ಡಿಜಿಟಲ್‌ ವ್ಯವಸ್ಥೆ ಜನಸ್ನೇಹಿ ಆಡಳಿತಕ್ಕೆ ಪೂರಕ: ಸಚಿವ ಕೃಷ್ಣ ಬೈರೇಗೌಡ

| Published : Sep 04 2024, 01:45 AM IST

ಸಾರಾಂಶ

ಜಮೀನು ಮಾಲಿಕತ್ವ ವನ್ನು ವಾರಸುದಾರರಿಗೆ ಮಾಡಿಕೊಡುವ ಫವತಿ ಖಾತೆ ಆಂದೋಲನಕ್ಕೆ ಮೊದಲ ಪ್ರಾಶಸ್ತ್ಯ ನೀಡಿ ಕಾರ್ಯರೂಪಕ್ಕೆ ತಂದು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಕಂದಾಯ ಅಧಿಕಾರಿಗಳಿಗೆ ಸೂಚಿಸಿದರು. ದೊಡ್ಡಬಳ್ಳಾಪುರದಲ್ಲಿ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆ । ಜಿಲ್ಲೆಯಲ್ಲಿ ಫವತಿ ಖಾತೆ ಆಂದೋಲನಕ್ಕೆ ಕ್ರಮ । ಮುಕ್ತ ಅಭಿಯಾನಕ್ಕೆ ನಿರ್ದಿಷ್ಟ ಕಾಲಮಿತಿ

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ / ಕುಂದಾಣ

ಬಹು ಮಾಲಿಕತ್ವ ಹೊಂದಿರುವ ಖಾಸಗಿ ಜಮೀನುಗಳ ಪೋಡಿ ಕಾರ್ಯ, ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿನ ದರಾಖಾಸ್ತು ಪೋಡಿ ಕಾರ್ಯ ಹಾಗೂ ಜಮೀನು ಮಾಲಿಕತ್ವ ವನ್ನು ವಾರಸುದಾರರಿಗೆ ಮಾಡಿಕೊಡುವ ಫವತಿ ಖಾತೆ ಆಂದೋಲನಕ್ಕೆ ಮೊದಲ ಪ್ರಾಶಸ್ತ್ಯ ನೀಡಿ ಕಾರ್ಯರೂಪಕ್ಕೆ ತಂದು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಕಂದಾಯ ಅಧಿಕಾರಿಗಳಿಗೆ ಸೂಚಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾಪಂಚಾಯತ್ ಸಭಾಂಗಣದಲ್ಲಿ ಜಿಲ್ಲೆಯ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಈಗಾಗಲೇ ಸರ್ಕಾರಿ ಜಮೀನುಗಳ ಸರ್ವೆ ಕಾರ್ಯ ಮುಗಿಸಿ ಶೇಕಡ 98ರಷ್ಟು ಸರ್ಕಾರಿ ಜಮೀನು ಗುರ್ತಿಸಲಾಗಿದೆ. ಸರ್ಕಾರಿ ಹಾಗೂ ಖಾಸಗಿ ಮಾಲೀಕತ್ವದ ಒಂದೇ ಪಹಣಿಯಲ್ಲಿನ ಖಾತೆಗಳನ್ನು ಪೋಡಿ ಮಾಡಲು, ಖಾಸಗಿ ಜಂಟಿ ಮಾಲಿಕತ್ವ ದ ಖಾತೆಗಳನ್ನು ಪೋಡಿ ಮಾಡಲು ಜಿಲ್ಲೆಯಾದ್ಯಂತ ಸರ್ವೇ ಕಾರ್ಯ ನಡೆಯುತ್ತಿದೆ. ಅಂದಾಜು 45,000 ಬಹುಮಾಲಿಕತ್ವದ ಪಹಣಿಗಳು ಬಾಕಿ ಇದ್ದು ಹಂತ ಹಂತವಾಗಿ ಸರ್ವೆ ಕಾರ್ಯ ಮುಗಿಸಿ ಪೋಡಿ ಮಾಡುವಂತೆ ತಿಳಿಸಿದರು.

ಮೊದಲ ಹಂತವಾಗಿ ಈ ತಿಂಗಳಲ್ಲಿ 5 ಗ್ರಾಮಗಳನ್ನು ದರಖಾಸ್ತು ಪೋಡಿ ಆಂದೋಲನಕ್ಕೆ ಆಯ್ಕೆ ಮಾಡಿಕೊಂಡ ಕಾರ್ಯಾರಂಭ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸರ್ಕಾರಿ ಜಮೀನು ಒತ್ತುವರಿ ತೆರವು ಕಾರ್ಯ ಶೀಘ್ರವಾಗಿ ಆಗಬೇಕು. ಸ್ಮಶಾನ ಹಾಗೂ ಕೆರೆ ಒತ್ತುವರಿ ತೆರವು ತ್ವರಿತವಾಗಿ ಪೂರ್ಣಗೊಳಿಸಿ. ಸ್ಮಶಾನ ಜಾಗವನ್ನು ಸರ್ವೆ ಕಾರ್ಯ ಮಾಡಿಸಿದ ನಂತರ ನರೇಗಾ ಯೋಜನೆ ಮುಖಾಂತರ ಕಾಂಪೌಂಡ್ ನಿರ್ಮಿಸಿ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಗೆ ಒಪ್ಪಿಸಿ , ಗ್ರಾಮ ಪಂಚಾಯಿತಿ ಸ್ವತ್ತು ಎಂದು ನಾಮಫಲಕ ಅಳವಡಿಸಿ ಎಂದರು.

ಡಿಜಿಟಲೀಕರಣಕ್ಕೆ ಒತ್ತು:

ತಂತ್ರಜ್ಞಾನವನ್ನು ಬಳಸಿ ಇ-ಆಫೀಸ್, ಇ- ಗೌರ್ನೆಸ್ ಮೂಲಕ ಕಂದಾಯ ಇಲಾಖೆಯಡಿ ಬರುವ ಎಲ್ಲಾ ಕಾರ್ಯಗಳನ್ನು ಡಿಜಿಟಲೀಕರಣ ಮಾಡಲಾಗುವುದು. ಇದರಿಂದ ಕೆಲಸದ ಒತ್ತಡ ಸರಳೀಕರಣ ವಾಗಲಿದೆ. ಮುಂದುವರೆದು ಎಲ್ಲಾ ಜಮೀನುಗಳ ದಾಖಲೆಗಳು ಆನ್ಲೈನ್ ಲ್ಲಿ ಸಿಗುವಂತೆ ಡಿಜಿಟಲೀಕರಣ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 1993 ಸರ್ವೆ ನಂಬರ್ ಗಳ ಪೈಕಿ 589 ಸರ್ವೆ ನಂಬರ್ ಗಳು ಡಿಜಿಟಲೀಕರಣಗೊಳಿಸಲಾಗಿದೆ. ಬಾಕಿ ಇರುವ 1404 ಸರ್ವೆ ನಂಬರ್ ಗಳನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಪಹಣಿಗೆ ಆಧಾರ್ ಜೋಡಣೆ:

ಜಿಲ್ಲೆಯಲ್ಲಿ 7,29,567 ಜಮೀನು ಮಾಲೀಕರರು ಆಧಾರ್ ಜೋಡಣೆ ಮಾಡಬೇಕಿದೆ, ಇದುವರೆಗೂ 2,94,856 ಜಮೀನು ಮಾಲೀಕರು ಪಹಣಿಗೆ ಆಧಾರ್ ಜೋಡಣೆ ಮಾಡಿಸಿದ್ದಾರೆ. 82,264 ಜಮೀನುಗಳು ಮರಣ ಹೊಂದಿದವರ ಹೆಸರಿನಲ್ಲೇ ಇವೆ. ಶೇಕಡ 79.88 ರಷ್ಟು ಆಧಾರ್ ಜೋಡಣೆ ಪ್ರಗತಿ ಸಾಧಿಸಲಾಗಿದೆ. ನ್ಯಾಯಾಂಗ ವ್ಯಾಜ್ಯದಲ್ಲಿರುವ ಜಮೀನುಗಳು ಮಾತ್ರ ಬಿಟ್ಟು, ಉಳಿದೆಲ್ಲ ಜಮೀನುಗಳ ಕುಟುಂಬದವರ ಸಂಪರ್ಕ ಸಾಧಿಸಿ ಜಂಟಿಯಾಗಿ (ಇ-ಖಾತೆಯನ್ನು) ಹೆಸರು ನೋಂದಣಿ ಕಡ್ಡಾಯವಾಗಿ ಮಾಡಿಸಿಕೊಡಲು ಸಂಬಂಧಪಟ್ಟ ಅಧಿಕಾರಿಗಳು ಕಾರ್ಯನಿರತರಾಗಬೇಕು ಎಂದು ಸೂಚಿಸಿದರು.

ತಹಶೀಲ್ದಾರ್ ನ್ಯಾಯಾಲಯ, ಎಸಿ ನ್ಯಾಯಾಲಯ ಹಾಗೂ ಜಿಲ್ಲಾಧಿಕಾರಿ ನ್ಯಾಯಾಲಯ ಗಳಲ್ಲಿ ದಾಖಲಾಗಿರುವ ಪ್ರಕರಣಗಳನ್ನು ನಿಗದಿತ ಕಾಲಮಿತಿಯಲ್ಲಿ ಇತ್ಯರ್ಥಪಡಿಸಬೇಕು. ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಅಡಿಯಲ್ಲಿ ದಾಖಲಾಗುವ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದು ಹೆಚ್ಚುವರಿ ಉಪವಿಭಾಗಾಧಿಕಾರಿಯನ್ನು ನೇಮಿಸಲಾಗಿದ್ದು ಪ್ರಕರಣಗಳನ್ನು ಇಬ್ಬರಿಗೆ ಹಂಚಿಕೆ ಮಾಡಿ ಶೀಘ್ರ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಕ್ರಮ ವಹಿಸಲಾಗುವುದು ಎಂದರು.

ಕಂದಾಯ ಇಲಾಖೆಯನ್ನು ಮಾತೃ ಇಲಾಖೆ ಎಂದು ಕರೆಯಲಾಗುತ್ತದೆ. ಕಂದಾಯ ಇಲಾಖೆ ಅಧಿಕಾರಿಗಳು ಇದನ್ನು ಅರಿತು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಜನರ ನಿರೀಕ್ಷೆಯನ್ನು ಹುಸಿಗೊಳಿಸದೇ ಜನರ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸಿ ಪರಿಹಾರ ಒದಗಿಸುವಲ್ಲಿ ನಿರಂತರ ಕಾರ್ಯಪ್ರವೃತ್ತರಾಗಿರಬೇಕು ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ, ವಿಧಾನಪರಿಷತ್‌ ಸದಸ್ಯ ಎಸ್.ರವಿ, ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್, ಕಂದಾಯ ಇಲಾಖೆಯ ಆಯುಕ್ತ ಪೊಮ್ಮಲ್ ಸುನಿಲ್ ಕುಮಾರ್, ಭೂ ಮಾಪನ ಮತ್ತು ಕಂದಾಯ ವ್ಯವಸ್ಥೆಯ ಆಯುಕ್ತ ಜೆ.ಮಂಜುನಾಥ, ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಕೆ.ಬಿ.ಶಿವಕುಮಾರ್, ಅಟಲ್ ಜಿ ಜನಸ್ನೇಹಿ ಕೇಂದ್ರ ಯೋಜನೆ ನಿರ್ದೇಶಕ ಭೋಯಾರ್ ಹರ್ಷಲ್ ನಾರಾಯಣರಾವ್, ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್, ಅಪರ ಜಿಲ್ಲಾಧಿಕಾರಿ ಅಮರೇಶ್.ಹೆಚ್, ಉಪವಿಭಾಗಾಧಿಕಾರಿ ದುರ್ಗಶ್ರೀ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ತಾಲೂಕು ತಹಶೀಲ್ದಾರ್, ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಪಹಣಿಗೆ ಆಧಾರ ಜೋಡಣೆ ಮಾಡುವದರಿಂದ ಯಾರದೋ ಜಮೀನು ಇನ್ಯಾರೋ ಮಾರಾಟ ಮಾಡುವ ವಂಚನೆ ತಪ್ಪಿಸಲು ಸಹಕಾರಿಯಾಗಿದ್ದು, ರೈತರು ಬೇಗನೆ ತಮ್ಮ ಜಮೀನು ಪಹಣಿಗೆ ಆಧಾರ ಜೋಡಣೆ ಮಾಡಿಕೊಳ್ಳಬೇಕು.

ಕೃಷ್ಣ ಬೈರೇಗೌಡ, ಕಂದಾಯ ಸಚಿವ.