ಹಳೆಯ ಭೂ ದಾಖಲೆಗಳ ಸಂರಕ್ಷಣೆಗೆ ಡಿಜಟಲೀಕರಣ

| Published : Jan 17 2025, 12:45 AM IST

ಸಾರಾಂಶ

ಕನಕಪುರ: ಕಂದಾಯ ಇಲಾಖೆಯ ಭೂಮಿ, ಸರ್ವೆ ಮತ್ತು ನೋಂದಣಿ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಗಣಕೀಕರಣಗೊಳಿಸಲು ಭೂ ಸುರಕ್ಷಾ ಯೋಜನೆ ರೂಪಿಸಲಾಗಿದೆ ಎಂದು ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.

ಕನಕಪುರ: ಕಂದಾಯ ಇಲಾಖೆಯ ಭೂಮಿ, ಸರ್ವೆ ಮತ್ತು ನೋಂದಣಿ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಗಣಕೀಕರಣಗೊಳಿಸಲು ಭೂ ಸುರಕ್ಷಾ ಯೋಜನೆ ರೂಪಿಸಲಾಗಿದೆ ಎಂದು ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.

ನಗರದ ತಾಲೂಕು ಕಚೇರಿಯಲ್ಲಿ ಹಳೆಯ ಭೂ ದಾಖಲೆಗಳನ್ನು ಉಳಿಸಿ ಸಂರಕ್ಷಿಸುವ ಉದ್ದೇಶದಿಂದ ದಾಖಲೆಗಳನ್ನು ಗಣೀಕೀಕೃತ ಮಾಡುವ ಮಹತ್ವದ ಭೂ ಸುರಕ್ಷಾ ಯೋಜನೆಯ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಶಾಸಕರು, ಭೂ ಸುರಕ್ಷಾ ಯೋಜನೆ ಇತಿಹಾಸದ ಪುಟಗಳಲ್ಲಿ ಬರೆಯುವಂತಹ ಮಹತ್ವದ ಯೋಜನೆಯಾಗಿದೆ ಎಂದು ಹೇಳಿದರು.

ಶಿಥಿಲಾವಸ್ಥೆಯಲ್ಲಿರುವ ದಾಖಲೆಗಳನ್ನು ಶಾಶ್ವತವಾಗಿ ಉಳಿಸಿ, ನಕಲಿ ದಾಖಲೆಗಳನ್ನು ಸೃಷ್ಟಿಸಲು ಅವಕಾಶವಿಲ್ಲದಂತೆ ಗಣಕೀಕೃತ ದಾಖಲೆಗಳನ್ನು ನಾಗರಿಕರು, ಸ್ವತಃ ಆನ್‌ಲೈನ್‌ನಲ್ಲಿ ಪಡೆದುಕೊಳ್ಳಲು ಅನುವಾಗುವಂತೆ ಭೂ ಸರುಕ್ಷಾ ಯೋಜನೆಯನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿದೆ ಎಂದು ತಿಳಿಸಿದರು.

ರೈತರು, ಸಾರ್ವಜನಿಕರು, ಭೂ ಮಾಪನ ಇಲಾಖೆ ಮತ್ತು ಕಂದಾಯ ಇಲಾಖೆಗಳಲ್ಲಿ ಕೆಲವು ದಾಖಲಾತಿಗಳನ್ನು ಪಡೆಯಲು ತಾಲೂಕು ಕಚೇರಿಗೆ ಅರ್ಜಿ ನೀಡಿ ಅಲೆದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಅದನ್ನು ತಪ್ಪಿಸುವ ಸಲುವಾಗಿ ಆಧುನಿಕ ಯಂತ್ರಗಳನ್ನು ಬಳಸಿ ನಿಮ್ಮ ಮೊಬೈಲ್‌ಗಳಲ್ಲೆ ಭೂ ದಾಖಲೆಗಳನ್ನು ನೋಡುವಂತಹ ಯೋಜನೆಯನ್ನು ತರಲಾಗುತ್ತಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ. ಭೂ ದಾಖಲೆಗಳ ಕಳ್ಳತನ, ಅದಲು ಬದಲು, ಕಳೆದು ಹೋದ ಕಡತಗಳು ಹೀಗೆ ಹಲವಾರು ತಾಂತ್ರಿಕ ದೋಷಗಳಿಂದ ದಾಖಲಾತಿ ಸಿಗದೆ ಅರ್ಜಿದಾರರಿಗೆ ಹಿಂಬರಹ ನೀಡುವಂತಹ ಪ್ರಕರಣಗಳು ಹೆಚ್ಚಾಗಿದ್ದವು. ಪಾರದರ್ಶಕವಾಗಿ ಎಲ್ಲಾ ರೈತರು ತಮ್ಮ ಆಸ್ತಿ ವಿವರಗಳನ್ನು ಪಡೆಯುವಂತಹ ಯೋಜನೆಯನ್ನು ಕಂದಾಯ ಇಲಾಖೆಯ ಮುಖಾಂತರ ಜಾರಿಗೆ ತರಲಾಗಿದೆ ಎಂದು ಇಕ್ಬಾಲ್ ಹುಸೇನ್ ಹೇಳಿದರು.

ದಾಖಲಾತಿಗಳು ಸುರಕ್ಷಿತವಾಗಿ ಸಂರಕ್ಷಿಸುವ ಉದ್ದೇಶವಾಗಿದೆ. ಸರ್ವೆ ಮತ್ತು ಕಂದಾಯ ಇಲಾಖೆಯ ಎಲ್ಲ ಭೂ ದಾಖಲೆಗಳನ್ನು ಆರು ತಿಂಗಳುಗಳಲ್ಲಿ ಡಿಜಿಟಲೀಕರಣ ಮಾಡಲಾಗುವುದು ಎಂದು ತಹಸೀಲ್ದಾರ್ ಶಿವಕುಮಾರ್ ಭರವಸೆ ನೀಡಿದ್ದಾರೆ ಎಂದು ಇಕ್ಬಾಲ್ ಹುಸೇನ್ ತಿಳಿಸಿದರು.

ತಹಸೀಲ್ದಾರ್ ಶಿವಕುಮಾರ್ ಮಾತನಾಡಿ, ಹಾರೋಹಳ್ಳಿ ಹೊಸ ತಾಲೂಕು ರಚನೆಯಾದ ನಂತರ ಸಾಕಷ್ಟು ಕಡತಗಳು ಕನಕಪುರ ಭೂ ದಾಖಲೆಗಳ ಕಚೇರಿಯಲ್ಲೇ ಉಳಿದಿದೆ. ಹಾರೋಹಳ್ಳಿಯಲ್ಲಿ ಸ್ಥಳಾವಕಾಶದ ಕೊರತೆ ಇರುವುದರಿಂದ ಕನಕಪುರದ ಕಚೇರಿಯಲ್ಲಿಯೇ ಎಲ್ಲ ದಾಖಲಾತಿಗಳನ್ನು, ಪೊಲೀಸ್ ಬಿಗಿ ಭದ್ರತೆಯಲ್ಲಿ ಡಿಜಿಟಲೀಕರಣ ಮಾಡಲಾಗುವುದು ಎಂದು ತಿಳಿಸಿದರು.

ಜಿಪಂ ಮಾಜಿ ಸದಸ್ಯ ಎಚ್.ಕೆ.ನಾಗರಾಜು, ಹಾರೋಹಳ್ಳಿ ತಾಲೂಕು ವಿಎಸ್‌ಎಸ್‌ಎನ್‌ ಅಧ್ಯಕ್ಷ ಸೋಮಣ್ಣ, ಜಿಪಂ ಮಾಜಿ ಸದಸ್ಯ ಎಚ್.ಕೆ.ನಾಗರಾಜು(ಜೆಸಿಬಿ ಅಶೋಕ್), ಸದಸ್ಯ ಬೆಣಚಕಲ್ಲು ದೊಡ್ಡಿ ರುದ್ರೇಶ್, ತಾಪಂ ಮಾಜಿ ಸದಸ್ಯ ಶಿವಾನಂದ, ಬಾಲಾಜಿ, ನ್ಯಾಮತ್, ಡಿಟಿಒ ಮನೋಹರ್, ಗ್ರಾಮ ಲೆಕ್ಕಾಧಿಕಾರಿ ರವಿಕುಮಾರ್, ಶಬ್ದಾರ್ ಹುಸೈನ್ ಮತ್ತಿತರರು ಹಾಜರಿದ್ದರು.

16ಕೆಆರ್ ಎಂಎನ್ 4.ಜೆಪಿಜಿ

ಕನಕಪುರ ತಾಲೂಕು ಕಚೇರಿಯಲ್ಲಿ ಭೂ ಸುರಕ್ಷಾ ಯೋಜನೆಯ ಕಚೇರಿಯನ್ನು ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಉದ್ಘಾಟಿಸಿ ಕರಪತ್ರ ಪ್ರದರ್ಶಿಸಿದರು. ತಹಸೀಲ್ದಾರ್ ಶಿವಕುಮಾರ್, ಜಿಪಂ ಮಾಜಿ ಸದಸ್ಯ ಎಚ್.ಕೆ.ನಾಗರಾಜು, ಜಿಪಂ ಮಾಜಿ ಸದಸ್ಯ ಎಚ್.ಕೆ.ನಾಗರಾಜು ಇತರರಿದ್ದರು.