತ್ರಸ್ತೆ ಮಕ್ಕಳ ಕಲ್ಯಾಣ ಸಮಿತಿ ಮುಂಭಾಗ ನಿವೇದನೆ ತೋಡಿಕೊಂಡಿದ್ದಳು. ನಂತರ ಈ ಕುರಿತು ಮಹಿಳಾ ಠಾಣೆಯಲ್ಲಿ ಕಲಂ 323, 324, 504, 506, 75 ಜುವೆನೈಲ್‌ ಜಸ್ಟೀಸ್ ಆಕ್ಟ್ ನಡಿ ಕೇಸ್ ದಾಖಲಾಗಿದೆ. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಂಜುಳಾ ಸಂತ್ರಸ್ತೆ ಪರವಾಗಿ ದೂರು ದಾಖಲು ಮಾಡಿದ್ದಾರೆ.

ದೂರು ದಾಖಲಾದ ನಂತರ ಸಂತ್ರಸ್ತೆ ಚಿತ್ರದುರ್ಗದಲ್ಲಿರಲು ನಿರಾಕರಿಸಿದ್ದು, ಅಂತಿಮವಾಗಿ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಸುಪರ್ದಿಯಲ್ಲಿಯೇ ಮೈಸೂರಿನ ಒಡನಾಡಿ ಸಂಸ್ಥೆಯವರು ಕರೆದೊಯ್ದಿದ್ದಾರೆ. ಒಡನಾಡಿಯಲ್ಲಿ ನಾನು ಯಾವುದೇ ಭೀತಿಯಿಲ್ಲದೇ, ಸಂತೋಷದಿಂದ ಇರುವುದಾಗಿ ಸಂತ್ರಸ್ತೆ ಹೇಳಿಕೊಂಡಿದ್ದು, ಮಕ್ಕಳ ಕಲ್ಯಾಣ ಸಮಿತಿ ಆಕೆಯನ್ನು ಒಡನಾಡಿ ಸಂಸ್ಥೆಯಲ್ಲಿರಲು ಅವಕಾಶ ಮಾಡಿಕೊಟ್ಟಿದೆ.