ಸಾರಾಂಶ
ಬೇಲೂರು: ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರು ಪೌಷ್ಟಿಕ ಆಹಾರದ ಬಗ್ಗೆ ಗಮನಹರಿಸದೆ ಕೇವಲ ಜಂಕ್ ಫುಡ್‌ಗಳಿಗೆ ಮಾರುಹೋಗುತ್ತಿರುವುದು ಬೇಸರದ ಸಂಗತಿಯಾಗಿದೆ. ದೇಶ ಅಭಿವೃದ್ದಿಯಾಗಬೇಕಾದರೆ ನಮ್ಮ ಆರೋಗ್ಯ ಪದ್ಧತಿ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕು ಎಂದು ಬೇಲೂರು ಹಿರಿಯ ಸಿವಿಲ್ ನ್ಯಾಯಾಧೀಶೆ ಎಂ.ಎಸ್.ಶಶಿಕಲಾ ಹೇಳಿದರು.
ಪಟ್ಟಣದ ಶ್ರೀ ಚನ್ನಕೇಶವ ದಾಸೋಹ ಭವನದಲ್ಲಿ ನಡೆದ ಕಾನೂನು ಸೇವಾ ಸಮಿತಿ ವಕೀಲರ ಸಂಘ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆ, ಇತರ ಇಲಾಖೆಗಳ ಸಹಯೋಗದಲ್ಲಿ ನಡೆದ ರಾಷ್ಟ್ರೀಯ ಪೌಷ್ಟಿಕ ಸಪ್ತಾಹ ಹಾಗೂ ಆಹಾರ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು ಎಲ್ಲಾ ಇಲಾಖೆಯ ಕರ್ತವ್ಯ. ಅಂಗನವಾಡಿ ಶಿಕ್ಷಕಿಯರ ಪಾತ್ರ ಮಹತ್ವದ್ದು. ಅಪೌಷ್ಟಿಕತೆ ನಿರ್ಮೂಲನೆಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತಿದ್ದು ಅವುಗಳನ್ನು ಸರಿಯಾದ ರೀತಿಯಲ್ಲಿ ಅನುಷ್ಠಾನ ಮಾಡಬೇಕು. ಹಿಂದೆ ಹಸಿ ತರಕಾರಿ, ಮೊಳಕೆ ಕಾಳು ಸೇರಿದಂತೆ ಹಲವಾರು ರೀತಿಯ ಕೈತೋಟದಲ್ಲಿ ಬೆಳೆದಂತಹ ಪದಾರ್ಥಗಳಲ್ಲಿ ಆಹಾರ ತಯಾರಿಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ರೆಡಿಮೇಡ್ ಆಹಾರ ಮೂಲಕ ಪಾಶ್ಚಾತ್ಯ ಸಂಸ್ಕೃತಿಗೆ ಒಳಗಾಗಿ ನಮ್ಮ ಅಭಿವೃದ್ಧಿ ನೆಪದಲ್ಲಿ ನಮ್ಮತನವನ್ನು ಮರೆತು ನಮ್ಮ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.
ತಹಸೀಲ್ದಾರ್ ಎಂ.ಮಮತಾ ಮಾತನಾಡಿ, ಭಾರತೀಯರಾದ ನಾವು ಎಲ್ಲದರಲ್ಲೂ ಮುಂದೆ ಇದ್ದೇವೆ. ಆದರೆ ಆರೋಗ್ಯದ ವಿಷಯದಲ್ಲಿ ಮಾತ್ರ ನಾವು ಹಿಂದೆ ಇದ್ದೇವೆ. ಈ ಹಿಂದೆ ಹಿರಿಯರು ಹಾಕಿಕೊಟ್ಟ ಯಾವುದೇ ಆರೋಗ್ಯ ಪದ್ಧತಿ ಬಿಟ್ಟು ಇಂದು ಮೊಬೈಲ್‌ನಲ್ಲಿ ಬರುವಂತಹ ಉಪಾಹಾರಕ್ಕೆ ಅಡುಗೆ ಮನೆಗೆ ಒಗ್ಗಿರುವುದು ವಿಪರ್ಯಾಸ. ಸ್ಥಳೀಯ ಆಹಾರ ಪದಾರ್ಥಗಳ ಉಪಯೋಗ ಬಗ್ಗೆ ಕಾಲಕಾಲಕ್ಕೆ ದೊರೆಯುವ ತರಕಾರಿ ಹಣ್ಣು ಹಂಪಲುಗಳ ಬಗ್ಗೆ ಯುವ ಜನಾಂಗಕ್ಕೆ ನೀವು ತಿಳಿಹೇಳುವ ಕೆಲಸ ಮಾಡಬೇಕು. ಪ್ರತಿ ನಿತ್ಯ ಮನೆಯಲ್ಲಿ ಹಸಿ ತರಕಾರಿಗಳಿಗೆ ಹೆಚ್ಚಿನ ಮಾನ್ಯತೆ ನೀಡಿದರೆ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಎಂದರು.ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿ ಎಂ.ಪಿ.ದಿನೇಶ್ ಮಾತನಾಡಿ, ಅಪೌಷ್ಟಿಕತೆಯಿಂದಾಗಿ ಹಲವು ಅನಾರೋಗ್ಯದ ಸಮಸ್ಯೆಗಳು ಉದ್ಭವಿಸಿ, ವಯಸ್ಸು ಹಾಗೂ ಲಿಂಗ ಭೇದವಿಲ್ಲದೆ, ಎಲ್ಲರೂ ಸಂಕಷ್ಟಕ್ಕೆ ಒಳಗಾಗುತ್ತಾರೆ. ಗರ್ಭಿಣಿ ಪೌಷ್ಟಿಕ ಮಟ್ಟದ ಆಧಾರದ ಮೇಲೆ ಆಕೆಗೆ ಹುಟ್ಟುವ ಮಗುವಿನ ಆರೋಗ್ಯ ನಿರ್ಧಾರವಾಗುತ್ತದೆ. ರಕ್ತಹೀನತೆಯು ಗರ್ಭಿಣಿ, ಬಾಣಂತಿಗೆ ಸಾಮಾನ್ಯ ಸಮಸ್ಯೆಯಾಗಿದೆ. ಪ್ರತಿದಿನ ಸಮತೋಲನ ಆಹಾರ ಸೇವಿಸುವುದರಿಂದ ಮಾತ್ರ ಪರಿಣಾಮಕಾರಿಯಾಗಿ ರಕ್ತಹೀನತೆಯನ್ನು ತಡೆಗಟ್ಟಬಹುದು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಮಮತಾ, ಸಮತೋಲನ ಆಹಾರದ ಮಹತ್ವ, ಇಲಾಖೆ ಸೌಲಭ್ಯಗಳು, ಮಾತೃ ವಂದನಾ ಸಪ್ತಾಹ, ರಾಷ್ಟ್ರೀಯ ಪೋಷಣ್ ಮಾಸಾಚರಣೆಯ ಮಹತ್ವ, ಸಮುದಾಯ ಆಧಾರಿತ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.ವಕೀಲರ ಸಂಘದ ಕಾರ್ಯದರ್ಶಿ ಪುಟ್ಟಸ್ವಾಮಿಗೌಡ ಮಾತನಾಡಿದರು. ತಾಲೂಕಿನ ಎಲ್ಲಾ ಅಂಗನವಾಡಿ ಇಲಾಖೆಯ ಕಾರ್ಯಕರ್ತರು ವಿಶೇಷವಾದ ಆಹಾರ ಮೇಳವನ್ನು ಪ್ರದರ್ಶನ ನಡೆಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ ವಿಜಯ್, ಆಡಳಿತ ವೈದ್ಯಾಧಿಕಾರಿ ಡಾ.ಸುಧಾ, ಸರ್ಕಾರಿ ಅಭಿಯೋಜಕರಾದ ಶಶಿಕಲಾ, ಗೀತಾಮಣಿ, ನ್ಯಾಯಾಲಯದ ಸಿಬ್ಬಂದಿ ಪ್ರಕಾಶ್ ಇತರರು ಹಾಜರಿದ್ದರು.