ಇಂದಿನ ಯುವಜನತೆ ಮೊಬೈಲ್ ಹಾಗೂ ಡಿಜಿಟಲ್ ವೇದಿಕೆ ಮೂಲಕ ಜ್ಞಾನ ಪಡೆಯುತ್ತಿರುವ ಹಿನ್ನೆಲೆ ಸಾಹಿತ್ಯವೂ ಡಿಜಿಟಲ್ ರೂಪದಲ್ಲಿ ಲಭ್ಯವಾಗಬೇಕು
ಕುಷ್ಟಗಿ: ಸಾಹಿತ್ಯ ಕೃಷಿಯಲ್ಲಿ ಕಾಲಾನುಸಾರ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು ಡಿಜಿಟಲ್ ಇ-ಪುಸ್ತಕ, ಎಐ ಬಳಕೆಯಿಂದ ಕನ್ನಡ ಸಾಹಿತ್ಯ ವಿಶ್ವದ ಮಟ್ಟಕ್ಕೆ ತಲುಪಿಸಬಹುದಾಗಿದ್ದು, ಹೊಸ ಆಕಾರ ಕೊಡುವ ಕೆಲಸ ಮಾಡಬೇಕು ಎಂದು ಬಳ್ಳಾರಿ ವಿಭಾಗೀಯ ಕಾನೂನು ಅಧಿಕಾರಿ ಬಿ.ಎಸ್.ಪಾಟೀಲ್ ಹೇಳಿದರು.
ಪಟ್ಟಣದ ಬಸವ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆದ 112ನೇ ಕನ್ನಡ ಸಾಹಿತ್ಯ ಪರಿಷತ್ ಸಂಸ್ಥಾಪನಾ ದಿನಾಚರಣೆ, ಹಿರಿಯ ಆಜೀವ ಸದಸ್ಯರಿಗೆ, ಕಲಾವಿದರಿಗೆ ಸನ್ಮಾನ ಸಮಾರಂಭ ಹಾಗೂ ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಇಂದಿನ ಯುವಜನತೆ ಮೊಬೈಲ್ ಹಾಗೂ ಡಿಜಿಟಲ್ ವೇದಿಕೆ ಮೂಲಕ ಜ್ಞಾನ ಪಡೆಯುತ್ತಿರುವ ಹಿನ್ನೆಲೆ ಸಾಹಿತ್ಯವೂ ಡಿಜಿಟಲ್ ರೂಪದಲ್ಲಿ ಲಭ್ಯವಾಗಬೇಕು ಎಂದು ಹೇಳಿದರು.
ಪುಸ್ತಕಗಳು ಕೇವಲ ಮುದ್ರಣಕ್ಕೆ ಸೀಮಿತವಾಗದೆ ಡಿಜಿಟಲ್ ಇ–ಪುಸ್ತಕ, ಆಡಿಯೋ ಪುಸ್ತಕ ಹಾಗೂ ಎಐ ಆಧಾರಿತ ಅಧ್ಯಯನ ವಿಧಾನಗಳ ಮೂಲಕ ಓದುಗರಿಗೆ ತಲುಪಬೇಕು.ಇದರಿಂದ ಕನ್ನಡ ಸಾಹಿತ್ಯದ ವಿಸ್ತರಣೆ ವೇಗವಾಗಿ ನಡೆಯಲಿದೆ ಎಂದು ಹೇಳಿದ ಅವರು, ಎಐ ತಂತ್ರಜ್ಞಾನ ಬಳಸಿ ಹಳೆಯ ಸಾಹಿತ್ಯ ಸಂಗ್ರಹ ಡಿಜಿಟಲೀಕರಣ ಮಾಡುವ ಅಗತ್ಯವಿದೆ. ಅಪರೂಪದ ಕೃತಿ ಸಂರಕ್ಷಿಸಿ ಮುಂದಿನ ಪೀಳಿಗೆಗೆ ತಲುಪಿಸುವುದು ನಮ್ಮ ಹೊಣೆಗಾರಿಕೆ ಎಂದರು.ಹಿರಿಯ ನ್ಯಾಯವಾದಿ ಫಕೀರಪ್ಪ ಚಳಗೇರಿ ಮಾತನಾಡಿ, ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಉಳಿವು ಬೆಳವಣಿಗೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯಾದ್ಯಂತ ಕನ್ನಡಾಭಿಮಾನ ಬೆಳೆಸುವ ಮಹತ್ವದ ಕಾರ್ಯ ಮಾಡುತ್ತಿದೆ. ಕನ್ನಡ ಭಾಷೆ ಕೇವಲ ಸಂವಹನದ ಸಾಧನವಾಗಿಲ್ಲ, ಅದು ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಆತ್ಮಗೌರವದ ಪ್ರತೀಕವಾಗಿದೆ ಎಂದು ಅಭಿಪ್ರಾಯಪಟ್ಟರು.
ಶಿಕ್ಷಕ ಶರಣಪ್ಪ ತೆಮ್ಮಿನಾಳ ಉಪನ್ಯಾಸ ನೀಡಿದ ಅವರು, ಕನ್ನಡ ಭಾಷೆ ಮತ್ತು ಸಾಹಿತ್ಯ ನಮ್ಮ ಸಂಸ್ಕೃತಿಯ ಮೂಲಾಧಾರವಾಗಿದ್ದು, ಯುವ ಪೀಳಿಗೆ ಕನ್ನಡದ ಓದು-ಬರವಣಿಗೆಗೆ ಹೆಚ್ಚು ಒತ್ತು ನೀಡಬೇಕು ಕನ್ನಡ ಸಾಹಿತ್ಯವು ಜೀವನ ಮೌಲ್ಯ ಬೆಳೆಸುವ ಶಕ್ತಿಯಾಗಿದೆ.ಇಂದಿನ ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳು ಮೊಬೈಲ್, ಸಾಮಾಜಿಕ ಜಾಲತಾಣಗಳ ಜತೆಗೆ ಕನ್ನಡ ಸಾಹಿತ್ಯ ಓದಿನ ಕಡೆ ಆಸಕ್ತಿ ಬೆಳೆಸಿಕೊಳ್ಳಬೇಕು. ಸಾಹಿತ್ಯದ ಮೂಲಕ ವ್ಯಕ್ತಿತ್ವ ವಿಕಾಸ ಸಾಧ್ಯವಾಗುತ್ತದೆ ಎಂದು ಹೇಳಿದ ಅವರು, ಕನ್ನಡ ಭಾಷೆಯ ಬಳಕೆ ಮನೆ, ಶಾಲೆ ಹಾಗೂ ಸಾರ್ವಜನಿಕ ಬದುಕಿನಲ್ಲಿ ಹೆಚ್ಚಾದರೆ ಮಾತ್ರ ಭಾಷೆ ಉಳಿಯುತ್ತದೆ ಶಿಕ್ಷಕರು ಮತ್ತು ಪೋಷಕರು ಮಕ್ಕಳಲ್ಲಿ ಕನ್ನಡ ಪ್ರೀತಿ ಬೆಳೆಸುವ ಜವಾಬ್ದಾರಿ ಹೊಂದಿದ್ದಾರೆ ಎಂದರು.ಈ ಸಂದರ್ಭದಲ್ಲಿ ಕಸಾಪ ತಾಲೂಕಾಧ್ಯಕ್ಷ ಲೆಂಕಪ್ಪ ವಾಲಿಕಾರ, ಹಿರಿಯ ಸಾಹಿತಿ ಹನಮಂತಪ್ಪ ಈಟಿಯವರು, ಎಸ್.ಜಿ.ಕಡೆಮನಿ, ರವೀಂದ್ರ ಬಾಕಳೆ, ಶರಣಪ್ಪ ಲೈನದ್, ದೇವರಾಜ ವಿಶ್ವಕರ್ಮ, ನಿಂಗಪ್ಪ ಸಜ್ಜನ, ಶ್ರೀನಿವಾಸ ಕಂಟ್ಲಿ, ಅಮರೇಗೌಡ ಜಾಲಿಹಾಳ, ಭರತೇಶ ಜೋಷಿ, ಶೈಲಜಾ ಬಾಗಲಿ, ಅಬ್ದುಲ್ ಕರೀಂ ಒಂಟೇಳಿ, ಹನಮೇಶ ಗುಮಗೇರಿ, ಉಮೇಶ ಹಿರೇಮಠ, ನಟರಾಜ ಸೋನಾರ, ಪವಾಡೆಪ್ಪ ಚೌಡ್ಕಿ, ಪರಶಿವಮೂರ್ತಿ ಮಾಟಲದಿನ್ನಿ, ಮಹೇಶ ಹಡಪದ, ಬಾಳಪ್ಪ ಅರಳಿಕಟ್ಟಿ, ಮಹಾಂತಪ್ಪ ಹಡಪದ, ವಿ.ಎಸ್. ಕಾಡಗಿಮಠ, ಮಂಜುನಾಥ ಹಡಪದ ಸೇರಿದಂತೆ ಸಾಹಿತ್ಯಾಸಕ್ತರು, ಗಣ್ಯರು, ಕನ್ನಡಾಭಿಮಾನಿಗಳು ಭಾಗವಹಿಸಿದ್ದರು. ಇದೆ ಸಂದರ್ಭದಲ್ಲಿ ಹಿರಿಯ ಆಜೀವ ಸದಸ್ಯರಿಗೆ ಸನ್ಮಾನ ಸಮಾರಂಭ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು.
ನಾದಬ್ರಹ್ಮ ಸಾಂಸ್ಕೃತೀಕ ಸಾಮಾಜಿಕ ಜಾಗೃತಿ ಕಲಾ ಸಂಸ್ಥೆಯಿಂದ ಸಂಗೀತ ಕಾರ್ಯಕ್ರಮ ಜರುಗಿತು.