ರಾಜ್ಯದಲ್ಲಿ ಭೂ ದಾಖಲೆಗಳ ಸಂಪೂರ್ಣ ಡಿಜಿಟಲೀಕರಣ ಮಾಡುವ ‘ಭೂ ಸುರಕ್ಷಾ ಯೋಜನೆ’ ಭಾಗವಾಗಿ ಉಪ ವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ದಾಖಲೆಗಳನ್ನು ಸ್ಕ್ಯಾನಿಂಗ್ ಮಾಡುವ ಕಾರ್ಯಕ್ಕೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಸೋಮವಾರ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯದಲ್ಲಿ ಭೂ ದಾಖಲೆಗಳ ಸಂಪೂರ್ಣ ಡಿಜಿಟಲೀಕರಣ ಮಾಡುವ ‘ಭೂ ಸುರಕ್ಷಾ ಯೋಜನೆ’ ಭಾಗವಾಗಿ ಉಪ ವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ದಾಖಲೆಗಳನ್ನು ಸ್ಕ್ಯಾನಿಂಗ್ ಮಾಡುವ ಕಾರ್ಯಕ್ಕೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಸೋಮವಾರ ಚಾಲನೆ ನೀಡಿದರು.ಭೂ ಸುರಕ್ಷಾ ಯೋಜನೆ ಅಡಿ ಕಳೆದ ವರ್ಷ ಜನವರಿಯಲ್ಲಿ ಎಲ್ಲಾ ತಾಲೂಕು ಕಚೇರಿಗಳ ಮೂಲ ಭೂ ದಾಖಲೆಗಳನ್ನೂ ಸ್ಕ್ಯಾನ್ ಮಾಡಿ ಡಿಜಿಟಲೀಕರಣ ಮಾಡುವ ಕೆಲಸಕ್ಕೆ ಚಾಲನೆ ನೀಡಲಾಗಿತ್ತು.
ಇದೀಗ ಉಪ ವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ದಾಖಲೆಗಳ ಸ್ಕ್ಯಾನಿಂಗ್‌ಗೆ ಚಾಲನೆ ನೀಡಲಾಗಿದೆ. ಮೂರು ತಿಂಗಳಲ್ಲಿ ಕೆಲಸ ಮುಗಿಯಲಿದ್ದು, 150 ಕೋಟಿ ರು. ವೆಚ್ಚದ ಕಾರ್ಯಕ್ರಮದಲ್ಲಿ ಈಗಾಗಲೇ 100 ಕೋಟಿ ರು. ಖರ್ಚಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.ಬೆಂಗಳೂರು ಉತ್ತರ ಮತ್ತು ದಕ್ಷಿಣ ಉಪವಿಭಾಗಾಧಿಕಾರಿಗಳ ಕಚೇರಿಯ ಕಂದಾಯ ದಾಖಲಾತಿಗಳ ಸ್ಕ್ಯಾನಿಂಗ್ ಮತ್ತು ಡಿಜಿಟಲೀಕರಣ ಕಾರ್ಯಕ್ಕೆ ಕಂದಾಯಭವನದಲ್ಲಿ ಚಾಲನೆ ನೀಡಿ ಮಾತನಾಡಿದರು.
ಭೂ ದಾಖಲೆಗಳಲ್ಲಿ ನಕಲಿ ಎಂಟ್ರಿಗಳು ಹಾಗೂ ಸುಳ್ಳು ದಾಖಲೆಗಳ ಸೃಷ್ಟಿ ತಡೆಯುವ ಸಲುವಾಗಿ ಭೂ ದಾಖಲೆಗಳ ಡಿಜಿಟಲೀಕರಣ ಮಾಡಲಾಗುತ್ತಿದೆ. ಈವರೆಗೆ 240 ತಾಲೂಕುಗಳ ಪೈಕಿ 70 ತಾಲೂಕುಗಳಲ್ಲಿ ಗಣಕೀಕರಣ ಪೂರ್ಣಗೊಳಿಸಲಾಗಿದೆ. ರಾಜ್ಯಾದ್ಯಂತ 100 ಕೋಟಿ ಪುಟಗಳಷ್ಟು ಭೂ ದಾಖಲೆ ಇದ್ದು, 62 ಕೋಟಿ ಪುಟಗಳನ್ನು ಈಗಾಗಲೇ ಸ್ಕ್ಯಾಬ್ ಮಾಡಲಾಗಿದೆ. ಮುಂದಿನ ಮೂರು-ನಾಲ್ಕು ತಿಂಗಳಲ್ಲಿ ಎಲ್ಲಾ ಪುಟಗಳನ್ನೂ ಸ್ಕ್ಯಾನ್ ಮಾಡಲಾಗುವುದು ಎಂದರು.ಇಂದು ಉಪ ವಿಭಾಗಾಧಿಕಾರಿ ಕಚೇರಿಗಳ (ಎಸಿ) ದಾಖಲೆ ಸ್ಕ್ಯಾನಿಂಗ್‌ಗೆ ಸಾಂಕೇತಿಕವಾಗಿ ಚಾಲನೆ ನೀಡುತ್ತಿದ್ದು, ಈ ಮೂಲಕ ಇಡೀ ರಾಜ್ಯಾದ್ಯಂತ ಎಸಿ ಹಾಗೂ ಡಿಸಿ ಕಚೇರಿಗಳ ಕಂದಾಯ ದಾಖಲೆಗಳ ಗಣಕೀಕರಣ ಶುರು ಮಾಡಲಾಗಿದೆ ಎಂದು ಕೃಷ್ಣಬೈರೇಗೌಡ ಹೇಳಿದ್ದಾರೆ.
ಅಗತ್ಯಬಿದ್ದರೆ ಫೋರೆನ್ಸಿಕ್ ಲ್ಯಾಬ್‌ಗೆ:ಈ ಹಿಂದೆ ಪತ್ತೆಯಾಗಿರುವ ನಕಲಿ ದಾಖಲೆಗಳ ಸೃಷ್ಟಿ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಪ್ರತಿಯೊಂದು ಅನುಮಾನಾಸ್ಪದ ಪ್ರಕರಣಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಅಗತ್ಯವಿದ್ದಲ್ಲಿ ಫೋರೆನ್ಸಿಕ್ ಲ್ಯಾಬ್‌ಗೆ ಕಳಿಸಿ ದಾಖಲೆಗಳ ನೈಜತೆ ಕುರಿತು ವರದಿ ಪಡೆದು ಸೂಕ್ತ ಕ್ರಮ ವಹಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಕೃಷ್ಣಬೈರೇಗೌಡ ಉತ್ತರಿಸಿದರು.
ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಠಾರಿಯಾ, ಬೆಂಗಳೂರು ಜಿಲ್ಲಾಧಿಕಾರಿ ಜಗದೀಶ್ ಹಾಜರಿದ್ದರು.ನಕಲಿ ದಾಖಲೆ ಸ್ಕ್ಯಾನ್: 16 ಮಂದಿ ಮೇಲೆ ಕೇಸ್:ಆನೇಕಲ್, ದೇವನಹಳ್ಳಿ ಸೇರಿ ಕೆಲ ತಾಲೂಕುಗಳಲ್ಲಿ ನಕಲಿ ದಾಖಲೆಗಳನ್ನೂ ಸ್ಕ್ಯಾನ್ ಮಾಡಿರುವ ದೂರುಗಳು ಬಂದಿವೆ. ಇಂಥ ಪ್ರಕರಣದಲ್ಲಿ 16 ಮಂದಿ ಮೇಲೆ ಎಫ್ಐಆರ್ ದಾಖಲಿಸಿದ್ದು, ಇಂಥ ಅಕ್ರಮಗಳನ್ನು ನಿಯಂತ್ರಿಸಲಾಗುವುದು. ಸ್ಕ್ಯಾನಿಂಗ್ ನಂತರ ಯಾವುದೇ ವಂಚನೆಗೆ ಅವಕಾಶ ಇಲ್ಲ ಎಂದು ಸಚಿವ ಕೃಷ್ಣಬೈರೇಗೌಡ ಹೇಳಿದರು.