ಶಿಥಿಲಗೊಂಡ ದೋಟಿಹಾಳ ಸೇತುವೆ, ಸಂಚಾರಕ್ಕೆ ಸಂಚಕಾರ

| Published : May 18 2025, 11:48 PM IST

ಸಾರಾಂಶ

ಇದು ಜಿಲ್ಲಾಮುಖ್ಯ ರಸ್ತೆಯಾಗಿರುವುದರಿಂದ ಹಲವಾರು ವಾಹನಗಳು ಈ ರಸ್ತೆಯ ಮೂಲಕವೇ ಸಂಚರಿಸುತ್ತಿವೆ. ಮಳೆ ಬಂದರೆ ತಗ್ಗು ಯಾವುದು ರಸ್ತೆ ಯಾವುದು ಎಂಬ ಗೊಂದಲ ಉಂಟಾಗುತ್ತದೆ

ಪರಶಿವಮೂರ್ತಿ ದೋಟಿಹಾಳ ಕುಷ್ಟಗಿ

ತಾಲೂಕಿನ ದೋಟಿಹಾಳ (ನವನಗರ) ಬಳಿಯ ಹಳ್ಳದ ಸೇತುವೆ ಸಂಪೂರ್ಣ ಶಿಥಿಲಗೊಂಡು ತಡೆಗೋಡೆ ಕುಸಿದಿದೆ. ಸೇತುವೆ ಮೇಲೆ ಬೃಹತ್‌ ಗುಂಡಿಗಳು ಬಿದ್ದು, ಸಂಚಾರಕ್ಕೆ ಸಂಚಕಾರ ತಂದೊಡ್ಡಿದೆ.

ರಸ್ತೆಯು ದೋಟಿಹಾಳದಿಂದ ಮುದೇನೂರು ಮೂಲಕ ತಾವರಗೇರಾ, ಸಿಂಧನೂರು, ರಾಯಚೂರು ಸಂಪರ್ಕ ಕಲ್ಪಿಸುವ ಜಿಲ್ಲಾ ಮುಖ್ಯ ರಸ್ತೆಯಾಗಿದೆ. ನವನಗರದ ಕಲ್ಲಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಮೇಲೆ ಹತ್ತಾರು ಗುಂಡಿಗಳು ಬಿದ್ದಿವೆ. ಎರಡು ಅಡಿ ಆಳಕ್ಕೆ ಎರಡು ಮೂರು ಬೃಹತ್ ಗುಂಡಿಗಳು ಬಿದ್ದು ಹೊಂಡ ನಿರ್ಮಾಣವಾಗಿದೆ.

ಡಬಲ್ ಗುಂಡಿಗೆ ಬೇಕು: ಇದು ಜಿಲ್ಲಾಮುಖ್ಯ ರಸ್ತೆಯಾಗಿರುವುದರಿಂದ ಹಲವಾರು ವಾಹನಗಳು ಈ ರಸ್ತೆಯ ಮೂಲಕವೇ ಸಂಚರಿಸುತ್ತಿವೆ. ಮಳೆ ಬಂದರೆ ತಗ್ಗು ಯಾವುದು ರಸ್ತೆ ಯಾವುದು ಎಂಬ ಗೊಂದಲ ಉಂಟಾಗುತ್ತದೆ. ರಾತ್ರಿಯ ಹೊತ್ತು ಸಂಚಾರ ಮಾಡುವ ವಾಹನ ಸವಾರರಿಗೆ ಈ ಸೇತುವೆ ಮೇಲಿನ ಗುಂಡಿ ದಾಟಲು ಡಬಲ್ ಗುಂಡಿಗೆ ಬೇಕು.

ಸೇತುವೆಯ ಒಂದು ಬದಿ ಮಳೆಯಿಂದ ಕುಸಿದು ಹೋಗಿದ್ದು, ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. ಕಲಬುರ್ಗಿ ವಿಭಾಗದ ಪಿಡಬ್ಲ್ಯೂಡಿ ಮುಖ್ಯ ಅಭಿಯಂತರು, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಶಾಸಕರು ಹಾಗೂ ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಹೊಸ ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದೊಂದು ದಿನ ದೊಡ್ಡ ಅನಾಹುತವಾಗುವುದು ನಿಶ್ಚಿತ ಎಂದು ಸಾರ್ವಜನಿಕರ ಆಗ್ರಹವಾಗಿದೆ.

ಕಳೆದ ಐದು ವರ್ಷಗಳ ಹಿಂದೆ ಕೋಟ್ಯಂತರ ರು. ವೆಚ್ಚದಲ್ಲಿ ದೋಟಿಹಾಳ ಗ್ರಾಮದಿಂದ ಮುದೇನೂರು ರಸ್ತೆ ಅಗಲೀಕರಣ ಕಾಮಗಾರಿ ನಡೆಸಲಾಗಿದೆ. ಕಾಟಾಚಾರಕ್ಕೆ ಕುಸಿದಿರುವ ಸೇತುವೆ ದುರಸ್ತಿಗೊಳಿಸಲಾಗಿದೆ.

ಹಳೆಯದಾದ ಸೇತುವೆ:ಸುಮಾರು 30 ವರ್ಷಗಳ ಹಿಂದೆ ದೋಟಿಹಾಳದ ನವನಗರ ಕಾಲನಿ ಬಳಿ ಕಲ್ಲಹಳ್ಳಕ್ಕೆ ಅಡ್ಡಲಾಗಿ ಈ ಸೇತುವೆ ನಿರ್ಮಿಸಲಾಗಿದೆ. 50ಕ್ಕೂ ಹೆಚ್ಚು ಹಳ್ಳಿಗಳಿಗೆ ಇದು ಸಂಪರ್ಕ ಕಲ್ಪಿಸುತ್ತದೆ. ಜತೆಗೆ ದೋಟಿಹಾಳದಿಂದ ಮುದೇನೂರು, ಮುದಗಲ್, ತಾವರಗೇರಾ, ಸಿಂಧನೂರು, ಲಿಂಗಸೂರು, ರಾಯಚೂರು, ಬಾದಾಮಿಗೆ ಮಾರ್ಗವಾಗಿದೆ.

ದೋಟಿಹಾಳದಿಂದ ಮುದೇನೂರ ವರೆಗೆ ರಸ್ತೆ ಅಭಿವೃದ್ಧಿಪಡಿಸಿದ್ದಾರೆ. ಸೇತುವೆ ಅಭಿವೃದ್ಧಿಗೆ ಕೈ ಹಾಕಿಲ್ಲ. 10ಕ್ಕೂ ಹೆಚ್ಚು ಸಾರಿಗೆ ವಾಹನ, ನೂರಾರು ಖಾಸಗಿ ವಾಹನಗಳು ನಿತ್ಯ ಸಂಚರಿಸುತ್ತವೆ.

ಈ ಸೇತುವೆ ಅಭಿವೃದ್ಧಿ ಪಡಿಸುವಲ್ಲಿ ಜನಪ್ರತಿನಿಧಿಗಳು ಹಾಗೂ ಸಂಬಂಧಿಸಿದ ಇಲಾಖೆಯವರು ಕಾಳಜಿ ತೋರುತ್ತಿಲ್ಲ, ಮಳೆಗಾಲ ಆರಂಭವಾಗಿದ್ದು ಮಳೆ ಬಂದರೆ ಬೃಹತ್ ಗುಂಡಿ ಬಿದ್ದು ರಸ್ತೆಗಳೆಲ್ಲ ಜಲಾವೃತಗೊಂಡು ಸಂಚಾರಕ್ಕೆ ಹರಸಾಹಸ ಪಡಬೇಕಿದ್ದು ಕೂಡಲೆ ಸೇತುವೆ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಒಂದೂವರೆ ವರ್ಷಗಳ ಹಿಂದೆ ದೋಟಿಹಾಳ (ನವನಗರದ) ಸೇತುವೆ ನಿರ್ಮಾಣಕ್ಕಾಗಿ ಮನವಿ ಸಲ್ಲಿಸಲಾಗಿದೆ. ಇದುವರೆಗೂ ಕಾಮಗಾರಿ ಕೈಗೆತ್ತಿಕೊಂಡಿಲ್ಲ. ಮತ್ತೊಂದು ಸಲ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ ಸಮಸ್ಯೆ ಕುರಿತು ಗಮನಕ್ಕೆ ತರುವ ಕೆಲಸ ಮಾಡುತ್ತೇನೆ ಎಂದು ದೋಟಿಹಾಳ ಗ್ರಾಪಂ ಅಧ್ಯಕ್ಷ ಮಹೇಶ ಕಾಳಗಿ ಹೇಳಿದರು.

ದೋಟಿಹಾಳ ಸೇತುವೆ 30 ವರ್ಷಗಳ ಹಿಂದೆ ಜಿಪಂನವರು ನಿರ್ಮಾಣ ಮಾಡಿದ್ದಾರೆ. ಸ್ಥಳಕ್ಕೆ ಸಿಬ್ಬಂದಿ ಕಳುಹಿಸುವ ಮೂಲಕ ವರದಿ ಆಧರಿಸಿ ಕ್ರಮಕ್ಕೆ ಮುಂದಾಗುತ್ತೇನೆ ಎಂದು ಎಇಇ ಪಿಡಬ್ಲ್ಯೂಡಿ ಕುಷ್ಟಗಿ ಸುಧಾಕರ ಕಾತರಕಿ ಹೇಳಿದರು.