ಹೊಳೆನರಸೀಪುರ ಆಸ್ಪತ್ರೆಯಲ್ಲಿ ಲಿಫ್ಟ್‌ ಇಲ್ಲದೆ ಗರ್ಭಿಣಿಯರಿಗೆ ತೊಂದರೆ

| Published : Aug 30 2024, 01:06 AM IST

ಹೊಳೆನರಸೀಪುರ ಆಸ್ಪತ್ರೆಯಲ್ಲಿ ಲಿಫ್ಟ್‌ ಇಲ್ಲದೆ ಗರ್ಭಿಣಿಯರಿಗೆ ತೊಂದರೆ
Share this Article
  • FB
  • TW
  • Linkdin
  • Email

ಸಾರಾಂಶ

ಹೊಳೆನರಸೀಪುರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಲಿಫ್ಟ್ ಕೆಟ್ಟು ಗರ್ಭಿಣಿಯರು ಹಾಗೂ ತಾಯಂದಿರು, ಪುಟ್ಟ ಮಕ್ಕಳು ರಕ್ತ ಹಾಗೂ ಇತರೆ ಪರೀಕ್ಷೆಗಳಿಗೆ ೩ನೇ ಮಹಡಿಗೆ ಮೆಟ್ಟಿಲು ಮೂಲಕ ತೆರಳಬೇಕಾಗಿದ್ದು, ಈ ಸ್ಥಿತಿ ತಾಲೂಕು ಆರೋಗ್ಯಾಧಿಕಾರಿ ಹಾಗೂ ಆಸ್ಪತ್ರೆಯ ಆಡಳಿತ ಮಂಡಳಿಯ ಕಾರ್ಯದಕ್ಷತೆಯನ್ನು ಅನುಮಾನಿಸುವ ಸ್ಥಿತಿ ನಿರ್ಮಾಣವಾಗಿದೆ.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಬಡವರ ಪಾಲಿಗೆ ಕಾಮಧೇನುವಿನಂತೆ ಸೇವೆ ನೀಡಬೇಕಿದ್ದ ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಲಿಫ್ಟ್ ಕೆಟ್ಟು ಗರ್ಭಿಣಿಯರು ಹಾಗೂ ತಾಯಂದಿರು, ಪುಟ್ಟ ಮಕ್ಕಳು ರಕ್ತ ಹಾಗೂ ಇತರೆ ಪರೀಕ್ಷೆಗಳಿಗೆ ೩ನೇ ಮಹಡಿಗೆ ಮೆಟ್ಟಿಲು ಮೂಲಕ ತೆರಳಬೇಕಾಗಿದ್ದು, ಈ ಸ್ಥಿತಿ ತಾಲೂಕು ಆರೋಗ್ಯಾಧಿಕಾರಿ ಹಾಗೂ ಆಸ್ಪತ್ರೆಯ ಆಡಳಿತ ಮಂಡಳಿಯ ಕಾರ್ಯದಕ್ಷತೆಯನ್ನು ಅನುಮಾನಿಸುವ ಸ್ಥಿತಿ ನಿರ್ಮಾಣವಾಗಿದೆ.

ಶಾಸಕ ಎಚ್.ಡಿ.ರೇವಣ್ಣನವರ ವಿಶೇಷ ಕಾಳಜಿಯಿಂದ ಪಟ್ಟಣದಲ್ಲಿ ಇರುವ ಸಾರ್ವಜನಿಕ ಆಸ್ಪತ್ರೆಗೆ ರಾಜ್ಯದಲ್ಲೇ ಮೊಟ್ಟ ಮೊದಲ ಬಾರಿಗೆ ೫ ಡಯಾಲಿಸಿಸ್ ಯಂತ್ರಗಳು, ಸಿಟಿ ಸ್ಕ್ಯಾನ್ ಸೌಲಭ್ಯ, ೧೨೦ ಆಕ್ಸಿಜನ್ ಸಹಿತ ಹಾಸಿಗೆಗಳು, ಉನ್ನತ ದರ್ಜೆಯ ಪ್ರಯೋಗಾಲಯ, ತೀವ್ರ ನಿಗಾ ಘಟಕ(ಐಸಿಯು)ಗಳನ್ನು ಪ್ರಾರಂಭಿಸಿ, ಸರ್ಕಾರಿ ಆಸ್ಪತ್ರೆಯ ಬಗ್ಗೆ ಪ್ರತಿಯೊಬ್ಬರೂ ಮೆಚ್ಚುಗೆ ವ್ಯಕ್ತಪಡಿಸುವಂತೆ ಮಾಡಿದ್ದಾರೆ. ತಾಯಿ ಮತ್ತು ಮಕ್ಕಳ ಆಸ್ಪತ್ರೆ ಪ್ರತ್ಯೇಕ ವಿಭಾಗದ ಕಟ್ಟಡ ಮತ್ತು ಸಲಕರಣೆ ವ್ಯವಸ್ಥಿತವಾಗಿ ಒದಗಿಸುವ ಜತೆಗೆ ಗರ್ಭಕೋಶ, ಪ್ರಸವ ಮತ್ತು ಸ್ತ್ರೀ ಮತ್ತು ಶಿಶುಗಳ ಚಿಕಿತ್ಸಾ ವಿಭಾಗದಲ್ಲಿ ನಿರೀಕ್ಷೆಗೂ ಮೀರಿದ ಸಾಧನೆಗಳಾಗಿವೆ. ಡಾ.ಲಕ್ಷ್ಮಿಕಾಂತ್ ಆಡಳಿತಾವಧಿಯಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯು ರಾಷ್ಟ್ರಮಟ್ಟದ ಗುಣಮಟ್ಟದ ಖಾತ್ರಿ ವಿಭಾಗದಿಂದ ಪ್ಲಾಟಿನಮ್ ಮಾನ್ಯತೆ ಜತೆಗೆ ಲಕ್ಷ್ಯ ಸರ್ಟಿಫೈಡ್ ಆಸ್ಪತ್ರೆ ಎಂದು ಬ್ಯಾಡ್ಜ್ ಲಭಿಸಿದೆ. ಸಾರ್ವಜನಿಕ ಆಸ್ಪತ್ರೆಗೆ ಕಾರ್ಪೋರೇಟ್ ಸ್ಪರ್ಶ ನೀಡಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಹಲವಾರು ಪಶಸ್ತಿಗಳು ಬರುವಂತೆ ಆಡಳಿತಾಧಿಕಾರಿಯಾಗಿ ಡಾ. ಲಕ್ಷ್ಮಿಕಾಂತ್ ಅವರು ಕರ್ತವ್ಯದಲ್ಲಿ ತೋರಿದ ನಿಷ್ಠೆ ಶ್ಲಾಘನೀಯ.

ಹೆಣ್ಣು ಗರ್ಭ ಧರಿಸಿದ ವಿಷಯ ತಿಳಿದ ನಂತರ, ನಿರಂತರವಾಗಿ ವೈದ್ಯರ ಸಲಹೆಗಳನ್ನು ಪಾಲಿಸುತ್ತಾ ಹೆರಿಗೆ ದಿನ ವೈದ್ಯರನ್ನು ದೇವರಂತೆ ಕಾಣುವ ಅವರ ಮನಸ್ಥಿತಿ, ಹೆರಿಗೆ ನಂತರ ಬಾಣಂತಿ ಮತ್ತು ಪೋಷಕರ ಕಣ್ಣಲ್ಲಿ ವೈದ್ಯರ ಬಗ್ಗೆ ಕಾಣುವ ಧನ್ಯತಾಭಾವ ಅನನ್ಯವಾದದ್ದು. ಗ್ರಾಮೀಣ ಪ್ರದೇಶದ ರೈತರ ಹಾಗೂ ಬಡವರ ಹೆಣ್ಣು ಮಕ್ಕಳ ಪಾಲಿಗೆ ತಾಯಿ ಮನೆಗೂ ಮಿಗಿಲಾದ ವಿಶೇಷ ಸ್ಥಾನವನ್ನು ತಾಯಿ ಮತ್ತು ಮಕ್ಕಳ ಆಸ್ಪತ್ರೆ ಪಡೆದಿದೆ. ಆದರೆ ಲಿಫ್ಟ್ ಕೆಟ್ಟು ಗರ್ಭಿಣಿ ಮಹಿಳೆಯರು ಹಾಗೂ ತಾಯಂದಿರು ಪುಟ್ಟ ಕಂದಮ್ಮಗಳ ರಕ್ತ ಹಾಗೂ ಇತರೆ ಪರೀಕ್ಷೆಗಳಿಗೆ ೩ನೇ ಮಹಡಿಗೆ ಮೆಟ್ಟಿಲು ಮೂಲಕ ತೆರಳುವ ಅನಿವಾರ್ಯತೆಯಿಂದಾಗಿ ಹೈರಾಣವಾಗುತ್ತಿದ್ದು, ಅವರ ಮನದಲ್ಲಿ ಮೂಡುತ್ತಿರುವ ಹತ್ತಾರು ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಮೌನ ಅಥವಾ ಪರಿಸ್ಥಿತಿಗೆ ಶಪಿಸುತ್ತಾ ಕಣ್ಣೀರು ಹಾಕುತ್ತಾ ಕುಳಿತಿರಬೇಕಾದ ಸ್ಥಿತಿಗೆ ಮುಕ್ತಿ ಅಗತ್ಯವಾಗಿದೆ.

* ಹೇಳಿಕೆ1

ಲಿಫ್ಟ್ ಕೆಟ್ಟಿರುವ ಬಗ್ಗೆ ಅದನ್ನು ಅಳವಡಿಸಿದ ಕಂಪನಿಗೆ ತಿಳಿಸಲಾಗಿತ್ತು. ಅವರು ಒಮ್ಮೆ ದುರಸ್ತಿ ಮಾಡಿ ತೆರಳಿದ್ದರು, ನಂತರದಲ್ಲಿ ಬೆಲ್ಟ್‌ನಲ್ಲಿ ಸಮಸ್ಯೆ ಉಂಟಾಗಿದೆ ಎಂದು ತಿಳಿಸಿದ್ದಾರೆ ಮತ್ತು ಇನ್ನೆರಡು ದಿನದಲ್ಲಿ ದುರಸ್ತಿಗೊಳಿಸಲಾಗುತ್ತದೆ. ಲಿಫ್ಟ್ ಯಂತ್ರ ಕಾರ್ಯನಿರ್ವಹಿಸಲಿದೆ.

ಡಾ. ಧನಶೇಖರ್‌, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ