ಹೊಸಪೇಟೆ: ಹಸ್ತಪ್ರತಿಗಳಿರುವ ಮನೆಗಳಿಗೆ ತೆರಳಿ, ಕುಟುಂಬದವರ ಮನವೊಲಿಸಿ ಅವುಗಳನ್ನು ಸಂಗ್ರಹಿಸುವ ಕಾರ್ಯ ಅತ್ಯಂತ ಸವಾಲಿನದ್ದಾಗಿದೆ. ಇಂತಹ ಅಮೂಲ್ಯ ಪರಂಪರೆಯನ್ನು ಉಳಿಸಿ ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಬೇಕಾಗಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಹೇಳಿದರು.ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗ ಹಾಗೂ ನವದೆಹಲಿಯ ಸಂಸ್ಕೃತಿ ಇಲಾಖೆ, ಪುರಾತತ್ತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಂಯುಕ್ತಾಶ್ರಯದಲ್ಲಿ ಜ್ಞಾನ ಭಾರತಂ ಮಿಷನ್ ಅಡಿಯಲ್ಲಿ ಕರ್ನಾಟಕದ ಪ್ರಾಚೀನ ಹಸ್ತಪ್ರತಿಗಳ ಸಮೀಕ್ಷೆ ಹಾಗೂ ಡಿಜಿಟಲೀಕರಣ ವಿಜಯನಗರ ಜಿಲ್ಲೆ ಎನ್ನುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಾರತ ಸರ್ಕಾರವು ಜ್ಞಾನ ಭಾರತಂ ಮಿಷನ್ ಅಡಿಯಲ್ಲಿ ಕರ್ನಾಟಕದ ಪ್ರಾಚೀನ ಹಸ್ತಪ್ರತಿಗಳ ಸಮೀಕ್ಷೆ ಹಾಗೂ ಡಿಜಿಟಲೀಕರಣ ಕಾರ್ಯವನ್ನು ಕೈಗೆತ್ತಿಕೊಂಡಿದ್ದು, ಹಸ್ತಪ್ರತಿಗಳನ್ನು ಸಂಗ್ರಹಿಸುವುದು ಅಷ್ಟು ಸುಲಭದ ಕೆಲಸವಲ್ಲ. ಹಂಪಿ ಕನ್ನಡ ವಿಶ್ವವಿದ್ಯಾಲಯವು ಇಂಥ ಸಾಧನೆಯನ್ನು ಕೈಗೊಂಡಿದೆ. ಈ ಅಮೂಲ್ಯ ಹಸ್ತಪ್ರತಿಗಳನ್ನು ಸಂಗ್ರಹಿಸಿ, ಸಂರಕ್ಷಿಸುವ ಕಾರ್ಯದಲ್ಲಿ ತೊಡಗಿಸಿಕೊಂಡು ಶ್ರಮಿಸಿದವರಿಗೆ ಅವರು ಅಭಿನಂದಿಸಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯವು ಹಸ್ತಪ್ರತಿಗಳ ಡಿಜಿಟಲೀಕರಣಕ್ಕೆ ಸಂಬಂಧಿಸಿದಂತೆ ಕಾರ್ಯವನ್ನು ಆರಂಭಿಸಿದ್ದು, ಭಾರತದಲ್ಲೇ ಮೊಟ್ಟಮೊದಲ ಸಮಗ್ರ ಡಿಜಿಟಲೀಕರಣ ಕಾರ್ಯವು ವಿಜಯನಗರ ಜಿಲ್ಲೆಯ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ನಡೆಯುತ್ತದೆ ಎನ್ನುವ ಆಶಯವಿದೆ ಎಂದು ಅವರು ತಿಳಿಸಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿಂದೆ ಹಸ್ತಪ್ರತಿಗಳನ್ನು ಓದುವುದು ಅಷ್ಟು ಸುಲಭವಾಗಿರಲಿಲ್ಲ. ಆದರೆ ಇಂದು ಬೆಳೆದಿರುವ ತಂತ್ರಜ್ಞಾನದಿಂದ ಅವುಗಳನ್ನು ಸುಲಭವಾಗಿ ಓದಿ ಅಧ್ಯಯನ ಮಾಡುವ ಅವಕಾಶ ದೊರಕಿದೆ ಎಂದು ಅವರು ಹೇಳಿದರು.

ಕನ್ನಡ ಸೇರಿದಂತೆ ವಿವಿಧ ಲಿಪಿಗಳು ಕಾಲದಿಂದ ಕಾಲಕ್ಕೆ ಬದಲಾಗುತ್ತ ಬಂದಿವೆ. ಈ ಕಾರಣದಿಂದ ಹಳೆಯ ಲಿಪಿಯಲ್ಲಿರುವ ಕಡತಗಳು, ಶಾಸನಗಳು, ಹಸ್ತಪ್ರತಿಗಳು ಸೇರಿದಂತೆ ಅನೇಕ ದಾಖಲೆಗಳಲ್ಲಿರುವ ಮಾಹಿತಿಯನ್ನು ಆಧುನಿಕ ತಲೆಮಾರಿಗೆ ಸುಲಭವಾಗಿ ತಲುಪಿಸಲು ಡಿಜಿಟಲೀಕರಣ ಪ್ರಕ್ರಿಯೆ ಆರಂಭಗೊಂಡಿದೆ ಎಂದು ಅವರು ತಿಳಿಸಿದರು.


ಹಳೆಯ ಲಿಪಿಗಳನ್ನು ಓದುವ ಪರಂಪರೆ ಹಿಂದಿನ ಕಾಲದಿಂದಲೂ ಇತ್ತು. ಜನಬಳಕೆಯ ಭಾಷೆಯಲ್ಲಿಯೇ ಶಾಸನಗಳನ್ನು ಹಾಕಿಸಿದ್ದು ಅಶೋಕನ ಕಾಲದಲ್ಲಿ ಅವನ ಆಡಳಿತಕ್ಕೆ ಸಂಬಂಧಿಸಿದ ಶಾಸನಗಳು ಕರ್ನಾಟಕದಲ್ಲಿ ದೊರಕುತ್ತವೆ. ಹಳೆಯ ಲಿಪಿಯಲ್ಲಿ ನಮಗೆ ಗೊತ್ತಿಲ್ಲದೇ ಇರುವ ವಿಷಯವಿದೆ ಎನ್ನುವ ನಂಬಿಕೆ ನಮ್ಮಲ್ಲಿದೆ. ಅವುಗಳನ್ನು ಓದಿ ಅಧ್ಯಯನ ಮಾಡಿದಾಗ ಮಾತ್ರ ಅದರೊಳಗಿನ ಜ್ಞಾನ ಮತ್ತು ಮಾಹಿತಿಯ ಅರಿವು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಪುರಾತತ್ವ ಸಂಗ್ರಹಾಲಯ, ಪರಂಪರೆ ಇಲಾಖೆಯ ನಿರ್ದೇಶಕ ಡಾ.ಆರ್. ಶೇಜೇಶ್ವರ, ಹಸ್ತಪ್ರತಿಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ವೀರೇಶ ಬಡಿಗೇರ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಡಿ. ನಾಗರಾಜ್, ವಿವಿಧ ವಿಭಾಗಗಳ ಡೀನರು, ಬೋಧಕ, ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.