ಸಾರಾಂಶ
ವಿಶೇಷ ವರದಿ
ಮುಳಗುಂದ: ಬಸ್ ನಿಲ್ದಾಣದಲ್ಲಿ ಅಗತ್ಯ ಸೌಲಭ್ಯ ಕೊರತೆ ಹಾಗೂ ಪ್ರಯಾಣಿಕರಿಗೆ ತಕ್ಕಂತೆ ಬಸ್ ಸಂಚಾರ ಇಲ್ಲದೇ ಇರುವುದರಿಂದ ಮುಳಗುಂದದಿಂದ ಬೇರೆಡೆ ಪ್ರಯಾಣ ಮಾಡಲು ಜನರು ಹರಸಾಹಸ ಮಾಡುವಂತಾಗಿದೆ.ಅದರಲ್ಲೂ ವಿಶೇಷವಾಗಿ ಶಾಲಾ-ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.
ಚಿಂಚಲಿ, ಕಲ್ಲೂರ, ನೀಲಗುಂದ, ಪಕ್ಕದ ಶಿರಹಟ್ಟಿ ತಾಲೂಕಿನ ಹರಿಪುರ, ಖಾನಪುರ ವಿದ್ಯಾರ್ಥಿಗಳು ಮುಳಗುಂದ ಬಸ್ ನಿಲ್ದಾಣದ ಮೂಲಕವೇ ಗದಗಕ್ಕೆ ಹೋಗುತ್ತಾರೆ. ಮುಳಗುಂದ ಪಟ್ಟಣದಿಂದ ಗದಗ ನಗರಕ್ಕೆ ಪ್ರತ್ಯೇಕ ಒಂದು ಬಸ್ ನೀಡಿದ್ದರೂ ಸಾಲುತ್ತಿಲ್ಲ. ಕೆಲವೊಮ್ಮೆ ಜನರು ಬಾಗಿಲವರೆಗೂ ನಿಂತಿರುತ್ತಾರೆ. ಸಮಯಕ್ಕೆ ಸರಿಯಾಗಿ ಬಸ್ ಬಾರದಿದ್ದರೆ ವಿದ್ಯಾರ್ಥಿಗಳ ಆತಂಕ ಹೆಚ್ಚುತ್ತದೆ. ಬೆಳಗಿನ ತರಗತಿ ತಪ್ಪಿಹೋಗುವ ಭಯ ಅವರನ್ನು ಕಾಡಲಾರಂಭಿಸುತ್ತದೆ. ಹೀಗಾಗಿ ಬಾಗಿಲಲ್ಲಿ ಜೋತುಬಿದ್ದಾದರೂ ಪ್ರಯಾಣಿಸುವುದು ಅನಿವಾರ್ಯವಾಗುತ್ತಿದೆ.ಶಕ್ತಿ ಯೋಜನೆ ಪರಿಣಾಮ: ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾದ ಬಳಿಕ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ಆದರೆ ಹೆಚ್ಚುವರಿ ಬಸ್ ವ್ಯವಸ್ಥೆಯಾಗಿಲ್ಲ. ಹಬ್ಬ ಹರಿದಿನಗಳಲ್ಲಿ ಬಸ್‌ಗಳಲ್ಲಿ ಕಾಲಿಡಲು ಜಾಗವಿಲ್ಲದಂತಾಗಿರುತ್ತದೆ.
ಗದಗ-ಲಕ್ಷ್ಮೇಶ್ವರ ತಡೆರಹಿತ ಬಸ್: ಗದಗ-ಲಕ್ಷ್ಮೇಶ್ವರ ತಡೆರಹಿತ ಬಸ್ ಮುಳಗುಂದದ ಒಳಗೆ ಬಂದು ಹೋದರೆ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ. ಬೆಳಗಿನ ಜಾವ ವಿಶೇಷವಾಗಿ ವಿದ್ಯಾರ್ಥಿಗಳಿಗೆ ಗದಗ ನಗರಕ್ಕೆ ತೆರಳಲು ಇನ್ನೊಂದು ಬಸ್ ಬಿಡಬೇಕು, ಜತೆಗೆ ಬೆಳಗ್ಗೆ 7 ಗಂಟೆಯಿಂದ 10ರ ವರೆಗೆ ಇನ್ನೆರಡು ಬಸ್ ಸಂಚರಿಸುವಂತಾಗಬೇಕು ಎಂಬುದು ಇಲ್ಲಿಯ ಪ್ರಯಾಣಿಕರ ಬೇಡಿಕೆ.ನಿಲ್ದಾಣದಲ್ಲಿ ಅವ್ಯವಸ್ಥೆ: ಇಲ್ಲಿಯ ಪ್ರಯಾಣಿಕರಿಗೆ ಕೇವಲ ಬಸ್ ಕೊರತೆಯೊಂದೇ ಸಮಸ್ಯೆಯಲ್ಲ. ಜತೆಗೆ ಬಸ್ ನಿಲ್ದಾಣವೂ ಬೇಸರ ಮೂಡಿಸುತ್ತಿದೆ. ಬಸ್ ನಿಲ್ದಾಣದಲ್ಲಿ ಪುಂಡ-ಪೋಕರಿಗಳ ಕಾಟವಿದೆ. ಕ್ಯಾಂಟಿನ್ ಬಳಿ ಕೆಲವರು ಅಡ್ಡಾದಿಡ್ಡಿ ಬೈಕ್ ನಿಲ್ಲಿಸಿ, ಪ್ರಯಾಣಿಕರಿಗಾಗಿ ಇರುವ ಆಸನಗಳಲ್ಲಿ ಕುಳಿತು ಹರಟೆ ಹೊಡೆಯುವುದಲ್ಲದೆ ಕಾಲೇಜಿಗೆ ತೆರಳುವ ವಿದ್ಯಾರ್ಥಿನಿಯರು ಹಾಗೂ ಮಹಿಳೆಯರನ್ನು ಚುಡಾಯಿಸುತ್ತಾರೆ. ಇದನ್ನು ನಿಯಂತ್ರಿಸಲು ಬೆಳಗಿನ ಜಾವ ಬಸ್ ನಿಲ್ದಾಣಕ್ಕೆ ಪೊಲೀಸ್ ಸಿಬ್ಬಂದಿ ನಿಯೋಜಿಸಿ ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.
ತೆರೆಯದ ಮಹಿಳಾ ನಿರೀಕ್ಷಣಾ ಕೊಠಡಿ: ಬಸ್ ನಿಲ್ದಾಣ ಉದ್ಘಾಟನೆಯಾಗಿ ಇಲ್ಲಿಯವರೆಗೂ ಮಹಿಳಾ ನಿರೀಕ್ಷಣಾ ಕೊಠಡಿ ತೆರೆದೇ ಇಲ್ಲ. ಬಸ್ ನಿಲ್ದಾಣದ ಆಸನಗಳು ಕೆಲವೊಮ್ಮೆ ಖಾಲಿ ಇರುವುದಿಲ್ಲ. ಮಹಿಳಾ ನೀರಿಕ್ಷಣಾ ಕೊಠಡಿ ತೆರೆಯುವಂತೆ ಹಲವಾರು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನೆಯಾಗಿಲ್ಲ ಎನ್ನುತ್ತಾರೆ ಮಹಿಳಾ ಪ್ರಯಾಣಿಕರು.ಮುಳಗುಂದ ಪಟ್ಟಣಕ್ಕೆ ಪ್ರತ್ಯೇಕ ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸಿದರೆ, ಕಾಲೇಜ್‌ಗೆ ತೆರಳುವ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದು ವಿದ್ಯಾರ್ಥಿ ಬಸವರಾಜ ಆರ್. ಪಾಟೀಲ ಹೇಳಿದರು.
ಶಿರಹಟ್ಟಿ-ಹುಬ್ಬಳ್ಳಿ ತಡೆರಹಿತ ಬಸ್‌ಗಳು ಮುಳಗುಂದ ಬಸ್ ನಿಲ್ದಾಣಕ್ಕೆ ಬಂದು ಹೋಗುತ್ತವೆ. ಅದರಂತೆ ಗದಗ-ಲಕ್ಷ್ಮೇಶ್ವರ ತಡೆರಹಿತ ಬಸ್‌ಗಳು ಮುಳಗುಂದ ಬಸ್ ನಿಲ್ದಾಣಕ್ಕೆ ಬರುವಂತಾಗಬೇಕು ಎಂದು ಸ್ಥಳೀಯರಾದ ಸಿದ್ದರಾಮಯ್ಯ ಹಿರೇಮಠ ಹೇಳುತ್ತಾರೆ.