ಸಾರಾಂಶ
ಇಷ್ಟು ವರ್ಷ ಚನ್ನಪಟ್ಟಣ ಕ್ಷೇತ್ರದ ಕುರಿತು ಕಾಳಜಿ ತೋರದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಇದೀಗ ಕ್ಷೇತ್ರದ ಬಗ್ಗೆ ಕಾಳಜಿ ಮೂಡಿದೆ. ಉಪಚುನಾವಣೆ ಹಿನ್ನೆಲೆಯಲ್ಲಿ ಅವರಿಗೆ ಕ್ಷೇತ್ರದ ನೆನಪಾಗಿದೆ. ಇಷ್ಟು ದಿನ ಕಾಳಜಿ ಎಲ್ಲಿ ಮಾಯವಾಗಿತ್ತು ಎಂದು ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಪ್ರಶ್ನಿಸಿದರು.
ಚನ್ನಪಟ್ಟಣ: ಇಷ್ಟು ವರ್ಷ ಚನ್ನಪಟ್ಟಣ ಕ್ಷೇತ್ರದ ಕುರಿತು ಕಾಳಜಿ ತೋರದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಇದೀಗ ಕ್ಷೇತ್ರದ ಬಗ್ಗೆ ಕಾಳಜಿ ಮೂಡಿದೆ. ಉಪಚುನಾವಣೆ ಹಿನ್ನೆಲೆಯಲ್ಲಿ ಅವರಿಗೆ ಕ್ಷೇತ್ರದ ನೆನಪಾಗಿದೆ. ಇಷ್ಟು ದಿನ ಕಾಳಜಿ ಎಲ್ಲಿ ಮಾಯವಾಗಿತ್ತು ಎಂದು ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಪ್ರಶ್ನಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಎಚ್.ಕೆ.ಪಾಟೀಲ್ ಪ್ರವಾಸೋದ್ಯಮ ಇಲಾಖೆಯಲ್ಲಿ ಭ್ರಷ್ಟಾಚಾರವಾಗಿದೆ ಎಂದು ನಾಲ್ಕು ಜನ ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ. ವಾಲ್ಮೀಕಿ ನಿಗಮದಲ್ಲಿ ೧೮೭ ಕೋಟಿ ಅವ್ಯವಹಾರ ನಡೆಸಿದೆ. ಪ್ರಾಮಾಣಿಕ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕಾದ ಸಿದ್ದರಾಮಯ್ಯ ಭ್ರಷ್ಟಾಚಾರದ ರಕ್ಷಕರಾಗಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ರಾಜ್ಯದ ಹಣ ಲೂಟಿ ಮಾಡಿ ನಕಲಿ ಖಾತೆಗಳಿಗೆ ಜಮೆ ಮಾಡಲಾಗುತ್ತಿದೆ. ಇಲ್ಲಿನ ಹಣ ದೆಹಲಿ, ಹೈದರಾಬಾದ್‌ಗೆ ಹೋಗುತ್ತಿದೆ. ರಾಜ್ಯ ಸರ್ಕಾರ ಎಐಸಿಸಿ ಪಾಲಿಗೆ ಎಟಿಎಂ ಆಗಿ ಹೋಗಿದೆ. ಕಾಂಗ್ರೆಸ್ ಭ್ರಷ್ಟಾಚಾರದಿಂದ ಬೇಸತ್ತಿರುವ ಜನ ಚನ್ನಪಟ್ಟಣದ ಉಪಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಬಂದ ಮೇಲೆ ಭಯೋತ್ಪಾದನೆ ಆರೋಪ ಹೊತ್ತ1600 ಕ್ಕೂ ಹೆಚ್ಚು ಪ್ರಕರಣಗಳನ್ನು ರದ್ದುಗೊಳಿಸಿದ್ದಾರೆ. ಪ್ರತಿಭಟನೆ ನಡೆಸಿದ ರೈತರು, ಕನ್ನಡಪರ ಹೋರಾಟಗಾರರ ಮೇಲಿನ ಪ್ರಕರಣ ಹಿಂದಕ್ಕೆ ಪಡೆಯಲಿಲ್ಲ ಆದರೆ, ಭಯೋತ್ಪಾದನೆ ಆರೋಪ ಹೊತ್ತ ಪ್ರಕರಣಗಳನ್ನು ರದ್ದುಮಾಡಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಸುಮಾರು 900 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ ಐದು ಪೈಸೆ ಪರಿಹಾರವನ್ನು ಸರ್ಕಾರ ನೀಡಿಲ್ಲ. ಹಾಲಿನ ಸಬ್ಸಿಡಿ ಹಣ ನೀಡಿಲ್ಲ, ಅಂಗವಾಡಿ ಕಾರ್ಯಕರ್ತರಿಗೆ ಸಂಬಳ ನೀಡಿಲ್ಲ. ಇದಕ್ಕೆಲ್ಲ ನೀಡಲು ಸರ್ಕಾರದ ಬಳಿ ಹಣವಿಲ್ಲ. ಆಗಾಗಿ ಸರ್ಕಾರ ಎಲ್ಲ ವಸ್ತುಗಳ ಬೆಲೆ ಏರಿಕೆ ಮಾಡುತ್ತಿದೆ. ನೀರಿನ ಬಿಲ್ ಹೆಚ್ಚಳ ಮಾಡಿದ್ದು, ಸಾರಿಗೆ ದರ ಹೆಚ್ಚಳ ಮಾಡಲು ಮುಂದಾಗಿದೆ ಎಂದು ಆರೋಪಿಸಿದರು.
ರೈತ ಮಕ್ಕಳಿಗೆ, ಕಾರ್ಮಿಕರ ಮಕ್ಕಳಿಗೆ ನೀಡುತ್ತಿದ್ದ ಸ್ಕಾಲರ್ ಶಿಪ್ ಅನ್ನು ನಿಲ್ಲಿಸಲಾಗಿದೆ. ಇದು ಜನಸಾಮಾನ್ಯರ ವಿರೋಧಿ ಸರ್ಕಾರವಾಗಿದೆ. ಈ ಸರ್ಕಾರಕ್ಕೆ ಬುದ್ಧಿ ಕಲಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ದೊಡ್ಡಮಟ್ಟದ ಹೋರಾಟ ನಡೆಸಲಿದ್ದೇನೆ ಎಂದು ಎಚ್ಚರಿಕೆ ನೀಡಿದರು.