ರಾಣಿಬೆನ್ನೂರಿಗೆ ಸಿಕ್ಕಿತೇ ಉಪವಿಭಾಗಾಧಿಕಾರಿ ಕಚೇರಿ?

| Published : Mar 06 2025, 12:31 AM IST

ಸಾರಾಂಶ

ಬೃಹದಾಕಾರವಾಗಿ ಬೆಳೆಯುತ್ತಿರುವ ರಾಣಿಬೆನ್ನೂರು ನಗರದ ಜನಸಂಖ್ಯೆ ಹಾಗೂ ವಾಹನಗಳ ದಟ್ಟಣೆ ನಿಯಂತ್ರಣಕ್ಕಾಗಿ ನಗರದಲ್ಲಿ ವರ್ತುಲ ರಸ್ತೆ ನಿರ್ಮಿಸಬೇಕಾಗಿದೆ.

ಬಸವರಾಜ ಸರೂರ

ರಾಣಿಬೆನ್ನೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಲಿರುವ 2025- 26ನೇ ಸಾಲಿನ ಬಜೆಟ್‌ನಲ್ಲಿ ಜಿಲ್ಲೆಯ ವಾಣಿಜ್ಯ ನಗರಿ ರಾಣಿಬೆನ್ನೂರು ಹಾಗೂ ತಾಲೂಕಿನ ಜನತೆ ಹಲವು ನಿರೀಕ್ಷೆ ಇಟ್ಟುಕೊಂಡಿದ್ದಾರೆ.ಜಿಲ್ಲೆಯಲ್ಲಿಯೇ ಅತಿ ದೊಡ್ಡದು ಹಾಗೂ ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂದು ಹೆಸರಾಗಿರುವ ರಾಣಿಬೆನ್ನೂರು ನಗರದ ಜನಸಂಖ್ಯೆಗೆ ಅನುಗುಣವಾಗಿ ಒಂದು ಸುಸ್ಸಜ್ಜಿತವಾದ ಬಸ್‌ ನಿಲ್ದಾಣದ ಅಗತ್ಯವಿದೆ. ಈಗಿರುವ ಬಸ್‌ ನಿಲ್ದಾಣವು ನಗರದ ಮಧ್ಯವರ್ತಿ ಸ್ಥಳದಲ್ಲಿದ್ದರೂ ತುಂಬಾ ಚಿಕ್ಕದಾಗಿದೆ. ಬಸ್ಸುಗಳು ಸರಾಗವಾಗಿ ಬಸ್‌ ನಿಲ್ದಾಣದ ಒಳಗೆ ಹೋಗಿ ಬರಲು ಪ್ರಯಾಸ ಪಡುವಂತಹ ಸ್ಥಿತಿಯಿದೆ. ಇದರ ಸಮೀಪದಲ್ಲಿಯೇ ಟ್ರಾಫಿಕ್ ಸಿಗ್ನಲ್ ಇರುವುದರಿಂದ ಅನೇಕ ಬಾರಿ ಈ ಮಾರ್ಗವಾಗಿ ವಾಹನಗಳು ಸಂಚರಿಸಲು ತೊಂದರೆಯಾಗುತ್ತಿದೆ. ಆದ್ದರಿಂದ ಬೇರೊಂದು ವಿಶಾಲವಾದ ಜಾಗೆಯಲ್ಲಿ ಬಸ್‌ನಿಲ್ದಾಣ ನಿರ್ಮಾಣವಾಗಬೇಕು.

ಉಪ ವಿಭಾಗಾಧಿಕಾರಿ ಕಚೇರಿ: ರಾಣಿಬೆನ್ನೂರು ತಾಲೂಕು ಸದ್ಯ ಹಾವೇರಿ ಉಪವಿಭಾಗದಲ್ಲಿದೆ. ರೈತರ ಜಮೀನುಗಳ ವ್ಯಾಜ್ಯಗಳಿಗೆ ಸಂಬಂಧಿಸಿದ ಮೇಲ್ಮನವಿ ಪ್ರಕರಣ, ಭೂಸ್ವಾಧಿನ ಪ್ರಕರಣಗಳು, ಇನಾಮು ಜಮೀನಿಗೆ ಸಂಬಂಧಿಸಿದ ಪ್ರಕರಣಗಳು, ಭೂನ್ಯಾಯ ಮಂಡಳಿ ವ್ಯಾಜ್ಯಗಳು ಮುಂತಾದವುಗಳಿಗೆ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಪರಿಹಾರ ದೊರಕುತ್ತದೆ. ಹೀಗಾಗಿ ಇಲ್ಲಿನ ಜನತೆ ಅಲ್ಲಿಗೆ ಅಲೆಯಬೇಕಾಗುತ್ತಿದೆ. ಇದನ್ನು ತಪ್ಪಿಸಲು ಬ್ಯಾಡಗಿ, ಹಿರೇಕೆರೂರು, ರಟ್ಟೀಹಳ್ಳಿ ತಾಲೂಕುಗಳನ್ನು ಒಳಗೊಂಡು ನಗರದಲ್ಲಿಯೇ ಉಪವಿಭಾಗಾಧಿಕಾರಿ ಕಚೇರಿ ಪ್ರಾರಂಭಿಸುವುದು ಸೂಕ್ತವಾಗುತ್ತದೆ. ಇದರಿಂದ ತಾಲೂಕಿನ ಜನರಿಗೆ ಸಮಯ ಹಾಗೂ ಹಣದ ಉಳಿತಾಯವಾಗುತ್ತದೆ. ಕಚೇರಿ ಪ್ರಾರಂಭಿಸುವ ನಿಟ್ಟಿನಲ್ಲಿ ಈಗಾಗಲೇ ಸರ್ಕಾರದ ಮಟ್ಟದಲ್ಲಿ ಪ್ರಸ್ತಾವನೆ ಕೂಡ ಸಲ್ಲಿಸಲಾಗಿದೆ.ವರ್ತುಲ ರಸ್ತೆ: ಬೃಹದಾಕಾರವಾಗಿ ಬೆಳೆಯುತ್ತಿರುವ ನಗರದ ಜನಸಂಖ್ಯೆ ಹಾಗೂ ವಾಹನಗಳ ದಟ್ಟಣೆ ನಿಯಂತ್ರಣಕ್ಕಾಗಿ ನಗರದಲ್ಲಿ ವರ್ತುಲ ರಸ್ತೆ ನಿರ್ಮಿಸಬೇಕಾಗಿದೆ. ಈ ನಿಟ್ಟಿನಲ್ಲಿ ನಗರ ಯೋಜನಾ ಪ್ರಾಧಿಕಾರದ ಕಚೇರಿಯ ಸಹಯೋಗದೊಂದಿಗೆ ನೀಲನಕ್ಷೆ ರೂಪಿಸಿ ಜಾರಿಗೆ ತರಬೇಕಾಗಿದೆ.ಪೊಲೀಸ್ ಠಾಣೆ: ಜಿಲ್ಲೆಯಲ್ಲಿಯೇ ಅತಿ ದೊಡ್ಡ ನಗರವಾಗಿದ್ದರೂ ಇಲ್ಲಿಗಿಂತ ಹಾವೇರಿ ನಗರ ಪೋಲಿಸ್ ಠಾಣೆಯಲ್ಲಿ ಹೆಚ್ಚಿನ ಸಂಖ್ಯೆಯ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ನಗರವು ಹಾವೇರಿ ನಗರಕ್ಕಿಂತ ಎರಡು ಪಟ್ಟು ದೊಡ್ಡದಾಗಿದೆ. ಇಲ್ಲಿನ ನ್ಯಾಯಾಲಯ ಸಂಕಿರ್ಣದಲ್ಲಿ ಐದು ಕೋರ್ಟ್ ಹಾಲ್‌ಗಳಿವೆ. ಸಮನ್ಸ್ ಮತ್ತು ವಾರಂಟ್ ಜಾರಿಗೆ ಸಿಬ್ಬಂದಿ ಬೇಕಾಗುತ್ತದೆ. ಸಿಬ್ಬಂದಿ ಕೊರತೆಯಿಂದಾಗಿ ಇಲ್ಲಿಯ ಶಹರ ಪೋಲಿಸ್ ಠಾಣೆಯ ಸಿಬ್ಬಂದಿ ಒತ್ತಡದಲ್ಲಿ ಕಾರ್ಯನಿರ್ವಹಿಸಬೇಕಿದೆ. ಇದಲ್ಲದೆ ಬೆಳೆಯುತ್ತಿರುವ ನಗರದ ಜನತೆ ಶಾಂತಿ ಭದ್ರತೆ ಒದಗಿಸುವ ಸಲುವಾಗಿಯೂ ಇನ್ನೊಂದು ಠಾಣೆಯ ಅವಶ್ಯವಿದೆ ಎಂಬುದು ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿದೆ. ಮೆಕ್ಕೆಜೋಳ ಸಂಸ್ಕರಣಾ ಕೇಂದ್ರ: ತಾಲೂಕಿನ ರೈತರು ಇತ್ತೀಚಿನ ವರ್ಷಗಳಲ್ಲಿ ಅಧಿಕ ಪ್ರಮಾಣದಲ್ಲಿ ಮೆಕ್ಕೆಜೋಳ ಬೆಳೆಯುತ್ತಿದ್ದಾರೆ. ಅದಕ್ಕಾಗಿ ಸ್ಥಳೀಯವಾಗಿಯೇ ಮೆಕ್ಕೆಜೋಳ ಸಂಸ್ಕರಣಾ ಕೇಂದ್ರ ಸ್ಥಾಪಿಸುವುದು ಅತ್ಯಗತ್ಯವಾಗಿದೆ. ಇದರ ಜತೆಯಲ್ಲಿ ಮೆಕ್ಕೆಜೋಳ ಸಂಗ್ರಹಿಸಿಡಲು ಕೋಲ್ಡ್ ಸ್ಟೋರೆಜ್ ನಿರ್ಮಿಸಬೇಕು. ಸರ್ಕಾರಿ ಆಸ್ಪತ್ರೆ ಮೇಲ್ದರ್ಜೆಗೆ: ರಾಣಿಬೆನ್ನೂರು ಜಿಲ್ಲೆಯಲ್ಲಿಯೇ ಅತಿ ದೊಡ್ಡ ನಗರವಾಗಿದ್ದು, ಸ್ಥಳೀಯ ತಾಲೂಕು ಮಾತ್ರವಲ್ಲದೆ ಅಕ್ಕಪಕ್ಕದ ತಾಲೂಕುಗಳಿಂದಲೂ ಪ್ರತಿದಿನ ಸಾಕಷ್ಟು ರೋಗಿಗಳು ಸ್ಥಳೀಯ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುತ್ತಾರೆ. ನಗರದ ಹಲಗೇರಿ ರಸ್ತೆಯಲ್ಲಿರುವ ಸಾರ್ವಜನಿಕ ಆಸ್ಪತ್ರೆಯಲ್ಲಿ ಸದ್ಯ 100 ಹಾಸಿಗೆಗಳ ಸಾಮರ್ಥ್ಯ ಹೊಂದಿದ್ದು, ರೈಲ್ವೆ ಸ್ಟೇಷನ್ ರಸ್ತೆಯಲ್ಲಿರುವ ಮಹಿಳೆಯರು ಮತ್ತು ಮಕ್ಕಳ ಆಸ್ಪತ್ರೆಯು 50 ಹಾಸಿಗೆಗಳ ಸಾಮರ್ಥ್ಯ ಹೊಂದಿದೆ.

ಸಾರ್ವಜನಿಕ ಆಸ್ಪತ್ರೆಯನ್ನು 200 ಹಾಸಿಗೆಗಳ ಸಾಮರ್ಥ್ಯಕ್ಕೆ ಏರಿಸಬೇಕು. ಇದರಿಂದ ಮತ್ತಷ್ಟು ತಜ್ಞ ವೈದ್ಯರು ಲಭಿಸುವುದರಿಂದ ರೋಗಿಗಳಿಗೆ ಉತ್ತಮ ಚಿಕಿತ್ಸೆ ದೊರಕಲಿದೆ. ಇದರೊಂದಿಗೆ ಸಿಟಿ ಸ್ಕ್ಯಾನ್ ಸೌಲಭ್ಯವನ್ನು ಕಲ್ಪಿಸಬೇಕಾಗಿದೆ.ಹೆಚ್ಚಿನ ಅನುದಾನ ನಿರೀಕ್ಷೆ: ರಾಣಿಬೆನ್ನೂರು ನಗರದಲ್ಲಿ ಜನಸಂಖ್ಯೆ ಹೆಚ್ಚುತ್ತಿದ್ದು, ವಾಹನಗಳ ದಟ್ಟಣೆ ನಿಯಂತ್ರಣಕ್ಕಾಗಿ ರಿಂಗ್‌ ರೋಡ್ ನಿರ್ಮಾಣಕ್ಕೆ ಬೇಡಿಕೆ ಇದೆ. ಜತೆಗೆ ಪ್ರವಾಸೋದ್ಯಮ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಬೆಟ್ಟದ ಮಲ್ಲಯ್ಯ ಗುಡ್ಡ ಅಭಿವೃದ್ಧಿ, ರಾಣಿಬೆನ್ನೂರ ನಗರದ ದೊಡ್ಡಕೆರೆ ಅಭಿವೃದ್ಧಿಗೆ ಅನುದಾನ ನೀಡುವಂತೆ ಮನವಿ ಮಾಡಲಾಗಿದೆ. ಅಲ್ಲದೇ ತುಂಗಾ ಮೇಲ್ದಂಡೆ ಯೋಜನೆಯ ಕಾಲುವೆಗಳು ಅಲ್ಲಲ್ಲಿ ಒಡೆದು ಹಾಳಾಗಿದ್ದು, ದುರಸ್ತಿಗೆ ಬೇಡಿಕೆ ಸಲ್ಲಿಸಲಾಗಿದೆ. ಜತೆಗೆ ನಗರದಲ್ಲಿ ನೂತನ ಬಸ್ ನಿಲ್ದಾಣ ನಿರ್ಮಾಣಕ್ಕೂ ಅನುದಾನ ನೀಡುವಂತೆ ಮುಖ್ಯಮಂತ್ರಿಗಳಿಗೆ ಕೋರಲಾಗಿದ್ದು, ಬಜೆಟ್‌ನಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವ ವಿಶ್ವಾಸವಿದೆ ಎಂದು ರಾಣಿಬೆನ್ನೂರು ಕ್ಷೇತ್ರದ ಶಾಸಕ ಪ್ರಕಾಶ ಕೋಳಿವಾಡ ತಿಳಿಸಿದರು.