ಕಲಬುರಗಿ ಕಲ್ಯಾಣಕ್ಕಾಗಿ ಸಚಿವ ಸಂಪುಟ ಸಭೆ ಮಾಡಿದರಾ?: ನಾರಾ ಪ್ರತಾಪ ರೆಡ್ಡಿ

| Published : Sep 25 2024, 12:51 AM IST

ಕಲಬುರಗಿ ಕಲ್ಯಾಣಕ್ಕಾಗಿ ಸಚಿವ ಸಂಪುಟ ಸಭೆ ಮಾಡಿದರಾ?: ನಾರಾ ಪ್ರತಾಪ ರೆಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬುಡಾ ಮಾಜಿ ಅಧ್ಯಕ್ಷ ನಾರಾ ಪ್ರತಾಪ ರೆಡ್ಡಿ, ಸಚಿವ ಸಂಪುಟ ಸಭೆಯಿಂದ ಕಲಬುರಗಿ, ಬೀದರ್ ಹಾಗೂ ಯಾದಗಿರಿ ಜಿಲ್ಲೆಗಳಿಗೆ ಮಾತ್ರ ಅನುಕೂಲವಾಯಿತೇ ವಿನಾ, ಉಳಿದ ಜಿಲ್ಲೆಗಳನ್ನು ಸಂಪೂರ್ಣ ಕಡೆಗಣಿಸಲಾಗಿದೆ ಎಂದು ಆರೋಪಿಸಿದರು.

ಬಳ್ಳಾರಿ: ಕಲಬುರಗಿಯಲ್ಲಿ ಈಚೆಗೆ ಜರುಗಿದ ಸಚಿವ ಸಂಪುಟ ಸಭೆಯಲ್ಲಿ ನೀಡಿದ ಕಲ್ಯಾಣ ಕರ್ನಾಟಕ ಅಭಿವೃದ್ಧಿಯ ಅನುದಾನ ಭಾಗಶಃ ಕಲಬುರಗಿ, ಬೀದರ್ ಹಾಗೂ ಯಾದಗಿರಿ ಜಿಲ್ಲೆಗಳ ಪಾಲಾಗಿದೆ. ಬಳ್ಳಾರಿ ಸೇರಿದಂತೆ ಉಳಿದ ಎಲ್ಲ ಜಿಲ್ಲೆಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಬುಡಾ ಮಾಜಿ ಅಧ್ಯಕ್ಷ ನಾರಾ ಪ್ರತಾಪ ರೆಡ್ಡಿ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬುರಗಿಯಲ್ಲಿ ಸಚಿವ ಸಂಪುಟದ ವಿಶೇಷ ಸಭೆ ನಡೆಯುವುದರಿಂದ ಬಳ್ಳಾರಿ ಜಿಲ್ಲೆ ಸೇರಿದಂತೆ ಈ ಭಾಗದ ಜಿಲ್ಲೆಗಳಿಗೆ ಅನುಕೂಲವಾಗಲಿದೆ. ಬಹುವರ್ಷಗಳ ಬೇಡಿಕೆಯ ಅನೇಕ ಅಭಿವೃದ್ಧಿ ಯೋಜನೆಗಳಿಗೆ ಹಣ ದೊರೆಯಲಿದೆ ಎಂಬ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆದರೆ, ಸಚಿವ ಸಂಪುಟ ಸಭೆಯಿಂದ ಕಲಬುರಗಿ, ಬೀದರ್ ಹಾಗೂ ಯಾದಗಿರಿ ಜಿಲ್ಲೆಗಳಿಗೆ ಮಾತ್ರ ಅನುಕೂಲವಾಯಿತೇ ವಿನಾ, ಉಳಿದ ಜಿಲ್ಲೆಗಳನ್ನು ಸಂಪೂರ್ಣ ಕಡೆಗಣಿಸಲಾಗಿದೆ. ಶೇ. 60ರಷ್ಟು ಅನುದಾನ ಕಲಬುರಗಿ ಜಿಲ್ಲೆಗೆಂದೇ ನೀಡಿದ್ದು, ಸಚಿವ ಸಂಪುಟದ ಮುಖ್ಯ ಉದ್ದೇಶವೇ ವಿಮುಖವಾಗಿದೆ. ಬರೀ ಕಲಬುರಗಿ ಜಿಲ್ಲೆಯನ್ನು ಉದ್ಧಾರ ಮಾಡಲು ಸಚಿವ ಸಂಪುಟ ವಿಶೇಷ ಸಭೆ ಮಾಡಿದಂತಾಗಿದೆ ಎಂದು ಟೀಕಿಸಿದರು.

ಕಲಬುರಗಿ ಕಲ್ಯಾಣ ಅಭಿವೃದ್ಧಿ ಮಂಡಳಿಯೇ?

ಸಚಿವ ಸಂಪುಟ ಸಭೆಯಲ್ಲಿ ಒಟ್ಟು ₹11,770 ಕೋಟಿ ಮೊತ್ತದ ಅಭಿವೃದ್ಧಿ ಅನುದಾನ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಆದರೆ, ಬಳ್ಳಾರಿ ಜಿಲ್ಲೆಗೆ ₹10 ಕೋಟಿ ವೆಚ್ಚದಲ್ಲಿ ಬಳ್ಳಾರಿ ಬಿಮ್ಸ್‌ (ಒಪಿಡಿ) ಆಸ್ಪತ್ರೆಗೆ ಎಂಆರ್‌ಐ ಸ್ಕ್ಯಾನ್, ಖಾಸಗಿ ಸಹಭಾಗಿತ್ವದಲ್ಲಿ ಬಳ್ಳಾರಿ ಕೋಟೆಗೆ ರೋಪ್‌ವೇ ನಿರ್ಮಿಸುವ ಯೋಜನೆ ರೂಪಿಸುವುದಾಗಿ ಹೇಳಿರುವುದು ಬಿಟ್ಟರೆ, ಬಳ್ಳಾರಿ ಜನರ ಬಹುವರ್ಷಗಳ ಬೇಡಿಕೆಯಾದ ರಿಂಗ್ ರಸ್ತೆ, ವಿಮಾನ ನಿಲ್ದಾಣ, ಮೆಣಸಿನಕಾಯಿ ಮಾರುಕಟ್ಟೆ ಸೇರಿದಂತೆ ಮತ್ತಿತರ ಪ್ರಗತಿ ಕಾರ್ಯಗಳಿಗೆ ಬಿಡಿಗಾಸೂ ನೀಡಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಕಲಬುರಗಿ ಹಾಗೂ ಬೀದರ್‌ ಜಿಲ್ಲೆಗಳಿಗೆ ಬಹುಗ್ರಾಮ ಕುಡಿಯುವ ನೀರು ಯೋಜನೆಗೆಂದೇ ₹7200 ಕೋಟಿ ನೀಡಲಾಗಿದೆ. ಪ್ರತಿಯೊಂದು ಇಲಾಖೆಯ ಯೋಜನೆಯ ಹಣ ಕಲಬುರಗಿ ಹಾಗೂ ಚಿತ್ತಾಪುರ ಕ್ಷೇತ್ರಕ್ಕೆ ಹೆಚ್ಚು ಹಂಚಿಕೆ ಮಾಡಲಾಗಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯನ್ನು ಕಲಬುರಗಿ ಅಭಿವೃದ್ಧಿ ಮಂಡಳಿಯಂತೆ ಮಾಡಿಕೊಂಡಿದ್ದಾರೆ. ರಾಜ್ಯ ಸರ್ಕಾರ ಸಹ ಈ ಭಾಗದ ಜನರ ನಿರೀಕ್ಷೆಗಳು ಹಾಗೂ ಪ್ರಗತಿದಾಯಿಕ ಕೆಲಸಗಳನ್ನು ಪರಿಗಣನೆಗೆ ತೆಗೆದುಕೊಳ್ಳದೆ, ಮೂರು ಜಿಲ್ಲೆಗಳಿಗೆ ಮಾತ್ರ ಬಹುತೇಕ ಅನುದಾನ ನೀಡಿದೆ ಎಂದು ಟೀಕಿಸಿದರು.

ಪ್ರತ್ಯೇಕ ಕಂದಾಯ ವಿಭಾಗವಾಗಲಿ

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪನೆಯಿಂದ ಈ ಭಾಗದ ಜಿಲ್ಲೆಗಳಿಗೆ ಅನುಕೂಲವಾಗಿಲ್ಲ ಎಂದಾದರೆ ನಾವೇಕೆ ಕಲಬುರಗಿ ಕಂದಾಯ ವಿಭಾಗದಲ್ಲಿರಬೇಕು. ಕೊಪ್ಪಳ, ಬಳ್ಳಾರಿ, ವಿಜಯನಗರ, ರಾಯಚೂರು ಜಿಲ್ಲೆಗಳು ಪ್ರತ್ಯೇಕವಾಗಿ ಕಂದಾಯ ವಿಭಾಗ ಮಾಡುವಂತೆ ಒತ್ತಾಯಿಸಿ ಹೋರಾಟ ರೂಪಿಸುತ್ತೇವೆ. ಇಲ್ಲದಿದ್ದರೆ ಈ ಭಾಗದ ಜಿಲ್ಲೆಗಳಿಗೆ ಉಳಿಗಾಲವಿಲ್ಲ ಎಂದರು.

ಸಚಿವ ಸಂಪುಟ ಸಭೆಯಲ್ಲಿ ಬಳ್ಳಾರಿ ಜಿಲ್ಲೆಗಾದ ಅನ್ಯಾಯವನ್ನು ಸರಿಪಡಿಸಬೇಕು ಎಂದು ಆಗ್ರಹಿಸಿ ಬಳ್ಳಾರಿಯಲ್ಲಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು. ಈ ಸಂಬಂಧ ಎಲ್ಲ ಪಕ್ಷಗಳ ಮುಖಂಡರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳ ಜೊತೆ ಚರ್ಚಿಸಲಾಗುವುದು ಎಂದರು.

ನಾಯಕತ್ವ ಸತ್ತುಹೋಗಿದೆ

ಬಳ್ಳಾರಿ, ವಿಜಯನಗರ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ರಾಜಕೀಯ ನಾಯಕತ್ವ ಸಂಪೂರ್ಣ ಸತ್ತು ಹೋಗಿದೆ. ಹೀಗಾಗಿಯೇ ಈ ಭಾಗದ ಜನರ ಸಂಕಟ, ಸಂಕಷ್ಟಗಳನ್ನು ಕೇಳುವವರಿಲ್ಲ. ಈ ಸರ್ಕಾರದ ಬಹುತೇಕ ಯೋಜನೆಗಳು ಕಲಬುರಗಿ ಜಿಲ್ಲೆಯ ಪಾಲಾಗುತ್ತಿದೆ. ಇದನ್ನು ಪ್ರಶ್ನಿಸುವವರು ಇಲ್ಲವಾಗಿದೆ.

ಬಳ್ಳಾರಿಯನ್ನು ಎಷ್ಟರ ಮಟ್ಟಿಗೆ ಕಡೆಗಣಿಸಲಾಗಿದೆ ಎಂದರೆ ರಾಜ್ಯೋತ್ಸವ ಪ್ರಶಸ್ತಿ, ವಿವಿಧ ನಿಗಮಗಳ ನೇಮಕ, ಸಿಂಡಿಕೇಟ್ ಸದಸ್ಯರ ನೇಮಕ ಹೀಗೆ ಪ್ರತಿಯೊಂದರಲ್ಲೂ ಜಿಲ್ಲೆಯನ್ನು ಮೂಲೆಗುಂಪು ಮಾಡಲಾಗಿದೆ. ವಿಪರ್ಯಾಸ ಎಂದರೆ ಈ ಜಿಲ್ಲೆಯ ಕಾಂಗ್ರೆಸ್ ಶಾಸಕರು ಮಾತನಾಡುತ್ತಿಲ್ಲ. ಪ್ರತಿಪಕ್ಷ ಬಿಜೆಪಿಯವರು ಪಕ್ಷದ ಕರೆಯ ಹೋರಾಟಕ್ಕೆ ಸೀಮಿತವಾಗಿದ್ದಾರೆಯೇ ವಿನಃ, ಜಿಲ್ಲೆಯ ಅಭಿವೃದ್ಧಿ ನೆಲೆಯ ಯಾವ ಧ್ವನಿ ಎತ್ತುತ್ತಿಲ್ಲ ಎಂದು ಪ್ರತಾಪ ರೆಡ್ಡಿ ಟೀಕಿಸಿದರು.