ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಉಡುಪಿ ಜಿಲ್ಲೆಯು ಗಣತಿ ನಮೂನೆ (ಎನುಮರೇಶನ್ ಫಾರಂ)ಗಳ ಡಿಜಿಟಲೀಕರಣದಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದು ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಶ್ಲಾಘಿಸಿದರು.
ಉಡುಪಿ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಉಡುಪಿ ಜಿಲ್ಲೆಯು ಗಣತಿ ನಮೂನೆ (ಎನುಮರೇಶನ್ ಫಾರಂ)ಗಳ ಡಿಜಿಟಲೀಕರಣದಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದು ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಶ್ಲಾಘಿಸಿದರು.ಶನಿವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿ ನಡೆದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಎಸ್.ಐ.ಆರ್ ಕಾರ್ಯಗಳ ಪ್ರಗತಿ ಪರಿಶೀಲಿಸಿ ಮಾತನಾಡುತ್ತಿದ್ದರು.
ಅವರು ಶೇ 100 ಎನುಮರೇಶನ್ ಫಾರಂ ಡಿಜಿಟಲಿಕರಣವನ್ನು ಪೂರ್ಣಗೊಳಿಸಿದಂತಹ ಬಿಎಲ್‌ಓಗಳಾದ ಬೈಂದೂರು ಕ್ಷೇತ್ರದ ಪವಿತ್ರ ಪೂಜಾರಿ, ಕುಂದಾಪುರ ಕ್ಷೇತ್ರದ ಲಕ್ಷ್ಮೀ ಶೆಟ್ಟಿ, ಉಡುಪಿ ಕ್ಷೇತ್ರದ ಪ್ರಸನ್ನಿ, ಕಾಪು ಕ್ಷೇತ್ರದ ಹೇಮಾ ಪೂಜಾರಿ, ಕಾರ್ಕಳ ಕ್ಷೇತ್ರದ ಜ್ಯೋತಿ ರಾವ್ ಸೇರ್ವೆಗಾರ್ ಅವರಿಗೆ ಅಭಿನಂದನಾ ಪತ್ರವನ್ನು ನೀಡಿ ಗೌರವಿಸಿದರು. ನಂತರ ನಾತನಾಡಿದ ಅವರು, 2002 ರ ಮತದಾರರ ಪಟ್ಟಿಯಲ್ಲಿ ಮ್ಯಾಪಿಂಗ್ ಆಗದವರು ಸಹ ತಮ್ಮ ವೈಯಕ್ತಿಕ ವಿವರಗಳನ್ನು ಏನ್ಯೂಮರೇಷನ್ ಫಾರ್ಮ್‌ನ ಕೊನೆಯ ಕಾಲಂನಲ್ಲಿ ಭರ್ತಿ ಮಾಡಿ, ಬಿ.ಎಲ್.ಓ.ಗಳಿಗೆ ನೀಡಬೇಕು, ಬಿ.ಎಲ್.ಓ.ಗಳು ಮನೆಗೆ ಬಂದಾಗ ಎಲ್ಲ ಮತದಾರರು ಲಭ್ಯರಿರದಿದ್ದಲ್ಲಿ ಅವರ ಪರವಾಗಿ ಕುಟುಂಬದ ಬೇರೆ ಹಿರಿಯ ಮತದಾರರು ಸಹಿ ಹಾಕಬಹುದಾಗಿದೆ ಎಂದರು. ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರತೀಕ್ ಬಾಯಲ್, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಸಹಾಯಕ ಕಮಿಷನರ್ ರಶ್ಮಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.ಶೇ 100 ಎನುಮರೇಶನ್ ಫಾರಂ ವಿತರಣೆ: ಉಡುಪಿ ಜಿಲ್ಲೆಯಲ್ಲಿ ಎಸ್‌ಐಆರ್ ವ್ಯವಸ್ಥಿತವಾಗಿ ನಡೆಯುತ್ತಿದ್ದು, ಶೇ 100 ರಷ್ಟು ಗಣತಿ ನಮೂನೆಗಳನ್ನು ವಿತರಿಸಲಾಗಿದೆ. ಶನಿವಾರ ಸಂಜೆ 4 ಗಂಟೆಗವರೆಗೆ 9,40,340 ಗಣತಿ ನಮೂನೆಯನ್ನು ಡಿಜಿಟಲೀಕರಣಗೊಳಿಸಿ ಶೇ. 88.39 ರಷ್ಟು ಪೂರ್ಣಗೊಳಿಸಲಾಗಿದೆ. 14,835 ಮತದಾರರು ಮೃತಪಟ್ಟಿದ್ದು, 14426 ಮತದಾರರು ಖಾಯಂ ಆಗಿ ಬೇರೆ ಕಡೆಗೆ ವರ್ಗಾವಣೆಗೊಂಡಿದ್ದು, 5225 ಹೊಸ ಮತದಾರರು ತಮ್ಮ ದಾಖಲಾತಿ ಮಾಡಿರುತ್ತಾರೆ ಎಂದು ಡಿಸಿ ಸ್ವರೂಪ ಮಾಹಿತಿ ನೀಡಿದರು.