ಕನ್ನಡಪ್ರಭ ವಾರ್ತೆ ನಾಲತವಾಡ

ದೇಶಾದ್ಯಂತ ಎದುರಾಗಿರುವ ಡಿಸೇಲ್ ಕೊರತೆ ಪರಿಣಾಮ ಇದೀಗ ನಾಲತವಾಡ ಪಟ್ಟಣದಲ್ಲಿಯೂ ತೀವ್ರವಾಗಿ ಕಾಣಿಸಿಕೊಳ್ಳುತ್ತಿದೆ. ಪಟ್ಟಣದ ಪ್ರಮುಖ ಪೆಟ್ರೋಲ್ ಬಂಕ್‌ಗಳಲ್ಲಿ ಸೋಮವಾರದಿಂದಲೇ ಟ್ರ್ಯಾಕ್ಟರ್, ಲಾರಿ ಸೇರಿದಂತೆ ವಿವಿಧ ವಾಹನಗಳ ಉದ್ದನೆಯ ಸರತಿ ಸಾಲುಗಳು ಕಂಡುಬಂದಿದ್ದು, ವಾಹನ ಸವಾರರು ಗಂಟೆಗಟ್ಟಲೆ ಕಾಯುವ ಸ್ಥಿತಿ ನಿರ್ಮಾಣವಾಗಿದೆ.

ಸೋಮವಾರ ಸಾಯಂಕಾಲ ಒಂದು ಟ್ಯಾಂಕರ್ ಡೀಸೆಲ್ ಪೆಟ್ರೋಲ್ ಬಂಕ್‌ಗೆ ಬಂದಿದ್ದು, ಕೆಲವೇ ಗಂಟೆಗಳಲ್ಲಿ ಸಂಪೂರ್ಣ ಖಾಲಿ ಆಗಿರುವುದಾಗಿ ತಿಳಿದುಬಂದಿದೆ. ಇದರಿಂದ ಬೆಳಗ್ಗೆಯಿಂದಲೇ ವಾಹನ ಸವಾರರು ತಮ್ಮ ವಾಹನಗಳನ್ನು ಪಂಪ್‌ನಲ್ಲೇ ನಿಲ್ಲಿಸಿ ಡಿಸೇಲ್‌ಗಾಗಿ ಕಾಯುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಕೆಲವರು ರಾತ್ರಿ ಪೂರ್ತಿಯೂ ಪಂಪ್ ಬಳಿ ತಂಗಿ ಡಿಸೇಲ್ ಸಿಗುವ ನಿರೀಕ್ಷೆಯಲ್ಲಿ ಕಾಯುತ್ತಿರುವುದು ಕಂಡುಬಂದಿತು.

ವಿಶೇಷವಾಗಿ ಕೃಷಿ ಚಟುವಟಿಕೆಗಳಿಗೆ ಬಳಸುವ ಟ್ರ್ಯಾಕ್ಟರ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಪಂಪ್‌ಗಳಿಗೆ ಆಗಮಿಸುತ್ತಿದ್ದು, ರೈತರು ಹಾಗೂ ವಾಹನ ಚಾಲಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಡಿಸೇಲ್ ಲಭ್ಯತೆ ಕಡಿಮೆಯಿಂದ ಕೃಷಿ ಕಾರ್ಯಗಳು ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಡಿಸೇಲ್ ಕೊರತೆಯಿಂದ ಸಾಕಷ್ಟು ತೊಂದರೆ ಎದುರಾಗಿದೆ. ಈಗ ಕೃಷಿ ಚಟುವಟಿಕೆಗಳ ಸೀಜನ್ ನಡೆಯುತ್ತಿದ್ದು, ಡೀಸೆಲ್ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇಂದ್ರ ಸರ್ಕಾರ ಕೂಡಲೇ ಸಮಸ್ಯೆ ಪರಿಹರಿಸಿ ಸಮರ್ಪಕ ಪ್ರಮಾಣದಲ್ಲಿ ಡಿಸೇಲ್ ಪೂರೈಸಬೇಕು ಎಂದು ರೈತ ಸಂಗಮೇಶ ಗಂಗನಗೌಡರ ಆಗ್ರಹಿಸಿದ್ದಾರೆ.ಡಿಸೇಲ್ ಸರಬರಾಜು ಸಮರ್ಪಕವಾಗಿಲ್ಲ. ಆದ್ದರಿಂದ ಈ ಸಮಸ್ಯೆ ಉಲ್ಬಣಿಸಿದ್ದು, ಸಮಸ್ಯೆ ಇನ್ನೂ ಮುಂದುವರಿದರೆ ಕೃಷಿ ಹಾಗೂ ಸಾರಿಗೆ ಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವಾಹನ ಸವಾರರು ಕಳವಳ ವ್ಯಕ್ತಪಡಿಸಿದ್ದಾರೆ.