ಒನ್ ಟ್ಯಾಕ್, ಮಣಿಪಾಲ್ ಸ್ಕೂಲ್ ಆಫ್ ಕಮ್ಯುನಿಕೇಷನ್ ಮತ್ತು ಉಡುಪಿ ಟೂರಿಸಂ ಸಹಭಾಗಿತ್ವದಲ್ಲಿ ಕ್ರಿಯೇಟರ್ಸ್ ಲ್ಯಾಬ್ ಉಡುಪಿ ಇವರ ಸಹಯೋಗದಲ್ಲಿ ಉಡುಪಿ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದಕ್ಕಾಗಿ ಡಿಜಿಟಲ್ ಮಾಧ್ಯಮವನ್ನು ಬ‍ಳಸಲು ಜಿಲ್ಲಾಡಳಿತ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಹೇಳಿದರು.

ಉಡುಪಿ: ಒನ್ ಟ್ಯಾಕ್, ಮಣಿಪಾಲ್ ಸ್ಕೂಲ್ ಆಫ್ ಕಮ್ಯುನಿಕೇಷನ್ ಮತ್ತು ಉಡುಪಿ ಟೂರಿಸಂ ಸಹಭಾಗಿತ್ವದಲ್ಲಿ ಕ್ರಿಯೇಟರ್ಸ್ ಲ್ಯಾಬ್ ಉಡುಪಿ ಇವರ ಸಹಯೋಗದಲ್ಲಿ ಉಡುಪಿ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದಕ್ಕಾಗಿ ಡಿಜಿಟಲ್ ಮಾಧ್ಯಮವನ್ನು ಬ‍ಳಸಲು ಜಿಲ್ಲಾಡಳಿತ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಹೇಳಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಒನ್ ಟ್ಯಾಕ್, ಮಣಿಪಾಲ್ ಸ್ಕೂಲ್ ಆಫ್ ಕಮ್ಯುನಿಕೇಷನ್ ಮತ್ತು ಉಡುಪಿ ಟೂರಿಸಂ ಸಂಘದ ಸಹಭಾಗಿತ್ವದಲ್ಲಿ ಉಡುಪಿ ಕ್ರಿಯೇಟರ್ಸ್ ಲ್ಯಾಬ್ ಸಹಯೋಗದಲ್ಲಿ ನಡೆದ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿರುವ ಬೀಚ್‌ಗಳು, ಜಲಕ್ರೀಡೆ, ಆಯುರ್ವೇದ ಪ್ರವಾಸೋದ್ಯಮ, ಸ್ಥಳೀಯ ಆಹಾರ ಪದ್ಧತಿ, ಪ್ರಾಕೃತಿಕ ಸ್ಥಳಗಳು, ಧಾರ್ಮಿಕ ಸ್ಥಳಗಳು, ಇಲ್ಲಿನ ಸಂಸ್ಕೃತಿ, ಪರಂಪರೆ, ಆಹಾರ ಶೈಲಿ ಮತ್ತು ಧಾರ್ಮಿಕತೆ ಬಗ್ಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಪ್ರಚಾರ ನೀಡಬೇಕಾಗಿದೆ. ಅದಕ್ಕಾಗಿ ಡಿಜಿಟಲ್ ಮಾಧ್ಯಮವನ್ನು ಬಳಸಲಾಗುವುದು. ಕ್ರಿಯೇಟರ್ಸ್ ಲ್ಯಾಬ್ ಉಡುಪಿ ಸಂಸ್ಥೆಯು ರಾಷ್ಟ್ರೀಯ ಮಟ್ಟದಲ್ಲಿ ಡಿಜಿಟಲ್ ಕಂಟೆಂಟ್‌ಗಳನ್ನು ತಯಾರಿಸುತ್ತಿದೆ. ಇದರಲ್ಲಿ ವಿದ್ಯಾರ್ಥಿಗಳು, ಕಂಟೆಂಟ್ ಕ್ರಿಯೇಟರ್ಸ್ ಭಾಗವಹಿಸಿ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಮಾಹಿತಿ ನೀಡುವ ಫೋಟೋ ಮತ್ತು ವೀಡಿಯೋಗಳನ್ನು ಹಂಚಿಕೊಳ್ಳುವ ಅವಕಾಶ ಇದೆ ಎಂದರು. ವಿದ್ಯಾರ್ಥಿಗಳು ಉಡುಪಿ ಜಿಲ್ಲೆಯ ಬಗ್ಗೆ ಅತ್ಯಪೂರ್ವ ಕಥಾವಸ್ತು, ಸಾಂಸ್ಕೃತಿಕ ಸಾಕ್ಷ್ಯಚಿತ್ರ, ಫೋಟೋಗಳು ಅಥವಾ

ವೀಡಿಯೋಗಳನ್ನು ತಯಾರಿಸಿ ಹಂಚಿಕೊಳ್ಳಬಹುದು. ಅತ್ಯುತ್ತಮ ಗುಣಮಟ್ಟದ ಕಂಟೆಂಟ್‌ಗಳಿಗೆ ಬೆಸ್ಟ್ ವಿಡಿಯೋ, ಫೋಟೋ ಮೆಮೊಯಿರ್ ಮತ್ತು ಬೆಸ್ಟ್ ಸ್ಟೋರಿ ವಿಭಾಗದಲ್ಲಿ ಪ್ರತಿ ತಿಂಗಳೂ ಪ್ರಶಸ್ತಿ ನೀಡುವ ಜೊತೆ ಸ್ಟೋರಿ ಆಫ್ ದ ಇಯರ್, ಎಮರ್ಜಿಂಗ್ ಸ್ಟೋರಿ ಟೆಲ್ಲರ್ ಹಾಗೂ ಕಲ್ಚರಲ್ ಡಾಕ್ಯುಮೆಂಟೇಶನ್ ವಿಭಾಗದಲ್ಲಿ ವಾರ್ಷಿಕ ಪ್ರಶಸ್ತಿಯನ್ನೂ ನೀಡಲಾಗುವುದು ಎಂದರು.

ಮೊದಲಿಗೆ ಒಂದು ಕಾಲೇಜಿನಲ್ಲಿ ಕ್ರಿಯೇಟರ್ಸ್ ಲ್ಯಾಬ್ ಅನ್ನು ಸ್ಥಾಪಿಸಲಾಗುವುದು. ಮುಂದಿನ ದಿನಗಳಲ್ಲಿ ಇತರ ಕಾಲೇಜುಗಳಿಗೆ ವಿಸ್ತರಿಸಲಾಗುವುದು ಎಂದರು.

ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕಿ ವಿಂಧ್ಯಾ, ಮೈತ್ರೇಯಿ ಆಯುರ್ವೇದ ಆಸ್ಪತ್ರೆಯ ತನ್ಮಯ ಗೋಸ್ವಾಮಿ, ಮಾಹೆ ಎಂಐಸಿ ನಿರ್ದೇಶಕಿ ಶುಭಾ ಎಚ್.ಎಸ್. ಮತ್ತಿತರರು ಪಾಲ್ಗೊಂಡಿದ್ದರು.