ಸಾರಾಂಶ
ನರಸಿಂಹರಾಜಪುರ, ಕಂದಾಯ ಇಲಾಖೆ ಮಹತ್ವಾಕಾಂಕ್ಷಿ ಯೋಜನೆಯಾದ ಭೂ ಸುರಕ್ಷಾ ಯೋಜನೆಯಿಂದ ಇನ್ನು ಮುಂದೆ ರೈತರ ಎಲ್ಲಾ ದಾಖಲೆಗಳು ಸುಲಭವಾಗಿ ಲಭ್ಯವಾಗುತ್ತದೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.
ತಾಲೂಕು ಕಚೇರಿಯಲ್ಲಿ ಭೂ ಸುರಕ್ಷಾ ಯೋಜನೆ ಉದ್ಘಾಟನೆ । ಹಕ್ಕು ಪತ್ರ ವಿತರಣೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಕಂದಾಯ ಇಲಾಖೆ ಮಹತ್ವಾಕಾಂಕ್ಷಿ ಯೋಜನೆಯಾದ ಭೂ ಸುರಕ್ಷಾ ಯೋಜನೆಯಿಂದ ಇನ್ನು ಮುಂದೆ ರೈತರ ಎಲ್ಲಾ ದಾಖಲೆಗಳು ಸುಲಭವಾಗಿ ಲಭ್ಯವಾಗುತ್ತದೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.
ಶುಕ್ರವಾರ ತಾಲೂಕು ಕಚೇರಿಯಲ್ಲಿ ರೆಕಾರ್ಡ್ ರೂಂ ನಲ್ಲಿ ಭೂ ಸುರಕ್ಷಾ ಯೋಜನೆ ಉದ್ಘಾಟನೆ ಹಾಗೂ ಹಕ್ಕು ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಕ್ರಾಂತಿಕಾರಕ ಬದಲಾವಣೆ ತರುತ್ತಿದ್ದಾರೆ. ಅನೇಕ ಕಡೆ ಭ್ರಷ್ಟರು ಒಟ್ಟಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಜನರಿಂದ ಹಣ ವಸೂಲಿ ಮಾಡುತ್ತಿದ್ದರು. ಮದ್ಯವರ್ತಿಗಳು, ಏಜೆಂಟರು ಸಹ ಮುಗ್ದ ಜನರಿಂದ ದಾಖಲೆ ಮಾಡಿಕೊಡುವುದಾಗಿ ಹೇಳಿ ಲಂಚ ಪಡೆಯುತ್ತಿದ್ದರು. ಇದನ್ನು ತಪ್ಪಿಸಲು ರೈತರಿಗೆ ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು ಕಂಪ್ಯೂಟೀಕರಣ ಮಾಡಲಾಗಿದೆ. ಇನ್ನು ಮುಂದೆ ದಾಖಲೆ ಗಳನ್ನು ತಿದ್ದಲು ಸಾಧ್ಯವಿಲ್ಲ ಎಂದರು.ನಮ್ಮ ಸರ್ಕಾರ ರೈತರಿಗೆ ಅನುಕೂಲ ಮಾಡಿಕೊಟ್ಟಿದೆ. ಭೂ ಸುರಕ್ಷಾ ಯೋಜನೆ ಕೊಠಡಿಯೊಳಗೆ ಸಂಬಂಧ ಪಟ್ಟ ಅಧಿಕಾರಿ ಬಿಟ್ಟರೆ ಬೇರೆಯವರಿಗೆ ಪ್ರವೇಶ ನೀಡಬಾರದು. ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆದರೆ ಕಂದಾಯ ಮಂತ್ರಿಗಳ ಕನಸು ನನಸಾಗುತ್ತದೆ ಎಂದರು.
ಕಳೆದ 3.50 ವರ್ಷದಿಂದ ಹಕ್ಕು ಪತ್ರ ನೀಡಲು ತಾಂತ್ರಿಕ ಕಾರಣದಿಂದ ಸಾಧ್ಯವಾಗಿರಲಿಲ್ಲ. ನಗರ ವ್ಯಾಪ್ತಿ ಹಾಗೂ ಗ್ರಾಮೀಣ ಭಾಗದಲ್ಲಿ ಹಕ್ಕು ಪತ್ರ ನೀಡುವುದು ಸಮಸ್ಯೆಯಾಗಿತ್ತು. ಈಗ ಪರಿಹಾರ ಕಂಡುಕೊಂಡಿದ್ದು ಇಂದು ಹಿಳುವಳ್ಳಿ ಗ್ರಾಮದ 6 ಜನ ಫಲಾನುಭವಿಗಳಿಗೆ 94 ಸಿ ಯಡಿ ಹಕ್ಕು ಪತ್ರ ನೀಡಿದ್ದೇವೆ. ನಗರ ವ್ಯಾಪ್ತಿಯಲ್ಲೂ ಸರ್ಕಾರಿ ಜಮೀನು ಇದ್ದು ಇದನ್ನು ಸರ್ವೆ ಮಾಡಿಸಿ ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿಕೊಂಡವರಿಗೆ 94 ಸಿಸಿ ಅಡಿ ಹಕ್ಕು ಪತ್ರ ನೀಡಬೇಕು ಎಂದು ಸೂಚಿಸಿದರು.ಈ ಸಂದರ್ಭದಲ್ಲಿ ತಹಸೀಲ್ದಾರ್ ತನುಜಾ ಟಿ. ಸವದತ್ತಿ, ಪಟ್ಟಣ ಪಂಚಾಯಿತಿ ಸದಸ್ಯೆ ಜುಬೇದ, ಗ್ರಾಮ ಪಂಚಾಯಿತಿ ಸದಸ್ಯರಾದ ಸುನೀಲ್ ಕುಮಾರ್,ಕೆ. ಗಂಗಾಧರ್, ಬಿನು, ನರೇಂದ್ರ, ಮುಖಂಡರಾದ ಪಿ.ಆರ್.ಸದಾಶಿವ, ಕೆ.ಎಂ. ಸುಂದರೇಶ್,ಸಾಜು, ಕೆ.ಎ.ಅಬೂಬಕರ್, ಬಿ.ಎಸ್.ಸುಬ್ರಮಣ್ಯ ಮತ್ತಿತರರು ಇದ್ದರು.